ಕೊಪ್ಪಳ: ಸಚಿವ ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಬಿಜೆಪಿ ಅಭಿವೃದ್ಧಿ ಮಾಡಿಲ್ಲ. ಸಚಿವ ಶಿವರಾಜ ತಂಗಡಗಿ ತಮ್ಮ ಸ್ವಾರ್ಥಕ್ಕಾಗಿ ಹೇಳಿಕೆ ನೀಡಿಲ್ಲ. ಎರಡು ಕೋಟಿ ಉದ್ಯೋಗ ಕೊಟ್ಟಿದ್ದೀರಾ ಎಂದು ತಂಗಡಗಿ ಅವರು ಕೇಳಿದ್ದಾರೆ. ಉದ್ಯೋಗ ಕೇಳಿದರೆ ಪಕೋಡಾ ಮಾರಾಟ ಮಾಡಿ ಎಂದು ಬಿಜೆಪಿ ಹೇಳುತ್ತಿದೆ. ಮೋದಿ ಮೋದಿ ಎನ್ನುವ ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯು ಸಚಿವ ತಂಗಡಗಿ ಅವರ ಹೇಳಿಕೆ ತಿರುಚಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕೃಷ್ಣಾ ಇಟ್ಟಂಗಿ ಹೇಳಿದರು.
ಕೊಪ್ಪಳದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಬಿಜೆಪಿ ಕೆಲವು ವಿಚಾರವನ್ನು ಧರ್ಮದ ಲೇಪನ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಸಿ.ಟಿ ರವಿ ಅವರು ಸಚಿವರ ಹುಟ್ಟಿನ ಬಗ್ಗೆ ಅತ್ಯಂತ ಹೀನಾಯ ಹೇಳಿಕೆ ನೀಡಿದ್ದಾರೆ. ಇದು ಸಿ.ಟಿ ರವಿ ಅವರ ಸಂಸ್ಕೃತಿಯೇ? ನಾವು ಬಿಜೆಪಿಗರು ಸಂಸ್ಕತವಂತರು ಎಂದೆನ್ನುವ ಬಿಜೆಪಿಗೆ ಇದೇನಾ ಸಂಸ್ಕೃತಿ ಎಂದು ಪ್ರಶ್ನಿಸಿದರು.
ಸಚಿವ ಶಿವರಾಜ ತಂಗಡಗಿ ಅವರು ಮೋದಿ ಬಗ್ಗೆ ಅವಹೇಳನ ಮಾತನಾಡಿದ್ದಾರಾ? ಈಚೆಗೆ ಕೊಪ್ಪಳದಲ್ಲಿ ಬಿಜೆಪಿ ಎಂಎಲ್ ಸಿ ಹೇಮಲತಾ ಅವರದ್ದೇ ಕಾರ್ಯಕರ್ತನಿಗೆ ಬೂಟಿನಲ್ಲಿ ಹೊಡೆಯುವೆ ಎಂದಿದ್ದರು. ಅದನ್ನು ಬಿಜೆಪಿ ಏಕೆ ಖಂಡಿಸಲಿಲ್ಲ. ಪ್ರಮೋದ್ ಮುತಾಲಿಕ್ ಅವರು ಮೋದಿ ಹೆಸರು ಹೇಳಿ ಮತ ಕೇಳಿದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದರು. ಬಿಜೆಪಿ ಅದನ್ನು ಏಕೆ ಖಂಡಿಸಲಿಲ್ಲ. ಶಿವರಾಜ ತಂಗಡಗಿ ದಲಿತ ಸಚಿವರು, ಅದಕ್ಕೆ ಅವರ ಬಾಯಿ ಮುಚ್ಚುವ ಕೆಲಸ ನಡೆದಿದೆ. ಇದನ್ನು ಕಾಂಗ್ರೆಸ್ ತೀವ್ರ ಖಂಡಿಸುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಕೃಷ್ಣಾರಡ್ಡಿ ಗಲಬಿ ಮಾತನಾಡಿ, ಬಿಜೆಪಿ ರೈತ ಪರ ಯೋಜನೆ ತಂದಿಲ್ಲ. ಸಚಿವ ತಂಗಡಗಿ ಅವರ ಭಾಷಣದಲ್ಲಿ ಅಶ್ಲೀಲ ಪದ ಬಳಕೆ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿ ನಾವು ಆಡು ಭಾಷೆಯಲ್ಲಿ ಮಾತನಾಡುತ್ತೇವೆ. ಮೋದಿ ಮೋದಿ ಎನ್ನುವ ಯುವಕರಿಗೆ ಬುದ್ದಿ ಹೇಳಿ ಎಂದೆನ್ನುತ್ತೇವೆ. ಆ ದಾಟಿಯಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಅವರ ಹೇಳಿಕೆಯಲ್ಲಿ ದುರುದ್ದೇಶವಿಲ್ಲ. ಚುನಾವಣೆ ವೇಳೆ ಬಿಜೆಪಿ ಧರ್ಮ, ದೇವರು ಮುಂದೆ ತರುತ್ತಾರೆ. ಬಿಜೆಪಿ ಇದೇ ರೀತಿ ನಡೆ ತೋರಿದರೆ ಕಾಂಗ್ರೆಸ್ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಧರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ, ಅಕ್ಬರ್ ಪಾಷಾ ಉಪಸ್ಥಿತಿ ಇದ್ದರು.