ಕೊಪ್ಪಳ: ಉತ್ತರ ಕರ್ನಾಟಕದ ಕುಂಭಮೇಳವೆಂದೇ ಖ್ಯಾತಿ ಪಡೆದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ವಿವಿಧೆಡೆಯಿಂದ ಭಕ್ತರು ದಾಸೋಹ ಮಂಟಕ್ಕೆ ಧವಸ, ಧಾನ್ಯ ಸೇರಿದಂತೆ ರೊಟ್ಟಿ ತಂದು ಕೊಡುತ್ತಿದ್ದಾರೆ. ಅಜ್ಜನ ಜಾತ್ರೆಗೆ 7 ಕ್ವಿಂಟಲ್ ಉಪ್ಪಿನಕಾಯಿ ಚಟ್ನಿ ತಂದು ಅರ್ಪಿಸಿದ್ದಾರೆ.
ಜಾತ್ರಾ ಮಹೋತ್ಸವ ಜ. 22ರಿಂದ ಆರಂಭವಾಗಲಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತ ಸಮೂಹಕ್ಕೆ ದಾಸೋಹ ಸೇವೆ ಕಲ್ಪಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಇಲಾಖೆ ಸಿಪಿಐ ಭೀಮಣ್ಣ ಸೂರಿ ಅವರು 7 ಕ್ವಿಂಟಲ್ ಉಪ್ಪಿನ ಕಾಯಿ ಚಟ್ನಿ ಕೊಟ್ಟು ಭಕ್ತಿಯ ಸೇವೆ ಅರ್ಪಿಸಿದ್ದಾರೆ. ಇನ್ನೂ ಮಹಾದಾಸೋಹಕ್ಕೆ ಗಂಗಾವತಿ ತಾಲೂಕಿನ ಜೀರಾಳ್‌ಕಲ್ಗುಡಿ ಗ್ರಾಮದ ಭಕ್ತರು 51 ಚೀಲ ಭತ್ತ, 1 ಪ್ಯಾಕೆಟ್ ಅಕ್ಕಿ, 4000 ರೊಟ್ಟಿ, ನೆರೆಬೆಂಚಿ ಗ್ರಾಮದ ಭಕ್ತರಿಂದ 500 ರೊಟ್ಟಿಗಳನ್ನು ಸಮರ್ಪಿಸಿದ್ದಾರೆ. ಇನ್ನುಳಿದ ಗ್ರಾಮಗಳಿಂದಲೂ ದವಸ-ಧಾನ್ಯ ಬರಲಾರಂಭಿಸಿವೆ.
ಅಂಗಡಿಗಳ ವ್ಯವಸ್ಥೆ: ಗವಿಮಠದ ಆವರಣದ ಮುಂಭಾಗದಲ್ಲಿನ 12 ಎಕರೆ ವಿಸ್ತಾರದ ಮೈದಾನದಲ್ಲಿ 900-1000 ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಈ ವಿಶಾಲ ಆವರಣದಲ್ಲಿ ವೈವಿಧ್ಯಮಯ ಅಂಗಡಿ-ಮುಂಗಟ್ಟುಗಳು ತೆರೆದುಕೊಳ್ಳಲಿವೆ. ಅಂಗಡಿಗಳಿಗೆ ತೆರಳುವ ಮಹಾದ್ವಾರಗಳ ನಿರ್ಮಾಣದ ಕಾರ್ಯವೂ ಭರದಿಂದ ಸಾಗಿದೆ. ಗವಿಮಠದ ಸಂಸ್ಥಾಪಕ ಶಿವಯೋಗಿಗಳಾದ ರುದ್ರಮುನಿ ಮಹಾಸ್ವಾಮಿಗಳು, ಶಿವಶಾಂತವೀರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿವೆ. ಜಾತ್ರೆ ಆವರಣದ ಮಳಿಗೆಗಳಲ್ಲಿ 12 ಸಾಲುಗಳಿದ್ದು, ಪ್ರತಿ ಸಾಲುಗಳ ಮಧ್ಯೆ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ.
ಸ್ವಚ್ಛತೆಗೆ ಕೈ ಜೋಡಿಸಿದ ನಗರಸಭೆ: ಜಾತ್ರಾ ಮಹೋತ್ಸವದ ಅಂಗವಾಗಿ ನಗರಸಭೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಲ್ಲಿ ಗವಿಮಠ ಜೊತೆ ಕೈ ಜೋಡಿಸಿದೆ. ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಜೊತೆಗೆ ಅಂಗಡಿಕಾರರಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಯ್ದುಕೊಳ್ಳಲು ಈ ಮಳಿಗೆಗಳ ಉಸ್ತುವಾರಿ ಸಮಿತಿ ನಿರ್ದೇಶಿಸಲಾಗಿದೆ.
ಮಠದ ಸೇವೆಯಲ್ಲಿ ಭಕ್ತಾದಿಗಳು: ಜಾತ್ರೆಯ ಅಂಗವಾಗಿ ಎರಡು ತಿಂಗಳ ಕಾಲ ಮಠದ ಸೇವೆಯಲ್ಲಿ ಯತ್ನಟ್ಟಿ ಭಕ್ತಾದಿಗಳು ನಿರತರಾಗಿದ್ದಾರೆ. ಮಠದ ಆವರಣ, ಕೆರೆ ದಂಡೆ, ಕೈಲಾಸ ಮಂಟಪ, ಆರ್ಯುವೇದ ಕಾಲೇಜು, ಪಬ್ಲಿಕ್ ಶಾಲೆ, ಗವಿಸಿದ್ಧೇಶ್ವರ ಪ್ರೌಢಶಾಲೆ, ಬಿ.ಇಡಿ ಕಾಲೇಜು ಹಿಂಭಾಗ, 2000 ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಹತ್ತಿರ, ವಿದ್ಯಾರ್ಥಿನಿಯರ ವಸತಿ ನಿಲಯದ ಹತ್ತಿರ, ಪದವಿ, ಪಪೂ ಕಾಲೇಜು ಆವರಣ, ಮಠದ ಸಂಪೂರ್ಣ ಗುಡ್ಡ, ಮಹಾದಾಸೋಹದ ಮಂಟಪ, ಒಟ್ಟಾರೆ ಈಡಿ ಮಠದ ಎಲ್ಲಾ ಪ್ರದೇಶವನ್ನು ಸ್ವಚ್ಛಗೊಳಿಸುವ, ನೆಲದ ತಗ್ಗು ದಿನ್ನೆಗಳನ್ನು ಸಮತಟ್ಟು ಮಾಡಿದ್ದಾರೆ. ನಿರಂತರ 30 ಭಕ್ತರು ಸೇವೆ ಸಲ್ಲಿಸಿದ್ದಾರೆ.
ಪ್ರಬಂಧ ಸ್ಪರ್ಧೆ: ಜಾತ್ರಾ ಮಹೋತ್ಸವದ ಅಂಗವಾಗಿ ನೇತ್ರದಾನದ ಜಾಗೃತಿ ಹಿನ್ನೆಲೆಯಲ್ಲಿ ‘ಅಂಧತ್ವ ಕಾರಣ ಮತ್ತು ಪರಿಹಾರೋಪಾಯಗಳು’ ಎಂಬ ವಿಷಯದ ಮೇಲೆ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಶನಿವಾರ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿತು. ಪ್ರಬಂಧ ಸ್ಪರ್ಧೆಯಲ್ಲಿ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. 74 ಪ್ರಾಥಮಿಕ ಹಾಗೂ ಪ್ರೌಡಶಾಲಾ ವಿದ್ಯಾಥಿಗಳು ಹಾಗೂ 15 ಕಾಲೇಜು ಮಟ್ಟದ ವಿದ್ಯಾರ್ಥಿಗಳು ಪ್ರಬಂಧ ಬರೆದರು.