ಕಾರಟಗಿ: ಕೊರೊನಾ ಎರಡನೇ ಅಲೆಯ ಕರಿಛಾಯೆ ಭತ್ತ ಖರೀದಿ ಮೇಲೂ ಆವರಿಸಿದೆ. ಭತ್ತದ ಬೆಲೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಭತ್ತವನ್ನು ಕೇಳುವವರೇ ಇಲ್ಲದಂತಾಗಿದೆ. ಭತ್ತದ ಬೆಳೆ ಕೈಸೇರಲು ನೀರಿಗಾಗಿ ಪರಿತಪಿಸುತ್ತಿದ್ದ ರೈತರು ಈಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕೆಲ ದಿನಗಳಿಂದ ಭತ್ತ ಕಟಾವು ಭರದಿಂದ ಸಾಗಿದೆ. ರೈತರು ಭತ್ತ ಕಟಾವು ಮಾಡಿ ಒಣಗಿಸಿಟ್ಟಿದ್ದಾರೆ.
ಕೆಲವರು ಭತ್ತದ ರಾಶಿಯನ್ನು ಬಯಲಲ್ಲಿ ಒಣಗಿಸಲು ಬಿಟ್ಟಿದ್ದು, ಅಕಾಲಿಕ ಮಳೆಯಿಂದಾಗಿ ಭತ್ತವನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಆದರೂ ಉತ್ತಮ ಬೆಲೆ ಸಿಗುವುದೆಂಬ ವಿಶ್ವಾಸದಲ್ಲಿದ್ದಾರೆ ರೈತರು. ಇನ್ನೇನು ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾಗಲೇ ಕೊರೊನಾ 2ನೇ ಅಲೆ ವ್ಯಾಪಕವಾಗಿದ್ದು, ಸರಕಾರ ಕರ್ಫ್ಯೂ ಘೋಷಿಸಿದೆ. ಇದರಿಂದಾಗಿ ವರ್ತಕರು ಕುಂಟು ನೆಪ ಹೇಳಿ ಭತ್ತ ಖರೀದಿ ಗೆ ಹಿಂದೇಟು ಹಾಕುತ್ತಿದ್ದಾರೆ.
ಕಳೆದ 10-15 ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದೆ. ಆಗಾಗ ಮಳೆ ಸುರಿಯುತ್ತಿದೆ. ಇನ್ನು ಸರಕಾರ ಆರಂಭಿಸಿದ ಭತ್ತ ಖರೀದಿ ಕೇಂದ್ರಗಳಲ್ಲಿ ರೈತರು ಹಲವಾರು ನಿಯಮಗಳಡಿ ಭತ್ತ ನೀಡಬೇಕು. ಇದರ ತೊಂದರೆ ಬೇಡ ಎಂದು ನೇರವಾಗಿ ಮಧ್ಯವರ್ತಿಗಳ ಮೂಲಕ ಹಾಗೂ ಅಂಗಡಿಗಳಿಗೆ ಭತ್ತ ಕೊಡುತ್ತಿದ್ದಾರೆ. ಭತ್ತ ಆರ್‌ಎನ್‌ಆರ್ 1200 ದಿಂದ 1250 ರೂ., ಅಂಕುರ ಸೋನಾ 1250-1270 ರೂ., ಭತ್ತ 64-1100 ರಿಂದ 1150 ಮಾರುಕಟ್ಟೆಯ ಈಗಿನ ಬೆಲೆಯಾಗಿದೆ. 8-10 ದಿನಗಳ ಹಿಂದೆ ಇದ್ದ ಬೆಲೆ ಈಗಿಲ್ಲ. ಏಕಾಏಕಿ 100- ರಿಂದ 150 ರೂ. ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ರೈತರು.