ಕೊಪ್ಪಳ: ಪ್ರತಿ ವರ್ಷವೂ ಶಾಲಾ ಆರಂಭದ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದ ಮಕ್ಕಳ ಶಿಕ್ಷಣ ಹಕ್ಕು (ಆರ್‌ಟಿಇ) ಈ ವರ್ಷ ಸದ್ದೇ ಇಲ್ಲದಂತಾಗಿದೆ. ಜಿಲ್ಲೆಗೆ ಬರಿ 310 ಸೀಟುಗಳು ಹಂಚಿಕೆಯಾಗಿದ್ದು, ಮೊದಲ ಹಂತದಲ್ಲಿ 172 ಸೀಟುಗಳ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಕೇವಲ 26 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದಾರೆ.
ಹೌದು.. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಉದ್ದೇಶದಿಂದ ಹಾಗೂ ತನಗೆ ಆರ್‌ಟಿಇನಡಿ ಖಾಸಗಿ ಶಾಲೆಗಳಿಗೆ ನೀಡುತ್ತಿದ್ದ ವಿದ್ಯಾರ್ಥಿಗಳ ಪರ ಅನುದಾನ ಹೊರೆಯಾದ ಹಿನ್ನೆಲೆಯಲ್ಲಿ ಆರ್‌ಟಿಇಗೆ ಹಲವು ನಿಯಮ ಜಾರಿ ಮಾಡಿ ನಿಯಂತ್ರಣ ಹೇರಿದೆ. ಈ ಮೊದಲು ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ದಾಖಲಾತಿ ಇಳಿಮುಖವಾಗುತ್ತಿತ್ತು. ಮಕ್ಕಳು ದಾಖಲಾತಿ ಪಡೆಯುತ್ತಿರಲಿಲ್ಲ. ಪಾಲಕರು ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ಆಪಾದನೆ ಮಾಡುತ್ತಲೇ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದರು.
ಆ ಬೆಳವಣಿಗೆ ನಡೆಯುತ್ತಿದ್ದಾಗಲೇ ಖಾಸಗಿ ಶಾಲೆಗಳು ಪಾಲಕರಿಂದ ಭರ್ಜರಿ ಶುಲ್ಕ ಪಡೆದು ಶಿಕ್ಷಣ ನೀಡುವಂತ ಪರಿಸ್ಥಿತಿ ಎದುರಾಯಿತು. ಇದರಿಂದ ಬೇಸತ್ತ
ಪಾಲಕರು ಶುಲ್ಕಕ್ಕೆ ನಿಯಂತ್ರಣ ಹೇರಬೇಕೆಂಬ ಕೂಗು ಸರ್ಕಾರದ ಮಟ್ಟದಲ್ಲಿ ಕೇಳಿ ಬಂದಿದ್ದರಿಂದ ಸರ್ಕಾರ ಗಂಭೀರ ಚಿಂತನೆ ನಡೆಸಿ, ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳು ಅಭ್ಯಾಸ ಮಾಡಬೇಕು. ಅವರಿಗೆ ಶಾಲೆಗೆ ಪ್ರವೇಶಾತಿಗೆ ಶೇ.25 ಸೀಟು ಮೀಸಲಿಡಲು ಮುಂದಾಗಿ ಶಿಕ್ಷಣ ಹಕ್ಕು ಕಾಯ್ದೆ ಜಾರಿ ಮಾಡಿತು. ಜೊತೆಗೆ ಬಡ ಮಕ್ಕಳಿಗೆ ಶಿಕ್ಷಣದ ಶುಲ್ಕವನ್ನ ಸರ್ಕಾರವೇ ಭರಿಸುವ ಕುರಿತು ನಿಯಮ ಜಾರಿಗೆ ತಂದಿತು.
ಇದರಿಂದ ಗ್ರಾಮೀಣ, ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಶಾಲೆಗಳಿಗೆ ಸರ್ಕಾರದ ಅನುದಾನವು ವರದಾನವಾಯಿತು. ಇದನ್ನು ಮನಗೊಂಡ ಕೆಲವರು ಓಣಿಗೊಂದರಂತೆ ಖಾಸಗಿ ಶಾಲೆಗಳನ್ನು ತೆರೆದು ಆರ್‌ಟಿಇನಡಿ ಸೀಟುಗಳನ್ನು ಪಡೆಯಲಾರಂಭಿಸಿದ್ದರಿಂದ ಸರ್ಕಾರಕ್ಕೂ ವಿದ್ಯಾರ್ಥಿಗಳ ಪರವಾದ ಶುಲ್ಕ ಭರಿಸಲು ಹೊರೆಯಾಗಿದ್ದರಿಂದ ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಆರ್‌ಟಿಇಗೆ ಭರ್ಜರಿ ಸರ್ಜರಿ ಮಾಡಿದೆ. ಕಳೆದ ವರ್ಷದಿಂದ ಗ್ರಾಮ, ನಗರವನ್ನು ಒಂದೊಂದು ಯುನಿಟ್‌ಗಳನ್ನಾಗಿ ಮಾಡಲಾಗಿದೆ. ಕೆಲವೊಂದು ನಿಯಮಗಳನ್ನು ಜಾರಿ ಮಾಡಿದ್ದರಿಂದ ಗ್ರಾಮೀಣ, ನಗರ ಪ್ರದೇಶದಲ್ಲಿ ಆರ್‌ಟಿಇ ಅಡಿಯೇ ನಡೆಯುತ್ತಿದ್ದ ಶಾಲೆಗಳು ಇದರಿಂದ ಹೊರ ನಡೆದಿವೆ. ಹೀಗಾಗಿ ಸರ್ಕಾರಕ್ಕೂ ಇದರ ಹೊರೆ ತಪ್ಪಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಈ ಪ್ರಯತ್ನ ಮಾಡಿದೆಯೆಂದಾದರೂ ಹಣದ ಹೊರೆ ತಪ್ಪಿಸಲು ಸರ್ಕಾರ ಈ ರೀತಿಯ ಯೋಚನೆ ರೂಪಿಸಿ ಆರ್‌ಟಿಇಗೆ ಮೂಗುದಾರ ಹಾಕಿ ಎಲ್ಲ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಮುಂದಾಗುತ್ತಿದೆ.
ಈ ಹಿಂದಿನ ವರ್ಷಗಳಲ್ಲಿ 2 ಸಾವಿರಕ್ಕೂ ಅಧಿಕ ಸೀಟುಗಳು ಜಿಲ್ಲೆಗೆ ಹಂಚಿಕೆಯಾಗುತ್ತಿದ್ದವು. ಈ ವರ್ಷ ಬರಿ 310 ಸೀಟುಗಳು ಮಾತ್ರ ಹಂಚಿಕೆಯಾಗಿವೆ. ಗಂಗಾವತಿಯಲ್ಲಿ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಕುಷ್ಟಗಿಯಲ್ಲಿ 6 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕೊಪ್ಪಳಕ್ಕೆ 45 ಸೀಟು, ಯಲಬುರ್ಗಾಕ್ಕೆ 17 ಸೀಟು ಹಂಚಿಕೆಯಾದರೂ ಇನ್ನೂ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿಲ್ಲ. ಒಟ್ಟಿನಲ್ಲಿ ಆರ್‌ಟಿಇ ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ರೀತಿಯಲ್ಲಿ ಗಗನ ಕುಸುಮ ತೋರಿಸಿದೆ. ಮೊದಲು ಆರ್‌ಟಿಇ ಆರಂಭಿಸಿದ್ದು ಸರ್ಕಾರವೇ, ನಂತರ ನಿಯಂತ್ರಣ ಹೇರಿದ್ದೂ ಸರ್ಕಾರವೇ, ಹೀಗಾಗಿ ಸರ್ಕಾರದ ಹೊಯ್ದಾಟದ ನೀತಿಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.
.ದತ್ತು ಕಮ್ಮಾರ