Advertisement
ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಅಧಿಕಾರವಧಿಯಲ್ಲಿ ಕೃಷ್ಣಾ ಬಿ ಸ್ಕೀಂ, ನವಲಿ ಜಲಾಶಯ, ಸಿಂಗಟಾಲೂರು ಏತ ನೀರಾವರಿ ಪೂರ್ಣಗೊಳಿಸುವುದು. ಹೊಸ ವಿವಿ, ವಿಮಾನ ನಿಲ್ದಾಣ ಸೇರಿದಂತೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳ ಆರಂಭದ ಬಗ್ಗೆ ಜಿಲ್ಲೆಯ ಜನತೆ ನಿರೀಕ್ಷೆ ಹೊಂದಿದ್ದಾರೆ.
Related Articles
Advertisement
ನವಲಿ ಜಲಾಶಯ ನಿರ್ಮಿಸಿ:
ತುಂಗಭದ್ರಾ ಹೂಳಿಗೆ ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರವೇ ನಿರ್ಧರಿಸಿದೆ. ಮಾಜಿ ಸಿಎಂ ಬಿಎಸ್‌ವೈ ಅವರೇ ಈಚೆಗೆ 20 ಕೋಟಿ ರೂ. ಬಿಡುಗಡೆ ಮಾಡಿ ಡಿಪಿಆರ್ ಸಿದ್ಧಪಡಿಸಲು ಸಮ್ಮತಿ ನೀಡಿದ್ದರು. ಅದಕ್ಕೂ ಸಾವಿರಾರು ಕೋಟಿ ಅನುದಾನದ ಅಗತ್ಯವಿದೆ. ಇಲ್ಲಿ ಜಲಾಶಯ ನಿರ್ಮಾಣಗೊಂಡರೆ 33 ಟಿಎಂಸಿ ನೀರನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗಲಿದೆ. ಈ ಭಾಗವೂ ನೀರಾವರಿ ಸೌಲಭ್ಯ ಕಾಣಲಿದೆ. ಜನರ ಜೀವನೋಪಾಯಕ್ಕೂ ಅನುಕೂಲವಾಗಲಿದೆ. ನೀರಾವರಿ ವ್ಯಾಜ್ಯ ಇತ್ಯರ್ಥಪಡಿಸಿ ಈ ಭಾಗದ ಜನರಿಗೆ ನೀರು ಹರಿಸಬೇಕಿದೆ. ಇದಕ್ಕೆ ಕನಿಷ್ಟ 6 ಸಾವಿರ ಕೋಟಿ ಅನುದಾನ ಬೇಕಾಗಿದೆ. ನೂತನ ಸಿಎಂ ನೀರಾವರಿ ಬಗ್ಗೆ ಹೆಚ್ಚು ಅನುಭವ ಹೊಂದಿದ್ದು, ತಕ್ಷಣ ಆರಂಭಿಕ ಸಾವಿರ ಕೋಟಿ ಅನುದಾನ ಘೋಷಣೆ ಮಾಡಬೇಕಿದೆ.
ಕೆರೆ ತುಂಬಿಸಲಿ:
ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿವೆ. ಈ ಹಿಂದೆ ಕೆರೆ ತುಂಬಿಸುವ ಯೋಜನೆಯಲ್ಲಿ ಕೆಲವೊಂದು ಕೆರೆಗೆ ನೀರು ಹರಿಸಲಾಗಿದೆಯೇ ವಿನಃ ಶಾಶ್ವತ ಯೋಜನೆ ರೂಪಿಸಬೇಕಿದೆ. ಜಲ ಸಂರಕ್ಷಣೆಯ ಜೊತೆಗೆ ಕೆರೆಗೆ ನೀರು ತುಂಬಿಸುವ ಯೋಜನೆಗೂ ಅನುದಾನ ಘೋಷಣೆ ಮಾಡಬೇಕಿದೆ. ಈಗಾಗಲೇ ಘೋಷಣೆ ಮಾಡಿದ ಯೋಜನೆಗಳಿಗೂ ವೇಗ ಕೊಡಬೇಕಿದೆ. ಇದಲ್ಲದೇ, ಮುಂಡರಗಿ ಕುಡಿಯುವ ನೀರಿನ ಯೋಜನೆ, ಕುಷ್ಟಗಿ-ಯಲಬುರ್ಗಾ ತಾಲೂಕಿನ 700 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬಹದ್ದೂರು ಬಂಡಿ ಏತ ನೀರಾವರಿ, ಬೆಟಗೇರಿ-ಅಳವಂಡಿ ಏತ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ಹೆಚ್ಚಿನ ಒಲವು ತೋರಬೇಕಿದೆ.
ತೋಟಗಾರಿಕೆ ಪಾರ್ಕ್, ಹೊಸ ವಿವಿ:
ಮಾಜಿ ಸಿಎಂ ಬಿಎಸ್‌ವೈ ಅವರ ಬಜೆಟ್ ನಲ್ಲಿ ಕನಕಗಿರಿಗೆ ನೂತನ ತೋಟಗಾರಿಕೆ ಪಾರ್ಕ್ ಘೋಷಣೆ ಮಾಡಿದ್ದಾರೆ. ಆದರೆ ಅನುದಾನವನ್ನೇ ಕೊಟ್ಟಿಲ್ಲ. ಅದಕ್ಕೆ ಅನುದಾನ ಮೀಸಲಿಡಬೇಕಿದೆ. ಇದರಿಂದ ಬರದ ನಾಡಿನ ಪ್ರದೇಶ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ. ಇನ್ನೂ ಜಿಲ್ಲೆಗೆ ಹೊಸ ವಿವಿ ಸ್ಥಾಪನೆ ಪ್ರಯತ್ನ ನಡೆದಿದ್ದು, ಅದಕ್ಕಾಗಿ ನೂರಾರು ಎಕರೆ ಪ್ರದೇಶದಲ್ಲಿ ಜಾಗ ಗುರುತಿಸುವ ಅಗತ್ಯವಿದೆ.