ಕೊಪ್ಪಳ: ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ ಮಾಡಬೇಕು ಎಂದೆನ್ನುವ ಆಸೆ ಯಾರಿಗೆ ಇರಲ್ಲ ಹೇಳಿ.. ಎಲ್ಲರೂ ನಾವು ವಿಮಾನ ಹತ್ತಬೇಕು ಎನ್ನುವ ಆಸೆ ಇರುತ್ತೆ. ಅಂಥ ಮಕ್ಕಳ ಆಸೆಯನ್ನು ಕೊಪ್ಪಳ ತಾಲೂಕು ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪೂರೈಸಲು ಮುಂದಾಗಿದೆ. ಡಿ.06ರಂದು 30 ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಮಾಡಿಸಲು ಸಜ್ಜಾಗಿದೆ.
Advertisement
ಹೌದು..ತಾಲೂಕಿನ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಂತಹ ಹೊಸ ಪ್ರಯತ್ನಕ್ಕೆ ಮುಂದಾಗಿ ಸರ್ಕಾರಿ ಶಾಲೆ ಮಕ್ಕಳೂ ಯಾರಿಗೂ ಕಡಿಮೆ ಇಲ್ಲ ಎಂಬ ಸಂದೇಶ ಕೊಟ್ಟಿದೆ. ಅಲ್ಲದೇ ರಾಜ್ಯದಲ್ಲಿಯೇ ಸರ್ಕಾರಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸ ಕೈಗೊಂಡಿರುವ 2ನೇ ಶಾಲೆ ಇದಾಗಲಿದೆ.
ಮಕ್ಕಳಿಗೆ ವಿಮಾನಯಾನ ಪ್ರವಾಸ ಮಾಡಿಸೋಣ ಎಂದು ನಿರ್ಧಾರ ಮಾಡಿ ಮೊದಲು ಶಾಲೆ ಪಾಲಕರ ಸಭೆ ನಡೆಸಿ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಪಾಲಕರೂ ಸಹ ಸಮ್ಮತಿ ನೀಡಿ ನಾವು ವಿಮಾನ ಪ್ರವಾಸ ಮಾಡಿಲ್ಲ. ಕನಿಷ್ಟ ನಮ್ಮ ಮಕ್ಕಳಾದರೂ ವಿಮಾನ ಹತ್ತಿ ಬರಲಿ ಎಂದು ಪ್ರೋತ್ಸಾಹ ನೀಡಿದ್ದಾರೆ.
Related Articles
Advertisement
ಉಡಾನ್ ಯೋಜನೆಯಡಿ ರಿಯಾಯತಿ: ಪ್ರಸ್ತುತ ಸಾಮಾನ್ಯ ವ್ಯಕ್ತಿಗಳು ಜಿಂದಾಲ್-ಹೈದ್ರಾಬಾದ್ಗೆ ವಿಮಾನದಲ್ಲಿ ಪ್ರವಾಸ ಮಾಡಬೇಕೆಂದರೆ ವಿಮಾನದಲ್ಲಿ ಓರ್ವ ವ್ಯಕ್ತಿಗೆ 5-6 ಸಾವಿರ ರೂ.ಟಿಕೆಟ್ ದರವಿದೆ. ಆದರೆ ಇದನ್ನು ಮೊದಲೇ ಪ್ಲಾನ್ ಮಾಡಿದ್ದ ಶಾಲೆ ಶಿಕ್ಷಕರು ಅಕ್ಟೋಬರ್ನಲ್ಲಿ ಜಿಂದಾಲ್ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ. ಅವರಿಗೆ ಉಡಾನ್ ಯೋಜನೆಯಡಿ ಶಾಲಾ ಮಕ್ಕಳಿಗೆ ಶೇ.50ರ ರಿಯಾಯತಿಯಲ್ಲಿ ಪ್ರವಾಸ ಮಾಡುವ ಮಾಹಿತಿ ದೊರೆತಿದೆ. ಇದರಿಂದ ಪ್ರತಿ ವಿದ್ಯಾರ್ಥಿಗಳಿಗೆ 2500 ರೂ. ಶುಲ್ಕ ನಿಗದಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಪ್ರವಾಸಕ್ಕೆ ಗ್ರಾಪಂ, ಕಂಪನಿ ಸಾಥ್ : ಪ್ರತಿ ವಿದ್ಯಾರ್ಥಿಯು ಮೂರು ದಿನದ ಪ್ರವಾಸಕ್ಕೆ 2500 ರೂ.ಯಾವುದಕ್ಕೂ ಸಾಲಲ್ಲ. ಆದರೆ ಮಕ್ಕಳಿಗೆ ಹೊರೆಯಾಗದಿರಲಿ ಎಂದು ನಿರ್ಧರಿಸಿ ಶಾಲೆಯ 6 ಶಿಕ್ಷಕರು ಹೆಚ್ಚುವರಿ ವೆಚ್ಚ ಭರಿಸುವ ಜೊತೆಗೆ ಬೇವಿನಹಳ್ಳಿ ಗ್ರಾಪಂ, ಸ್ಥಳೀಯ ಕಿರ್ಲೋಸ್ಕರ್ ಕಂಪನಿ, ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಕೆಲವು ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆ ಮಕ್ಕಳು ವಿಮಾನದಲ್ಲಿ ಪ್ರವಾಸ ಮಾಡಲು ಸಹಕಾರ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ಹೊರೆಯಾಗದಂತೆ ಶಾಲೆಯು ಸಹ ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡಿದೆ. ಏಲ್ಲೆಲ್ಲಿ ಪ್ರವಾಸ ನಡೆಯಲಿದೆ?: ಶಾಲೆ ಮಕ್ಕಳು ಲಿಂಗದಳ್ಳಿಯಿಂದ ಡಿ.06 ರಂದು ತೋರಣಗಲ್ ಜಿಂದಾಲ್ಗೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಂದಾಲ್ನಿಂದ ಹೈದ್ರಾಬಾದ್ಗೆ ವಿಮಾನದಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಲಿದ್ದಾರೆ. ಹೈದ್ರಾಬಾದ್ನಲ್ಲಿ ವಿವಿಧ ಪ್ರವಾಸಿ ಸ್ಥಳಗಳ ವೀಕ್ಷಣೆ ಮಾಡಲಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ನಂತರ ಅಲ್ಲಿಂದ ರೈಲಿನ ಸ್ಲೀಪರ್ ಕೋಚ್ನ ಮೂಲಕ ವಿಜಯಪುರಕ್ಕೆ ಆಗಮಿಸಿ ವಿವಿಧ ತಾಣ ಭೇಟಿ ಕೊಡಲಿದ್ದಾರೆ. ಅಲ್ಲಿಂದ ಆಲಮಟ್ಟಿಗೆ ಟಿಟಿ ವಾಹನದಲ್ಲಿ ಪ್ರವಾಸ ಮಾಡಿ ನಂತರ ಆಲಮಟ್ಟಿಯಿಂದ ಡಿ.09ಕ್ಕೆ ಕೊಪ್ಪಳಕ್ಕೆ ರಾತ್ರಿ ಆಗಮಿಸಲಿದ್ದಾರೆ. ಸರ್ಕಾರಿ ಶಾಲೆಯ 30 ವಿದ್ಯಾರ್ಥಿಗಳ ಜೊತೆಗೆ 6 ಜನ ಶಿಕ್ಷಕರು, 6 ಜನ ಎಸ್ಡಿಎಂಸಿ ಪ್ರತಿನಿಧಿಗಳು ವಿಮಾನದಲ್ಲಿ ಪ್ರವಾಸ ಮಾಡಲಿದ್ದಾರೆ. ಒಟ್ಟು 42 ಸೀಟ್ ಗಳನ್ನು ಈಗಾಗಲೇ ಬುಕ್ ಮಾಡಿದ್ದು ವಿಮಾನಯಾನ ಶೈಕ್ಷಣಿಕ ಪ್ರವಾಸಕ್ಕೆ ಇಲಾಖೆಯಿಂದಲೂ ಅನುಮತಿ ಪಡೆದು ಪ್ರವಾಸಕ್ಕೆ ಶಾಲೆಯು ಸಜ್ಜಾಗಿದೆ. ಈ ಹಿಂದೆ ಬೆಳಗಾವಿಯ ಶಿಕ್ಷಕನೋರ್ವ ನಿವೃತ್ತಿ ಬಳಿಕ ಸರ್ಕಾರಿ ಶಾಲೆ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಮಾಡಿಸಿದ್ದರು.ಈಗ ಲಿಂಗದಳ್ಳಿ ಶಾಲೆ ವಿಮಾನದಲ್ಲಿ ಪ್ರವಾಸ ಮಾಡಿಸುತ್ತಿರುವ ರಾಜ್ಯದ 2ನೇ ಶಾಲೆಯಾಗಲಿದೆ. ಮಕ್ಕಳು ವಿಮಾನ ನೋಡುತ್ತಿದ್ದರು. ಅವರನ್ನು ವಿಮಾನದಲ್ಲೇ ಪ್ರವಾಸ ಮಾಡಿಸಲು ಮುಂದಾಗಿದ್ದೇವೆ. ಅವರಿಗೂ ಖುಷಿ ತರಿಸಿದೆ. ಪಾಲಕರ ಸಹಕಾರ ಗ್ರಾಪಂ, ಕಂಪನಿ ಸೇರಿ ಸರ್ವರ ಸಹಕಾರವೂ ನಮಗೆ ದೊರೆತಿದೆ.
●ವಿಶ್ವೇಶ್ವರಯ್ಯ , ಲಿಂಗದಳ್ಳಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ನಮ್ಮೂರ ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರ ಸಹಕಾರದಿಂದ ಡಿ.06 ರಂದು ವಿಮಾನದಲ್ಲಿ ಮಕ್ಕಳನ್ನು ಪ್ರವಾಸ ಮಾಡಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಇದಕ್ಕೆ ಎಲ್ಲರ ಸಹಕಾರವೂ ದೊರೆತಿದೆ. ಇಡೀ ಶಿಕ್ಷಕರ ತಂಡವು ಶ್ರಮಿಸುತ್ತಿದೆ. ಪಾಲಕರಾದ ನಮಗೂ ತುಂಬ ಹೆಮ್ಮೆಯಿದೆ.
●ಹನುಮಂತಪ್ಪ,
ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪಾಲಕರು ■ ದತ್ತು ಕಮ್ಮಾರ