Advertisement

ಕೊಪ್ಪಳ: ಅನ್ಯರಾಜ್ಯದ 296 ಜನರಿಗೆ ಸಾಂಸ್ಥಿಕ ಕ್ವಾರಂಟೈನ್‌

10:08 AM Jun 15, 2020 | Suhan S |

ಕೊಪ್ಪಳ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಸದ್ದಿಲ್ಲದೇ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳಲಾರಂಭಿಸಿವೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದ ಜನರಿಂದಲೇ ಸೋಂಕು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಅನ್ಯ ರಾಜ್ಯಗಳಿಂದ ಆಗಮಿಸಿದ ಜನರ ಮೇಲೆ ಹೆಚ್ಚು ನಿಗಾ ಇರಿಸಿದೆ. ವಿವಿಧೆಡೆ ಸಾಂಸ್ಥಿಕ ಕ್ವಾರೆಂಟೈನ್‌ ಕೇಂದ್ರಗಳನ್ನೂ ಆರಂಭಿಸಿದೆ.

Advertisement

ಕೊಪ್ಪಳ ಜಿಲ್ಲೆಯು ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಅತ್ಯಂತ ಕಟ್ಟುನಿಟ್ಟಿನ ಪಾಲನೆ ಮಾಡಿದ್ದರಿಂದ ಒಂದೇ ಒಂದು ಸೋಂಕು ಕಾಣಿಸಿಕೊಳ್ಳಲಿಲ್ಲ. ಗ್ರೀನ್‌ ವಲಯದಲ್ಲಿಯೇ ಜಿಲ್ಲೆಯು ಮುಂದುವರೆದಿತ್ತು. ಆದರೆ ಲಾಕ್‌ ಡೌನ್‌ ತೆರೆದುಕೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಲಾರಂಭಿಸಿದೆ. ಹಾಗಾಗಿ ಅಂತಹ ಜನರ ಮೇಲೆ ನಿಗಾ ಇರಿಸಿ ಸಾಂಸ್ಥಿಕ ಕ್ವಾರೆಂಟೈನ್‌ ಮಾಡಲಾಗುತ್ತಿದೆ.

ಅನ್ಯ ರಾಜ್ಯದಿಂದ 296 ಜನಕ್ಕೆ  ಕ್ವಾರೆಂಟೈನ್‌: ಲಾಕ್‌ಡೌನ್‌ ತೆರೆದ ಬಳಿಕ ಅನ್ಯ ರಾಜ್ಯಗಳಲ್ಲಿ ಸಿಲುಕಿದ್ದ ಜಿಲ್ಲೆಯ ಜನರು ಕ್ರಮೇಣ ಆಗಮಿಸುತ್ತಿದ್ದಾರೆ. ಕೆಲವರು ಸರ್ಕಾರದ ಸಾರಿಗೆ ಸೌಲಭ್ಯ ಪಡೆದು ಬಂದರೆ, ಇನ್ನುಳಿದವರು ಖಾಸಗಿ ವಾಹನದಲ್ಲಿ ಆಗಮಿಸಿದ್ದು, ಇನ್ನು ಕೆಲ ಜನರು ಅನ್ಯ ಮಾರ್ಗದ ಮೂಲಕ ಆಗಮಿಸಿ ಹಳ್ಳಿಗಳನ್ನು ಸೇರಿದ್ದಾರೆ. ಇದು ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆ ತಂದಿಟ್ಟಿದೆ. ಹಾಗಾಗಿ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿಗೆ ನಿಗಾ ವಹಿಸುವಂತೆಯೂ ಸೂಚನೆ ನೀಡಿದೆ. ಪ್ರಸ್ತುತ ಅನ್ಯ ರಾಜ್ಯಗಳಿಂದ ಜಿಲ್ಲೆಗೆ 296 ಜನರು ಆಗಮಿಸಿದ್ದು, ಅವರ ಮೇಲೆ ನಿಗಾ ಇರಿಸಿರುವ ಜಿಲ್ಲಾಡಳಿತ ಅವರಿಗೆ ವಿಶೇಷ ಕ್ವಾರೆಂಟೈನ್‌ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ.

ಮಹಾರಾಷ್ಟ್ರದಿಂದ ಬಂದವರೇ ಹೆಚ್ಚು: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿತರ ಸ್ಥಿತಿಗೆ ಇಡೀ ದೇಶವೇ ಬೆಚ್ಚಿ ಬೀಳುವಂತಾಗಿದೆ. ಅಂತಹ ರಾಜ್ಯದಿಂದಲೇ ಜಿಲ್ಲೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸದ್ಯ ಮಹಾರಾಷ್ಟ್ರದಿಂದ ಬಂದ ಜಿಲ್ಲೆಯ 282 ಜನರಿಗೆ ಜಿಲ್ಲೆಯ 11 ಕಡೆ ಸಾಂಸ್ಥಿಕ ಕ್ವಾರೆಂಟೈನ್‌ ಕೇಂದ್ರಗಳನ್ನು ಸ್ಥಾಪನೆ ಮಾಡಿ ಅಲ್ಲಿ ಅವರಿಗೆ ಕ್ವಾರೆಂಟೈನ್‌ ಮಾಡುತ್ತಿದೆ. ರಾಜ್ಯ ಸರ್ಕಾರವು ಮೊದಲೆಲ್ಲ ಅನ್ಯ ಜಿಲ್ಲೆ, ರಾಜ್ಯಗಳಿಂದ ಬಂದವರಿಗೆ ಹೋಂ ಕ್ವಾರೆಂಟೈನ್‌ ಮಾಡಲು ಸೂಚಿಸುತ್ತಿತ್ತು. ಆದರೆ ಎಲ್ಲೆಡೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅವರಿಗೆ ಸಾಂಸ್ಥಿಕ ಕ್ವಾರೆಂಟೈನ್‌ ಮಾಡಲು ಮುಂದಾಗಿದೆ.

ಯಾವ ಕ್ವಾರಂಟೈನ್‌ನಲ್ಲಿ ಎಷ್ಟು ಜನ? : ಕೊಪ್ಪಳದ ಹರ್ಷಾ ಲಾಡ್ಜ್ನಲ್ಲಿ 10 ಜನ, ತಳಕಲ್‌ ಎಂಡಿಆರ್‌ಎಸ್‌ನಲ್ಲಿ 17 ಜನ, ಕೊಪ್ಪಳದ ನಾರಾಯಣ ರೆಸಿಡೆನ್ಸಿಯಲ್ಲಿ ಇಬ್ಬರು, ಗಂಗಾವತಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಒಬ್ಬರು, ಗಂಗಾವತಿ ಪಾರ್ಥಾ ಲಾಡ್ಜ್- 16 ಜನ, ಹೇಮಗುಡ್ಡದ ಎಂಡಿಆರ್‌ಎಲ್‌ನಲ್ಲಿ 19 ಜನ, ಕುಷ್ಟಗಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 18 ಜನ, ಯಲಬುರ್ಗಾ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 09 ಜನ, ತಳಕಲ್‌ ಮೊರಾರ್ಜಿ ವಸತಿ ನಿಲಯದಲ್ಲಿ 74 ಜನ, ಕುದರಿಮೋತಿ ಮೊರಾರ್ಜಿ ವಸತಿ ಶಾಲೆಯಲ್ಲಿ 39 ಜನ ಸೇರಿದಂತೆ ಒಟ್ಟು 296 ಜನರನ್ನು ಸಾಂಸ್ಥಿಕ ಕ್ವಾರೆಂಟೈನ್‌ ಮಾಡಲಾಗುತ್ತಿದೆ. ಇದರಲ್ಲಿ ಮಹಾರಾಷ್ಟ್ರದಿಂದ ಬಂದ 282 ಜನ, ರಾಜಸ್ಥಾನದಿಂದ ಬಂದ 08 ಜನ, ಗುಜರಾತನಿಂದ ಬಂದ ಒಬ್ಬರು, ತಮಿಳುನಾಡಿನಿಂದ ಇಬ್ಬರು ಹಾಗೂ ಇತರೆ ಮೂವರು ಇದ್ದಾರೆ.

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next