Advertisement

ನಾಳೆಯಿಂದ ಕೊಪ್ಪಳ ಜಿಲ್ಲೆ ಸಂಪೂರ್ಣ ಲಾಕ್‌

07:07 PM May 16, 2021 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮೇ 17ರಿಂದ 21ರವರೆಗೆ ಐದು ದಿನಗಳ ಕಾಲ ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ, ಇತರೆ ಎಲ್ಲವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾದ್ಯಂತ ಕೋವಿಡ್‌-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅ ಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮೇ 31ರವರೆಗೆ ಜಿಲ್ಲೆಯಲ್ಲಿ ಮದುವೆ ಮತ್ತು ಸಭೆ-ಸಮಾರಂಭ ನಿಷೇಧಿಸಲಾಗಿದೆ. ಮೆಡಿಕಲ್‌ ಕಾಲೇಜಿನ ಅಂತಿಮ ವರ್ಷದ ಹಾಗೂ ಇತರ ವಿದ್ಯಾರ್ಥಿಗಳನ್ನು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ನಿಯೋಜಿಸಲು ಸಂಬಂಧಪಟ್ಟ ಮೆಡಿಕಲ್‌ ಕಾಲೇಜಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು. ರೂಪಾಂತರ ವೈರಸ್‌ ಹೇಗೆ ನಮಗೆ ಹರಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್‌, ಔಷಧ ಹಾಗೂ ಇತರೆ ಯಾವುದೇ ಸಮಸ್ಯೆಗಳಿದ್ದರೆ ಮುಂಚಿತವಾಗಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಅದಕ್ಕೆ ಅವರೇ ಹೊಣೆ ಹೊರಬೇಕಾಗುತ್ತದೆ. ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಕೊರೊನಾ ಕೇಸ್‌ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಿಲ್ಲೆಗಳಲ್ಲಿ ಇದರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ 3,945 ಜನರು ಹೋಮ್‌ ಐಸೋಲೇಷನ್‌ನಲ್ಲಿದ್ದು, ಯಾವುದೇ ಕಾರಣಕ್ಕೂ ಇನ್ಮುಂದೆ ಜನರು ಹೋಮ್‌ ಐಸೋಲೇಷನ್‌ನಲ್ಲಿ ಇರುವಂತಿಲ್ಲ. ಮುಂದಿನ ಎರಡು ದಿನಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗೆ ಹೋಗಬೇಕು. ಸೋಂಕಿತರು ತಮ್ಮ ಚಿಕ್ಕ ಚಿಕ್ಕ ಮನೆಗಳಲ್ಲಿ ಇರುವುದರಿಂದ ಇತರರಿಗೂ ಸೋಂಕು ಹರಡುವ ಸಂಭವವಿರುತ್ತದೆ ಎಂದರು. ಜಿಲ್ಲೆಯಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪೊಲೀಸರು, ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಹೆಚ್ಚು ವಾಹನಗಳು ಮತ್ತು ಜನರು ತಿರುಗಾಡುತ್ತಿದ್ದಾರೆ. ಪೊಲೀಸರು ಏನೂ ಮಾಡುತ್ತಿದ್ದೀರಿ ಎಂದು ಎಸ್‌ಪಿ ಅವರನ್ನು ಪ್ರಶ್ನಿಸಿ, ತಮಗೆ ಅವಶ್ಯಕತೆ ಇದ್ದರೇ ಗೃಹ ರಕ್ಷಕ ದಳ ಹಾಗೂ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಿ ಎಂದು ಸೂಚನೆ ನೀಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ವಿಎ, ಪಿಡಿಒ, ತಾಲೂಕು ಹಾಗೂ ಜಿಲ್ಲಾಮಟ್ಟದ ಅ ಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು.ಅಂದಾಗ ಮಾತ್ರ ಕೊರೊನಾ ನಿಯಂತ್ರಣ ಮಾಡಬಹುದು. ವೈದ್ಯಕೀಯ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳು ಸೇರಿ ಒಟ್ಟು 290 ಜನ ಸಿಬ್ಬಂದಿಗಳಿದ್ದು, ಇವರೆಲ್ಲರನ್ನೂ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಕಳುಹಿಸಿ, ಗ್ರಾಮೀಣ ಭಾಗದ ರೋಗಿಗಳನ್ನು ಆರೈಕೆ ಮಾಡಬೇಕು. ಜಿಲ್ಲಾಧಿಕಾರಿ ಗ್ರಾಮೀಣ ಪ್ರದೇಶಕ್ಕೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಅಧಿ ಕಾರಿಗಳಿಗೆ ತಿಳಿಸಿದರು. ಸಂಸದ ಸಂಗಣ್ಣ ಕರಡಿ ಮಾತನಾಡಿ, ಜಿಲ್ಲೆಯ ವಸತಿ ನಿಲಯಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಗಳನ್ನಾಗಿ ಮಾಡಬೇಕು. ಹೋಮ್‌ ಐಸೋಲೇಷನ್‌ ನಲ್ಲಿ ಇರುವವರನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಜಿಲ್ಲೆಯಲ್ಲಿರುವ ಕೈಗಾರಿಕಾ ಕಂಪನಿಗಳ ಮನವೊಲಿಸಿ, ಜಿಂದಾಲ್‌ ಮಾದರಿಯಲ್ಲಿ ಆಕ್ಸಿಜನ್‌ ಬೆಡ್‌ ಆಸ್ಪತ್ರೆ ಆರಂಭಿಸುವಂತೆ ಸೂಚನೆ ನೀಡಬೇಕು ಎಂದು ಸಭೆಗೆ ತಿಳಿಸಿದರು.

Advertisement

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರಾಯಚೂರಿನ ಮಸ್ಕಿ, ಸಿಂಧನೂರು, ಮಾನ್ವಿ, ಬಳ್ಳಾರಿಯ ಕಂಪ್ಲಿ, ಹೊಸಪೇಟೆಯವರು ಗಂಗಾವತಿ ತಾಲೂಕು ಆಸ್ಪತ್ರೆಗೆ ಬಂದು ಆಕ್ಸಿಜನ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ನಮಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಬೆಡ್‌ ಭರ್ತಿಯಾಗಿದ್ದು, ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಅವರಿಗೆ ಅಲ್ಲಿಯೇ ಆಕ್ಸಿಜನ್‌ ಕೊಟ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಕುಕನೂರಿನಲ್ಲಿ 20 ಹಾಸಿಗೆ ಆಸ್ಪತ್ರೆ ಮಾಡುತ್ತಿದ್ದೀರಿ. ಆದರೆ ಅವುಗಳನ್ನು ಆಕ್ಸಿಜನ್‌ ಬೆಡ್‌ಗಳಾಗಿ ಪರಿವರ್ತಿಸುವ ಪ್ರಯತ್ನ ಮಾಡಿದರೆ ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ, ಶಾಸಕ ರಾಘವೇಂದ್ರ ಹಿಟ್ನಾಳ್‌, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಎಸ್‌ಪಿ ಟಿ. ಶ್ರೀಧರ್‌, ಎಡಿಸಿ ಎಂ.ಪಿ. ಮಾರುತಿ, ಡಿಎಚ್‌ಒ ಡಾ| ಟಿ. ಲಿಂಗರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next