Advertisement

ಸಹಕಾರಿಗಳ ಪುನಶ್ಚೇತನಕ್ಕೆ ಬೇಕಿದೆ ಸಹಕಾರ

07:39 PM Nov 14, 2019 | Naveen |

„ದತ್ತು ಕಮ್ಮಾರ

Advertisement

ಕೊಪ್ಪಳ: ಸಹಕಾರಿ ಕ್ಷೇತ್ರ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾದಂತೆ ಎನ್ನುವ ಮಾತಿದೆ. ಆದರೆ ವಾಣಿಜ್ಯ ಬ್ಯಾಂಕ್‌ಗಳ ವಹಿವಾಟಿನ ಆರ್ಭಟ ಹಾಗೂ ತಾಂತ್ರಿಕತೆಯ ಕೊರತೆಯಿಂದ ಸಹಕಾರಿ ಬ್ಯಾಂಕ್‌ಗಳು ನರಳಾಡುತ್ತಿವೆ. ಜಿಲ್ಲೆಯಲ್ಲಿ ಒಟ್ಟು 766 ಸಹಕಾರಿ ಸಂಸ್ಥೆಗಳಿದ್ದು, 573 ಸಂಸ್ಥೆಗಳು ಮಾತ್ರ ತಮ್ಮ ಆರ್ಥಿಕತೆ ಸ್ಥಿರತೆ ಕಾಪಾಡಿಕೊಂಡಿವೆ.

ರೈತರ ಹಾಗೂ ಬ್ಯಾಂಕ್‌, ಸರ್ಕಾರದ ನಡುವೆ ಸಂಪರ್ಕದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಶೋಚನೀಯ ಸ್ಥಿತಿ ಎದುರಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ಕೆಲ ಸಹಕಾರಿ ಸಂಸ್ಥೆಗಳು ಆಧುನಿಕತೆಗೆ ತಕ್ಕಂತೆ ತಮ್ಮ ಕಾರ್ಯ ವಿಧಾನಗಳನ್ನು ಬದಲಾಯಿಸಿಕೊಂಡು ವಾಣಿಜ್ಯ ಬ್ಯಾಂಕ್‌ಗಳಿಗೂ ಪೈಪೋಟಿ ನೀಡುತ್ತಿರುವುದು ಗಮನಾರ್ಹ ಸಂಗತಿ. ಸ್ವಾತಂತ್ರ್ಯ ನಂತರದಲ್ಲಿ ಕೆಳ ಹಾಗೂ ಮಧ್ಯಮ ವರ್ಗದ ಜನತೆಗೆ ಈ ಸಹಕಾರಿ ಸಂಸ್ಥೆಗಳೇ ಆಧಾರವಾಗಿದ್ದವು.

ವಾಣಿಜ್ಯ ಬ್ಯಾಂಕ್‌ಗಳು ಎಂದರೆ ಶ್ರೀಮಂತರ ಸ್ವತ್ತು ಎನ್ನುವಂಥ ಸ್ಥಿತಿಯಿತ್ತು. ಜನರಲ್ಲಿ ಸಹಕಾರಿ ಮನೋಭಾವ, ಉಳಿತಾಯ ಯೋಜನೆಗಳಿಂದ ಜನರ ಭವಿಷ್ಯದ ಬದುಕು ಕಟ್ಟಿಕೊಳ್ಳಲು ತುಂಬಾಉಪಕಾರಿಯಾಗಿದ್ದವು. ಅಂತಹ ಸಹಕಾರಿ ಸಂಸ್ಥೆಗಳು ವಾಣಿಜ್ಯ ಬ್ಯಾಂಕ್‌ ಆರ್ಭಟಕ್ಕೆ ನಲುಗಿ ತಮ್ಮ ಕಾರ್ಯ ಚಟುವಟಿಕೆಯನ್ನೇ ನಿಲ್ಲಿಸುತ್ತಿವೆ.

119 ಸಹರ್ಕಾರಿಗಳ ಕಾರ್ಯ ಸ್ಥಗಿತ: ಜಿಲ್ಲೆಯಲ್ಲಿ 766 ಸಹಕಾರಿ ಸಂಸ್ಥೆಗಳಿವೆ. ಈ ಪೈಕಿ 573 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂದರೆ, 119 ಸಂಸ್ಥೆಗಳು ಆರ್ಥಿಕ ಸಮಸ್ಯೆಯಿಂದ ಸ್ಥಗಿತವಾಗಿದ್ದರೆ, ಯಾವುದೇ ಕಾರ್ಯ ನಿರ್ವಹಿಸದೇ 74 ಸಂಸ್ಥೆಗಳು ಸಮಾಪನೆಗೊಂಡಿವೆ. ಜಿಲ್ಲೆಯ ಹಲಗೇರಿ, ಹೇರೂರು, ಬೆಟಗೇರಿ, ಘಟ್ಟಿರಡ್ಡಿಹಾಳ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ನೀಡಿದ ಸಾಲ ವಾಪಸ್‌ ಪಡೆಯದೇ ಇರುವುದು, ಹಣಕಾಸು ವಹಿವಾಟಿನಲ್ಲಿ ಅವ್ಯವಹಾರ ಹಾಗೂ ಸಿಬ್ಬಂದಿಗಳ ಕೊರತೆ ಸಂಸ್ಥೆ ಮುಚ್ಚುವುದಕ್ಕೂ ಕಾರಣವಾಗಿವೆ.

Advertisement

ಪೈಪೋಟಿ ನೀಡುತ್ತಿವೆ ಕೆಲ ಸಂಸ್ಥೆಗಳು: ತಾಲೂಕಿನ ಕಿನ್ನಾಳ ಸಹಕಾರಿ ಸಂಸ್ಥೆ ಆಧುನಿಕತೆಗೆ ತಕ್ಕಂತೆ ಸಹಕಾರಿ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಇದು ವಾಣಿಜ್ಯ ಬ್ಯಾಂಕ್‌ಗೂ ಯಾವುದೇ ಕಡಿಮೆ ಇಲ್ಲ ಎನ್ನುವಂತೆ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಇಲ್ಲಿ ಯುವಕರಿಂದ ಹಿಡಿದು ವೃದ್ಧೆಯರೂ ತಮ್ಮ ಸ್ವಂತಿಕೆಯಿಂದಲೇ ವಹಿವಾಟು ನಡೆಸಿ ಗಮನ ಸೆಳೆಯುತ್ತಿದ್ದಾರೆ. ಕಿನ್ನಾಳದ ಸಹಕಾರಿ ಸಂಸ್ಥೆ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ.

ಸುಸ್ಥಿತಿಯಲ್ಲಿವೆ ಕೆಲ ಸಂಸ್ಥೆಗಳು: ಕೊಪ್ಪಳ ನಗರದಲ್ಲಿನ ಟಿಎಪಿಸಿಎಂಎಸ್‌, ಶಿವಪುರ, ಕುಕನೂರು, ಮೆಣದಾಳ ಸೇರಿ ಕೆಲವೊಂದು ಸಂಸ್ಥೆಗಳು ವಾಹನ, ಆಭರಣ ಮೇಲಿನ ಸಾಲ ನೀಡುವ ಮೂಲಕ ಸುಸ್ಥಿತಿಯಲ್ಲಿದ್ದು, ಕಾರ್ಯ ನಿರ್ವಹಿಸಿ ಜನರ ಗಮನ ಸೆಳೆದಿವೆ. ಆಧುನಿಕತೆಗೆ ತಕ್ಕಂತೆ ಗಣಕೀಕರಣಕ್ಕೆ ಬಂದಿವೆ. ಸಾಲ, ಸೌಲಭ್ಯ ಸೇರಿದಂತೆ ಇತರೆ ಯೋಜನೆಗಳೂ ಡಿಜಿಟಲೀಕರಣ ವ್ಯಾಪ್ತಿಯಲ್ಲಿರುವುದರಿಂದ ಕಿನ್ನಾಳ ಸೇರಿದಂತೆ ಕೆಲವು ಸಹಕಾರಿ ಸಂಸ್ಥೆಗಳು ಎಲ್ಲರ ಗಮನ ಸೆಳೆದಿವೆ.

ಪುನಶ್ಚೇತನಕ್ಕೆ ಪ್ರಯತ್ನ: ಇಂದು ಪ್ರತಿಯೊಬ್ಬ ರೈತನೂ ಸಾಲ ಸೇರಿದಂತೆ ಪ್ರತಿಯೊಂದು ಸೌಲಭ್ಯ ಪಡೆಯಲು ವಾಣಿಜ್ಯ ಬ್ಯಾಂಕ್‌ಗಳ ಮೆಟ್ಟಿಲೇರುತ್ತಿದ್ದಾನೆ. ಸಾಲದ ಹೊರೆ ಬೀಳುತ್ತಿದ್ದಂತೆ ಸಂಕಷ್ಟಕ್ಕೆ ಸಿಲುಕಿ ತೊಂದರೆ ಎದುರಿಸುತ್ತಿದ್ದಾನೆ. ಹೀಗಾಗಿ ಸಹಕಾರಿ ಸಂಸ್ಥೆಗಳ ಕಾರ್ಯವೂ ತುಂಬಾ ಕಡಿಮೆ ಇದೆ. ಸರ್ಕಾರ ಸಹಕಾರಿ ಸಂಸ್ಥೆಗಳಿಗೆ ಪುನಶ್ಚೇತನ ನೀಡಲು ಬೀಜ, ಗೊಬ್ಬರ, ಔಷ ಧಿ ಸೇರಿದಂತೆ ಕೆಲ ಯೋಜನೆಗಳನ್ನು ಸಹಕಾರಿ ಸಂಸ್ಥೆಗಳ ಮೂಲಕವೇ ಜಾರಿ ಮಾಡುತ್ತಿದ್ದು, ರೈತರು ಪುನಃ ಸಹಕಾರಿ ಸಂಸ್ಥೆಗಳತ್ತ ಮುಖ ಮಾಡುವಂತಾಗಿದೆ. ಇತ್ತೀಚೆಗೆ ಸರ್ಕಾರದಿಂದ ಖರೀದಿಸುವ ಮೆಕ್ಕೆಜೋಳ, ತೊಗರೆ ಸೇರಿದಂತೆ ಇತರೆ ಧಾನ್ಯ ಹೊಣೆಯನ್ನು ಸಹಕಾರಿ ಸಂಸ್ಥೆಗಳಿಗೂ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next