ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಎ.16 ರಂದು ಕಾರ್ಯಕರ್ತರ ಸಭೆ ಕರೆದಿದ್ದು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂಡಾಯವೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರ್ಯಕರ್ತರ ಅಭಿಪ್ರಾಯ ಪಡೆದು ಸಂಸದ ಸಂಗಣ್ಣ ಕರಡಿ ಯಾವ ನಿರ್ಧಾರ ತಳೆಯುತ್ತಾರೆ ಎನ್ನುವ ಕುತೂಹಲ ಕೊಪ್ಪಳ ಕ್ಷೇತ್ರದಲ್ಲಿ ಮೂಡಿದೆ.
ಹೈಕಮಾಂಡ್ ಮಟ್ಟದಲ್ಲಿ ಸಂಗಣ್ಣ ಕರಡಿ ತಮಗೇ ಕೊಪ್ಪಳ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಸಂಸದ ಸಂಗಣ್ಣ ಕರಡಿ ಜೊತೆಗೆ ಸಿ.ವಿ. ಚಂದ್ರಶೇಖರ ಸಹ ಟಿಕೆಟ್ ಗೆ ತೀವ್ರ ಪೈಪೋಟಿ ನಡೆಸಿದ್ದಾರೆ.
ಬಿಜೆಪಿ ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಹೆಸರು ಇನ್ನೂ ಘೋಷಣೆ ಮಾಡಿಲ್ಲ. ಬಿಜೆಪಿ ಹೈಕಮಾಂಡ್ ನಡೆಗೆ ಆಂತರಿಕ ಅಸಮಾಧಾನ ಹೊಂದಿರುವ ಸಂಗಣ್ಣ ಕರಡಿ ಅವರು ಪಕ್ಷೇತರ ಅಥವಾ ಜೆಡಿಎಸ್ ನಿಂದಲೂ ಸ್ಪರ್ಧೆ ಮಾಡುವ ಪರ್ಯಾಯ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕೊಪ್ಪಳ ದಲ್ಲಿ ಕಾರ್ಯಕರ್ತರು, ಮುಖಂಡರು ನನಗೆ ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ಅಲ್ಲದೇ ಜಿಲ್ಲೆಯ ಇತರೆ ನಾಲ್ಕೂ ಕ್ಷೇತ್ರದ ಅಭ್ಯರ್ಥಿಗಳು ಸಂಸದರಿಗೆ ಟಿಕೆಟ್ ಕೊಟ್ಟರೆ ನಮ್ಮ ಕ್ಷೇತ್ರದಲ್ಲಿ ಅನುಕೂಲವಾಗುತ್ತದೆ. ಹಾಗಾಗಿ ಅವರಿಗೆ ಟಿಕೆಟ್ ಕೊಡಬೇಕು ಎಂದು ರಾಜ್ಯದ ನಾಯಕರ ಮುಂದೆ ಒತ್ತಾಯ ಮಾಡಿದ್ದಾರೆ. ಹಾಗಾಗಿ ನಾನು ಈ ಬಾರಿ ಟಿಕೆಟ್ ಕೇಳಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.