Advertisement
ಉಡುಪಿ ಜಿಲ್ಲೆಯ ಪ್ರಸಿದ್ಧ ಚಾರಣ ಸ್ಥಳಗಳಲ್ಲಿ ಕುಂದಾಪುರದ ಶಿರೂರು ಸಮೀಪದ ಕೂಸಳ್ಳಿ ಜಲಪಾತವೂ ಒಂದಾಗಿದ್ದು, ಆಕರ್ಷಕವಾಗಿದೆ. ದಟ್ಟ ಕಾನನದ ನಡುವೆ ಧುಮ್ಮಿಕ್ಕುವ ಈ ಜಲಪಾತ ಎದುರು ಪ್ರವೇಶಿಸುತ್ತಿದ್ದಂತೆಯೇ ನೀರಿನ ಹನಿಗಳು ಮುತ್ತಿಕ್ಕುತ್ತವೆ.
ಉಡುಪಿಯಿಂದ 80 ಕಿ.ಮೀ. ದೂರ ದಲ್ಲಿ ಶಿರೂರು ಗ್ರಾಮ ಸಿಗುತ್ತದೆ. ಇಲ್ಲಿಂದ ತೂದಳ್ಳಿ ರಸ್ತೆಯಲ್ಲಿ 8 ಕಿ.ಮೀ ಸಾಗಬೇಕು. ಬಳಿಕ 4 ಕಿ.ಮೀ ಕಾಡು ದಾರಿಯಲ್ಲಿ ಸಾಗಿದಾಗ ಕೊಸಳ್ಳಿ ಜಲಪಾತ ಕಾಣಸಿಗುತ್ತದೆ. ನೀರವ ಕಾಡಿನ ನಡುವೆ ಜಲಪಾತದ ಭೋರ್ಗರೆತ, ಪ್ರಾಣಿ ಪಕ್ಷಿಗಳ ಕೂಗು ಚೇತೋಹಾರಿಯಾಗಿದೆ. ಇದು ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದ್ದು, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಗರು ಆಗಮಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಅಡಿಯಿಂದ ಧುಮುಕುವ ಕೂಸಳ್ಳಿ ಜಲಪಾತದ ನೀರು ಕೃಷಿ ಭೂಮಿಗೆ ಆಸರೆ ನೀಡುವುದರೊಂದಿಗೆ ಬಳಿಕ ಸಂಕದಗುಂಡಿ ಮೂಲಕ ಅರಬಿ ಸಮುದ್ರ ಸೇರುತ್ತದೆ. ಮಳೆ ಕಾರಣ ಕಳೆದೊಂದು ವಾರದಿಂದ ಇಲ್ಲಿ ನೀರಿನ ಅಬ್ಬರ ಹೆಚ್ಚಾಗಿದ್ದು, ಜಲಪಾತದ ಸೌಂದರ್ಯ ವೃದ್ಧಿಸಿದೆ.
ಮಳೆಗಾಲದಲ್ಲಿ ಜಲಪಾತದ ಸಮೀಪ ಹೋಗಲು ಸಾಧ್ಯವಿಲ್ಲ. ಜನವರಿ- ಫೆಬ್ರವರಿ ವರೆಗೆ ನೀರ ಹರಿವು ಇದ್ದು ಮಳೆಗಾಲದಲ್ಲಿ ಹೆಚ್ಚು ಆಕರ್ಷಣೀಯ. ಜಲಪಾತಕ್ಕೆ ಸಾಗುವ ದಾರಿಯಲ್ಲಿ ಕಲ್ಲುಗಳು ವಿಪರೀತ ಜಾರುವುದರಿಂದ ಅತೀವ ಎಚ್ಚರಿಕೆ ವಹಿಸ ಬೇಕು. ಇಲ್ಲಿ ಸಾವುಗಳೂ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.