Advertisement

ನೀರಿನ ಟ್ಯಾಂಕರ್‌ಗೆ ಮುಗಿ ಬೀಳುತ್ತಿರೋ ಸಾರ್ವಜನಿಕರು!

05:24 PM May 11, 2020 | Naveen |

ಕೂಡ್ಲಿಗಿ: ಕೆಲ ವಾರ್ಡ್‌ಗಳಲ್ಲಿ ನೀರು ಸಿಗದೇ ಜನರು ಪರದಾಡುವ, ಕೊಡ ಹಿಡಿದು ಗುಂಪು ಗುಂಪಾಗಿ ಅಲೆಯುತ್ತಿರುವ ದೃಶ್ಯ ಎಲ್ಲೆಡೆ ಸರ್ವೇ ಸಾಮಾನ್ಯವಾಗಿದೆ. ಸಾಮಾಜಿಕ ಅಂತರ ನಿಯಮದ ಉಲ್ಲಂಘನೆ ಆಗುತ್ತಿದೆ. ಇದಕ್ಕೆಲ್ಲ ಕಾರಣ ನೀರಿನ ಅಭಾವ.

Advertisement

ಬನ್ನಿಗೊಳ ಬಳಿ ಮೋಟರ್‌ ಕೆಟ್ಟು ನಿಂತು ಡ್ಯಾಂ ನೀರು ಪೂರೈಕೆ ನಿಂತಿದೆ. ಸ್ಥಳೀಯ ಆಡಳಿತ ಟ್ಯಾಂಕರ್‌ ನೀರನ್ನು ತಾತ್ಕಾಲಿಕವಾಗಿ ಪೂರೈಸುತ್ತಿದ್ದು, ಅದೂ ಸಹ ಅಸಮರ್ಪಕ ಆಗಿರುತ್ತದೆ. ಈ ಕಾರಣಕ್ಕೆ ಜನ ಕೊಡ ಹಿಡಿದು ನೀರಿಗಾಗಿ ಅಲೆದಾಡುತ್ತಿದ್ದಾರೆ. ನೀರಿನ ಟ್ಯಾಂಕರ್‌ಗೆ ಮುಗಿ ಬೀಳುತ್ತಿದ್ದಾರೆ. ನೀರಿನ ಪೂರೈಕೆಯಲ್ಲೂ ಅನಿಶ್ಚಿತತೆ ಇರುವ ಕಾರಣಕ್ಕೆ ಪಪಂಗೆ ಹಿಡಿಶಾಪ ಹಾಕುತ್ತಾರೆ.

ನಮ್ಮ ಗೋಳು ಕೇಳ್ಳೋರಿಲ್ಲ. ಮನೆಯಲ್ಲಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ಜನರಿಗೆ ಮೂಲ ಸೌಲಭ್ಯಗಳನ್ನು ಸರಿಯಾಗಿ ಒದಗಿಸದೇ ದಿವ್ಯ ನಿರ್ಲಕ್ಷé ವಹಿಸಿದೆ ಎಂದು ಜನ ಆರೋಪಿಸುತ್ತಾರೆ. ನೀರಿಗಾಗಿ ವಾರ್ಡ್‌ಗಳಲ್ಲಿ ಬೋರ್‌ವೆಲ್‌ ಕೊರೆಸಿದ್ದು, ಅವುಗಳಲ್ಲಿ ಅನೇಕ ಕೆಟ್ಟು ಹೋಗಿವೆ. ಇವುಗಳನ್ನಾದರೂ ಸರಿಪಡಿಸಿದ್ದರೆ ಬಳಕೆಗೆ, ಜಾನುವಾರುಗಳಿಗೆ ಬರುತ್ತಿತ್ತು. ದುಡ್ಡು ಇದ್ದವರು ಹಣ ಕೊಟ್ಟು ಟ್ಯಾಂಕರ್‌ ನೀರು ತರಿಸುತ್ತಾರೆ. ಆದರೆ ಬಡವರ ಕಷ್ಟ ಹೇಳತಿರದು.

ಈ ಬಗ್ಗೆ ಪಪಂ ಮುಖ್ಯಾಧಿಕಾರಿಗೆ ಕೇಳಿದರೆ ಸಿದ್ಧ ಉತ್ತರ ಇಟ್ಟುಕೊಂಡು, ಆಶ್ವಾಸನೆ ಕೊಡ್ತಾರೆ ಕೆಲಸವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಪಟ್ಟಣ ನಿವಾಸಿ ಈರಣ್ಣ. ಸ್ವಾಮಿ ನೀರಿನ ಸಮಸ್ಯೆ ಹೇಳತೀರದು. ಪ್ರತಿ ವಾರ್ಡಿನ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಎರಿಸ್ವಾಮಿ ತಿಳಿಸಿದರು.

8ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕೆಲ ದಿನಗಳಿಂದ ನೀರು ಇರದೆ ಇರುವ ಕಾರಣ 500 ರೂ. ಟ್ಯಾಂಕರ್‌ ಮೂಲಕ ಜನರಿಗೆ ನೀರು ಪೂರೈಸುತ್ತಿದ್ದೇನೆ. ಪಪಂನವರು 2 ಟ್ಯಾಂಕರ್‌ ನೀರು ಮಾತ್ರ ಪೂರೈಕೆ ಮಾಡಿರುತ್ತಾರೆ. ಜನಸಂಖ್ಯೆ ನೋಡಿದರೆ 1200 ಮಂದಿ. ನೀರು ಮಾತ್ರ ಸಾಕಾಗುತ್ತಿಲ್ಲ.
ಸಚಿನ್‌ಕುಮಾರ,
ಪಪಂ 8ನೇ ವಾರ್ಡ್‌ ಸದಸ್ಯ

Advertisement

ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಬನ್ನಿಗೋಳು ಬಳಿ ನೀರು ಪಂಪ್‌ ಮಾಡಿ ಮೂರು ತಾಲೂಕುಗಳಿಗೆ ಸರಬರಾಜು ಮಾಡುವಂತಹ ಮೋಟರ್‌ ಪಂಪ್‌ ಕೆಟ್ಟು ಹೋಗಿದೆ. ಅದನ್ನು ಸರಿಪಡಿಸಲು ಗದುಗಿಗೆ ಕಳುಹಿಸಿದ್ದಾರೆ. ಹೊಸದಾಗಿ ಮೋಟಾರ್‌ ಪಂಪ್‌ ಟೆಂಡರ್‌ ಪ್ರಕ್ರಿಯೆ ಕರೆದಿದ್ದಾರೆ. ಆದರೆ ಸದ್ಯಕ್ಕೆ ಹಳೆಯದನ್ನು ರಿಪೇರಿ ಮಾಡಿ ನೀರು ಪೂರೈಸಲಾಗುವುದು.
ತಹಶೀಲ್ದಾರ್‌ ಮಹಾಬಲೇಶ್ವರ,
ಪಪಂ ಆಡಳಿತಾಧಿಕಾರಿ

ಪಟ್ಟಣದಲ್ಲಿ ಡ್ಯಾಂ ನೀರು ಬರುವ ನಿರೀಕ್ಷೆ ಇದೆ. ಸದ್ಯಕ್ಕೆ ಟ್ಯಾಂಕರ್‌ ನೀರು ಪೂರೈಕೆ ವಾರ್ಡ್‌ನಲ್ಲಿ ಎಷ್ಟು ಪೂರೈಕೆಗೆ ಅವಶ್ಯಕತೆ ಇದೆಯೋ ಅಷ್ಟು ವ್ಯವಸ್ಥೆ ಮಾಡುತ್ತೇನೆ. ಮಿನಿ ಟ್ಯಾಂಕರ್‌ಗಳು ಇಲ್ಲದ ಕಡೆ ವಾರ್ಡ್‌ನಲ್ಲಿ ನೀರು ಹೆಚ್ಚಿನ ಟ್ಯಾಂಕರ್‌ ಕೇಳಿದರೆ ವ್ಯವಸ್ಥೆ ಮಾಡಲಾಗುವುದು.
ಪಕೃದ್ದೀನ್‌,
ಪಪಂ ಮುಖ್ಯಾಧಿಕಾರಿ

ಕೆ.ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next