ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಪ್ರತಿಷ್ಠಿತ “ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ’ ಪುರಸ್ಕೃತ ಗೋವಾದ ದಾಮೋದರ ಮಾವಜೊ ಅವರಿಗೆ 57ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ಲಭಿಸಿದೆ.
ಅವರು ಸಣ್ಣ ಕಥೆ, ಕಾದಂಬರಿ, ಅಂಕಣ ಮತ್ತು ಚಿತ್ರಕಥೆ ಬರಹಗಾರರಾಗಿದ್ದು, 3 ದಶಕಗಳಿಂದ ಕೊಂಕಣಿಯಲ್ಲಿ ಬರೆಯುತ್ತಿದ್ದಾರೆ. ಗೋವಾ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಕೊಂಕಣಿ ಭಾಷಾ ಮಂಡಲ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮಾವಜೊ ಅವರಿಗೆ 2011-2012ರಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಹಿರಿಯ ಫೆಲೋಶಿಪ್ ಲಭಿಸಿತ್ತು. 2019ರಲ್ಲಿ ಮಂಗಳೂರಿನ ವಿಶ್ವಕೊಂಕಣಿ ಕೇಂದ್ರದಲ್ಲಿ ಜರಗಿದ “ಕಾಳಿಗಂಗಾ’ ಕನ್ನಡ ಅನುವಾದ ಕಾದಂಬರಿಯ ಲೋಕಾರ್ಪಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ “ಕಾರ್ಮೇಲಿನ’ ಕನ್ನಡ ಹಾಗೂ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಕೆಲವು ಕಥೆಗಳು ಇಂಗ್ಲಿಷ್ ಜತೆಗೆ ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡಿವೆ.
ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್ ಗೋಲ್ಡ್ ಮೆಡಲ್ 2022 ಗೌರವ
ಅವರ “ಸುನಾಮಿ ಸೈಮನ್’ ಕಾದಂಬರಿಗೆ 2011ರಲ್ಲಿ ವಿಶ್ವ ಕೊಂಕಣಿ ಕೇಂದ್ರದಿಂದ “ವಿಮಲಾ ವಿ. ಪೈ ವಿಶ್ವಕೊಂಕಣಿ ಸಾಹಿತ್ಯ ಪುರಸ್ಕಾರ’ ಲಭಿಸಿದೆ. ಕೊಂಕಣಿ ಸಾಹಿತ್ಯಕ್ಕಾಗಿ 2ನೇ ಜ್ಞಾನಪೀಠವನ್ನು ತರುವ ಮೂಲಕ ವಿಶ್ವದಾದ್ಯಂತ ಕೊಂಕಣಿ ಜನರು ಹೆಮ್ಮೆಪಡುವಂತೆ ಮಾಡಿದ ದಾಮೋದರ ಮಾವಜೊ ಅವರ ಸಾಧನೆಗೆ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಹಾಗೂ ವಿಶ್ವಸ್ತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.