ಮುಂಬಯಿ ಕೊಂಕಣಿ ರಂಗಭೂಮಿಯ ಪ್ರತಿಭಾವಂತ ಕಲಾವಿದೆಯರಲ್ಲಿ ವಸುಧಾ ಪ್ರಭು ಅವರು ಕೂಡಾ ಒಬ್ಬರು. ಕುಂದಾಪುರ ತಾಲೂಕಿನ ಹಾಲಾಡಿಯಿಂದ ಮುಂಬಯಿಗೆ ಆಗಮಿಸಿದ ವಸುಧಾ ಪ್ರಭು ಅವರು ಹಲವಾರು ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿ ತಾನೋರ್ವ ಪ್ರಬುದ್ಧ ಕಲಾವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಶ್ರೀ ರಾಮಮಂದಿರ ವಡಾಲದ ಮಹಿಳಾ ವಿಭಾಗದ ಪ್ರತಿಭಾವಂತ ಕಲಾವಿದೆಯರನ್ನು ಗುರುತಿಸಿ ಅವರೊಳಗಿರುವ ಪ್ರತಿಭೆಯನ್ನು, ರಂಗ ವಿಶೇಷತೆಗಳನ್ನು ತನ್ನತ್ತ ಆಕರ್ಷಿಸಿಕೊಂಡು ಸ್ವತಃ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ರಂಗಕ್ಕೆ ತಂದ ಹೆಗ್ಗಳಿಕೆ ಅವರಿಗಿದೆ. “ಅಬಲಾ ನಹಿ ಸಬಲಾ’, “ಜಾವುಚೆ ಪೂರಾ ಬರೇಕ’, “ಮಾಕ್ಕಾ ವಾರ್ಡಿಕ ಜಾವ್ಹಾ’ ಮೊದಲಾದ ಕೊಂಕಣಿ ಏಕಾಂಕ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಹಾಗೂ ಇತರೆಡೆಗಳಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ರಾಮಸೇವಕ ಸಂಘ ವಡಾಲ ಪ್ರಸ್ತುತಪಡಿಸುವ ಹೆಚ್ಚಿನ ನಾಟಕಗಳಲ್ಲಿ ಉತ್ತಮವಾಗಿ ಅಭಿನಯಿಸಿ ಮುಂಬಯಿ ಕೊಂಕಣಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಉಡುಪಿಯ ಹೆಜಮಾಡಿಯಲ್ಲಿ ಜನಿಸಿ, ಜೀವನದಲ್ಲಿ ಸಾಧನೆಯೆ ಪ್ರಥಮ ಅಭಿಲಾಷೆಯೆಂಬಂತೆ ನಾಟಕ ರಂಗದಲ್ಲಿ ಸಕ್ರಿಯರಾದ ಅವರು, ಲಿಮ್ಕಾ ದಾಖಲೆಯ ನಿರ್ದೇಶಕ ಡಾ| ಚಂದ್ರಶೇಖರ್ ಶೆಣೈ ಅವರ “ಸತ್ಯಂ ವದ ಧರ್ಮಂ ಚರ’ ನಾಟಕದಲ್ಲಿ ಕೊಂಕಣಿ ರಂಗಭೂಮಿಯ ಪ್ರಬುದ್ಧ ಕಲಾವಿದರೊಂದಿಗೆ ಗಂಗಾಳ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಲ್ಲದೆ “ಲಗ್ನಾ ಪಿಶ್ಚೆ’, “ಹರಿಮಾಮ್ಮಲಿ ಫಜೀತಿ’, “ಏಕ ಆಶಿÛಲೋ ರಾಯು’ ನಾಟಕದಲ್ಲಿ ತಮಗೆ ನೀಡಿದ ಪಾತ್ರವನ್ನು ಮನಪೂರ್ವಕವಾಗಿ, ಪ್ರಾಮಾಣಿಕವಾಗಿ ನಿರ್ವಹಿಸಿ ಪಾತ್ರಗಳಿಗೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸರಳ, ಸಜ್ಜನ, ಸ್ವಭಾವದ ವಸುಧಾ ಪ್ರಭು ಅವರು ವಸುಧೆಯಷ್ಟೇ ಪ್ರತಿಭಾವಂತರು ಎಂದರೆ ತಪ್ಪಾಗಲಾರದು.
ನಾಟಕಗಳ ಹವ್ಯಾಸದ ಹೊರತು ಕಾವ್ಯ, ಕವಿಗೋಷ್ಠಿ, ಕೊಂಕಣಿ ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಭಾಗಿಯಾಗಿ ಭಾಷಾಭಿಮಾನವನ್ನು ಮರೆದು, ತಾನೋರ್ವ ಲೇಖಕಿ, ಕವಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಅಮೆರಿಕಾದಲ್ಲಿ ಉದ್ಘಾಟನೆಗೊಂಡ ಅವೈಜಾಸ್ ಮಕ್ಕಳ ಕೊಂಕಣಿ ಚಲನಚಿತ್ರದಲ್ಲಿ ಮುಖ್ಯಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
60ರ ಹರೆಯದ ವಸುಧಾ ಅವರು ಸೌಂದರ್ಯ ತಜ್ಞೆಯೂ ಹೌದು. ಇಲ್ಲಿಯವರೆಗೆ 2000ಕ್ಕೂ ಅಧಿಕ ವಧುಗಳನ್ನು ಸಿಂಗರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ನಗರದ ಹಲವು ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಮಹಿಳಾಪರ ಗೋಷ್ಠಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿಚಾರಗಳನ್ನು ಮಂಡಿಸಿದ್ದಾರೆ. ಮುಂಬಯಿ, ಮಂಗಳೂರು ಆಕಾಶವಾಣಿಯಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರ ಸಿದ್ಧಿ-ಸಾಧನೆಗಳಿಗೆ ವಿವಿಧ ಸಂಘಟನೆಗಳಿಂದ ಮಾನ-ಸಮ್ಮಾನಗಳು ಲಭಿಸಿವೆ. ಅವರಿಂದ ಕೊಂಕಣಿ ರಂಗಭೂಮಿಯು ಇನ್ನಷ್ಟು ಹೊಳಪನ್ನು ಕಾಣುವಂತಾಗಲಿ ಎಂಬುದು ನಮ್ಮ ಹಾರೈಕೆ.
ಕಮಲಾಕ್ಷ ಸರಾಫ್