Advertisement

ಶಿಕ್ಷಕರಿಗೆ ಸಂಬಳ ನೀಡಲಿದೆ ಕೊಂಕಣಿ ಸಾಹಿತ್ಯ ಅಕಾಡೆಮಿ…!

07:07 PM Jul 12, 2017 | Karthik A |

ಮಹಾನಗರ: ರಾಜ್ಯ ಸರಕಾರವು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಲೆಗಳಲ್ಲಿ 6ರಿಂದ 10ನೇ ತರಗತಿಯವರೆಗೆ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಸಲು ಅನುಮತಿ ನೀಡಿದ್ದರೂ ಶಿಕ್ಷಕರನ್ನು ನೇಮಿಸಿಲ್ಲ. ಹೀಗಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂಬಳ ನೀಡಿ ಶಿಕ್ಷಕರನ್ನು ನೇಮಿಸಲು ನಿರ್ಧರಿಸಿದೆ. ಇದಕ್ಕಾಗಿ 2017- 18ನೇ ಸಾಲಿನ ಪ್ರಸ್ತಾವನೆಯಲ್ಲಿ ಒಂದಷ್ಟು ಅನುದಾನ ಕೋರಿದ್ದು, ಸರಕಾರದಿಂದ ಬಿಡುಗಡೆಯಾದ ಮೇಲೆ ವಿನಿಯೋಗಿಸಲಾಗುತ್ತದೆ. ಸರಕಾರವು ಅಕಾಡೆಮಿಗೆ ಪ್ರತಿ ವರ್ಷ ಸುಮಾರು 60 ಲಕ್ಷ ರೂ.ಅನುದಾನ ನೀಡುತ್ತಿದ್ದು, ಈ ಬಾರಿಯ ಅನುದಾನ ಮುಂದಿನ ವಾರ ಬರುವ ನಿರೀಕ್ಷೆ ಇದೆ. ಅದರಂತೆ ಈ ತಿಂಗಳ ಕೊನೆಯೊಳಗೆ ಅಕಾಡೆಮಿಯ ಶಿಕ್ಷಕರ ನೇಮಕವಾಗಲಿದೆ. 

Advertisement

ಸಮಿತಿ ನೇಮಕವಾಗಿಲ್ಲ
ಅಕಾಡೆಮಿಯ ಹಿಂದಿನ ಆಡಳಿತ ಮಂಡಳಿ ಅಧಿಕಾರಾವಧಿ ಫೆಬ್ರವರಿಗೆ ಮುಕ್ತಾಯಗೊಂಡಿದೆ. ಆದರೆ ಹೊಸ ಸಮಿತಿಗೆ ಉತ್ತರ ಕನ್ನಡ ಜಿಲ್ಲೆಯ ಆರ್‌. ಪಿ. ನಾೖಕ್‌ ಅಧ್ಯಕ್ಷರನ್ನಾಗಿ ನೇಮಿಸಿದ್ದರೂ, 10 ಮಂದಿ ಸದಸ್ಯರಿನ್ನೂ ನೇಮಕವಾಗಿಲ್ಲ. ಹೀಗಾಗಿ ಅಧಿಕಾರಿ ವರ್ಗಕ್ಕೆ ದೊಡ್ಡ ನಿರ್ಧಾರವನ್ನು ತಳೆಯುವಂತಿಲ್ಲ. ಆದರೆ ಈ ಸಾಲಿನ ಕ್ರಿಯಾಯೋಜನೆಯನ್ನು ಆಡಳಿತ ಮಂಡಳಿ ಇಲ್ಲದೆ ರಿಜಿಸ್ಟ್ರಾರ್‌ ಅವರ ನೇತೃತ್ವದಲ್ಲೇ ರೂಪಿಸಲಾಗಿತ್ತು. ಹೀಗಾಗಿ ಸಮಿತಿಯ ನೇಮಕಾತಿ ವಿಳಂಬವಾದರೆ ಜುಲೈ ಅಂತ್ಯದೊಳಗೆ ಅಕಾಡೆಮಿಯು ಶಿಕ್ಷಕರನ್ನು ನೇಮಿಸಲಿದೆ.

ಗೊಂದಲದ ವಿಚಾರ
2007- 08ರಲ್ಲಿ ಕೊಂಕಣಿ ಭಾಷೆಯನ್ನು ಕಲಿಸಲು ಆರಂಭವಾದಂದಿನಿಂದ ಇದು ಗೊಂದಲದಿಂದ ಕೂಡಿದೆ. ಆರಂಭದಲ್ಲಿ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸುವುದಕ್ಕಿಂತಲೂ ಹೆಚ್ಚುವರಿ ಭಾಷೆಯಾಗಿ ಕಲಿಸಲಾಗುತ್ತಿತ್ತು. ಅಂದರೆ ಹಿಂದಿಯ ಬದಲು ಕೊಂಕಣಿ ಭಾಷೆಯನ್ನು ತೆಗೆದುಕೊಳ್ಳವವರ ಸಂಖ್ಯೆ ವಿರಳವಾಗಿತ್ತು. ಜತೆಗೆ ಕೊಂಕಣಿ ಭಾಷೆಯ ಕುರಿತು ಕನ್ನಡ ಹಾಗೂ ದೇವನಾಗರಿ ಲಿಪಿಯ ಕುರಿತೂ ಗೊಂದಲವಿತ್ತು.

500 ವಿದ್ಯಾರ್ಥಿಗಳು
ಪ್ರಸ್ತುತ ಮೂರು ಜಿಲ್ಲೆಗಳ 10ರಿಂದ 15 ಶಾಲೆಗಳಲ್ಲಿ ಸುಮಾರು 500 ವಿದ್ಯಾರ್ಥಿಗಳು ಕೊಂಕಣಿಯನ್ನು ಕಲಿಯುತ್ತಿದ್ದಾರೆ. ಕಳೆದ ಸಾಲಿನಲ್ಲಿ ತೃತೀಯ ಭಾಷೆ ಕೊಂಕಣಿಯಲ್ಲಿ 82 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ಆದರೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಕೊಂಕಣಿ ಕಲಿಯ ಬೇಕೆಂಬ ಉದ್ದೇಶದಿಂದ ಶಾಲೆಗಳಿಗೆ ಹೊರೆಯಾಗದಂತೆ ಶಿಕ್ಷಕರ ನೇಮಕವನ್ನು ಅಕಾಡೆಮಿಯೇ ಮಾಡಲು ನಿರ್ಧರಿಸಿದೆ ಎಂದು ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

7-8 ಲಕ್ಷ ರೂ. ಮೀಸಲು
ಅಕಾಡೆಮಿಯು ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ 7ರಿಂದ 8 ಲಕ್ಷ ರೂ. ಅನುದಾನವನ್ನು ಕೊಂಕಣಿ ಕಲಿಸುವ ಶಿಕ್ಷಕರಿಗೆ ಮೀಸಲಿಟ್ಟಿದೆ. ಇದಕ್ಕಾಗಿ ಈಗಾಗಲೇ ಆಹ್ವಾನವನ್ನು ಕರೆಯಲಾಗಿದ್ದು, ಸುಮಾರು 12 ಶಾಲೆಗಳು ಅರ್ಜಿಗಳನ್ನು ಸಲ್ಲಿಸಿವೆ. ಇವು ಈಗಾಗಲೇ ಕೊಂಕಣಿ ಕಲಿಸುತ್ತಿರುವ ಶಾಲೆಗಳು. ಹೀಗಾಗಿ ಹೊಸ ಶಾಲೆಗಳು ಅರ್ಜಿ ಸಲ್ಲಿಸಿದರೆ ಅದಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಆದರೆ ಎಷ್ಟು ಶಿಕ್ಷಕರಿಗೆ ಮತ್ತು ಎಷ್ಟು ಸಂಬಳ ನೀಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ.

Advertisement

ಈ ತಿಂಗಳ ಅಂತ್ಯದೊಳಗೆ ನೇಮಕ
ಕೊಂಕಣಿ ಭಾಷೆಯನ್ನು ಹೆಚ್ಚಿನ ವಿದ್ಯಾರ್ಥಿಗಳು ಕಲಿಯಬೇಕೆಂದು ಶಿಕ್ಷಕರಿಗೆ ಸಂಬಳ ನೀಡುವ ಕುರಿತು ಚಿಂತಿಸಲಾಗಿದೆ. ಈ ಶೈಕ್ಷಣಿಕ ಸಾಲಿಗೆ ಅನುಕೂಲವಾಗುವಂತೆ ತಿಂಗಳಾಂತ್ಯದೊಳಗೆ ನೇಮಕ ನಡೆಯಲಿದೆ. ಶಿಕ್ಷಕರ ಸಂಖ್ಯೆಯ ಆಧಾರದಲ್ಲಿ ಸಂಬಳದ ಮೊತ್ತ ನಿರ್ಧಾರವಾಗಲಿದೆ. ಮುಂದಿನ ವಾರ ಅಕಾಡೆಮಿಯ ಅನುದಾನ ಬರುವ ಸಾಧ್ಯತೆ ಇದೆ. 
– ಡಾ| ಬಿ.ದೇವದಾಸ ಪೈ, ರಿಜಿಸ್ಟ್ರಾರ್‌, ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next