ಮಂಗಳೂರು: ಕೊಂಕಣಿ ಸಾಹಿತ್ಯ, ಸಮಾಜ ಸೇವೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ 7 ಮಂದಿಗೆ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ “ವಿಶ್ವ ಕೊಂಕಣಿ ಪುರಸ್ಕಾರ’ವನ್ನು ಗುರುವಾರ ಪ್ರದಾನಿಸಲಾಯಿತು. ಮಾನವ ಅಧಿಕಾರ, ಬಳಕೆದಾರರ ಹಕ್ಕುಗಳ ರಕ್ಷಣೆ, ಅರಿವು ಕ್ಷೇತ್ರಗಳಲ್ಲಿ ಸೇವೆಗೈದ ಡಾ| ರವೀಂದ್ರನಾಥ ಶಾನ್‌ಭಾಗ್ ಪುರಸ್ಕಾರವನ್ನು ಪ್ರದಾನಿಸಿ ಬಸ್ತಿ ವಾಮನ ಶೆಣೈ ಅವರ ಸ್ಮರಣೆ ಮಾಡಿದರು.
ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನವನ್ನು ಲೇಖಕ, ಅನುವಾದಕ ಮಾಣಿಕ್ ರಾವ್ ಗವಣೇಕರ್, ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು ಗೋವಾದ ಲೇಖಕಿ ಡಾ| ಜಯಂತಿ ನಾಯ್ಕ ಹಾಗೂ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಮುಂಬಯಿಯ ಕವಿ, ಲೇಖಕ ವಲ್ಲಿ ಕ್ವಾಡ್ರಸ್ ಅವರಿಗೆ ಪ್ರದಾನಿಸಲಾಯಿತು.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು (ಮಹಿಳಾ ವಿಭಾಗ) ರೋಗ ಪೀಡಿತರ ಶುಶ್ರೂಷೆಗಾಗಿ ಸುಶೇಗ್ ಜೀವಿತ್ ನ್ಯೂರೋ ಕೇರ್ ಸ್ಥಾಪಿಸಿರುವ ಡಾ| ಲವಿನಾ ಎಂ. ನೊರೊನ್ಹಾ ಅವರಿಗೆ ಹಾಗೂ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು (ಪುರುಷರ ವಿಭಾಗ) ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ತುರ್ತು ನಿಗಾ ಕೇಂದ್ರ ಸ್ಥಾಪಿಸಲು ಕಾರಣರಾಗಿರುವ ಡಾ| ಬಿ. ಶಾಂತಾರಾಮ ಬಾಳಿಗಾ ಅವರಿಗೆ, ಡಾ| ಪಿ. ದಯಾನಂದ ಪೈ ವಿಶ್ವ ಕೊಂಕಣಿ ಪುರಸ್ಕಾರವನ್ನು ಗೋವಾದ ರಂಗಕರ್ಮಿ ಅಜಿತ್ ಗಣಪತ್ ಶೆನ್ವಿ ಕೇರ್ಕರ್ ಹಾಗೂ ಕೊಂಕಣಿ ಸಾಹಿತ್ಯ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವ ಕೋಲ್ಕತಾದ ವಿದ್ಯಾ ಪೈ ಅವರಿಗೆ ಪ್ರದಾನಿಸಲಾಯಿತು.
ಉದ್ಯಮಿ ಉಲ್ಲಾಸ ಕಾಮತ್ ಮಾತನಾಡಿ, ಗೋವಾದಲ್ಲಿ ವಿಶ್ವ ಕೊಂಕಣಿ ಸಮ್ಮೇಳನ ಸಹಿತ ಬಹು ಆಯಾಮದಲ್ಲಿ ವಿಶೇಷ ಪ್ರೋತ್ಸಾಹ ನೀಡುವ ಬಗ್ಗೆ ಗೋವಾ ಮುಖ್ಯಮಂತ್ರಿ ಉಲ್ಲೇಖೀಸಿರುವುದು ಕೊಂಕಣಿಗರ ಪಾಲಿಗೆ ಹೆಮ್ಮೆ ಎಂದರು. ಬಸ್ತಿ ವಾಮನ ಶೆಣೈ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನವು ಭಾಷೆ, ಸಾಹಿತ್ಯ, ಸಂಸ್ಕೃತಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ನಿರತವಾಗಿರುವುದು ಶ್ಲಾಘನೀಯ ಎಂದರು.
ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿ, ಕಾರ್ಯದರ್ಶಿ ಗಿರಿಧರ್ ಕಾಮತ್ ವಂದಿಸಿದರು. ಸುಚಿತ್ರಾ ಎಸ್. ಶೆಣೈ ಪ್ರಶಸ್ತಿಪತ್ರ ವಾಚಿಸಿದರು. ಸ್ಮಿತಾ ಶೆಣೈ ನಿರೂಪಿಸಿದರು.