ಮುಂಬಯಿ ಕೊಂಕಣಿಗರಿಗೆ ಬಹುದಿನಗಳ ಕಾಯುವಿಕೆಯ ಅನಂತರ ಒಂದು ಶ್ರೇಷ್ಠ ನಾಟಕವನ್ನು ವೀಕ್ಷಿಸುವ ಅವಕಾಶ ಮೇ 1ರಂದು ಒದಗಿಬಂದಿತು. ಅಂದು ಸಂಜೆ ವಡಾಲಾದ ಸುಪ್ರಸಿದ್ಧ ಶ್ರೀರಾಮಮಂದಿರ “ರಾಮ ಸೇವಕ ಸಂಘ’ದ ಪ್ರತಿಭಾವಂತ ಹವ್ಯಾಸಿ ಕಲಾವಿದರು “ಸರ್ವೇಜನಃ ಕಾಂಚನಮಾಶ್ರಯಂತೇ’ ಎಂಬ ಕೊಂಕಣಿ ಭಾಷೆಯ ಬೋಧಪ್ರದ, ಸಮಾಜಮುಖೀ ಸಾಮಾಜಿಕ ನಾಟಕದ 48ನೇ ಪ್ರಯೋಗವನ್ನು ಮಾಟುಂಗಾ, ಮುಂಬಯಿಯ ಮೈಸೂರ್ ಅಸೋಶಿಯೇಶನ್‌ನ ಸಭಾಗೃಹದಲ್ಲಿ ಪ್ರದರ್ಶಿಸಿದರು.
ಪ್ರಾಯೋಜಕ ಎನ್.ಎಸ್. ಕಾಮತ್ ಅವರ ಲಾಂಛನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪುರಸ್ಕೃತ ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಪ್ರಶಸ್ತಿ ಪುರಸ್ಕೃತ ಎ. ಜಿ. ಕಾಮತ್ ಅವರು ವಿರಚಿಸಿ ದಿಗªರ್ಶಿಸಿದ ನಾಟಕ “ಸರ್ವೇಜನಃ ಕಾಂಚನಮಾಶ್ರಯಂತೇ.’ ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರ- ಸಂಸ್ಕೃತಿ, ಗುರು- ಹಿರಿಯರ ಮೇಲೆ ಭಕ್ತಿ- ಆದರ- ಪ್ರೀತಿ ಮೂಡಬೇಕು, ಅಂತೆಯೇ ವಯಸ್ಕರಾದ ತಂದೆ-ತಾಯಂದಿರು ತಮ್ಮ ನಿರಾತಂಕ ಬದುಕಿಗಾಗಿ ಆಪದ್ಧನವನ್ನು ಶೇಖರಿಸಿಡಬೇಕು ಎಂಬ ಸಂದೇಶವನ್ನು ಹೊತ್ತ ನಾಟಕ ಇದು. ಉತ್ತಮ ಕಥಾಸಾರಾಂಶ ವನ್ನು ಹೊಂದಿದ ಈ ನಾಟಕವನ್ನು ಪ್ರತಿಯೊಬ್ಬರೂ ವೀಕ್ಷಿಸಬಹುದಾದಂಥದು. ಈ ಕೊಂಕಣಿ ನಾಟಕದ ಲೇಖಕರು ಉತ್ತಮ ಸಂಭಾಷಣೆಯನ್ನು ನಾಟಕದುದ್ದಕ್ಕೂ ಪೋಣಿಸಿ ಅಂತ್ಯದವರೆಗೂ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದ್ದಾರೆ.
ನಾಟಕದ ಕಥಾನಾಯಕ “ಕಾಮತ್ ಸಾವಾರ್’ ಪಾತ್ರದಲ್ಲಿ ದಿಗªರ್ಶಕ ಎ.ಜಿ. ಕಾಮತ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. “ಹರಿ’ ಭೂಮಿಕೆಯಲ್ಲಿ ಮುಂಬೈಯ ಖ್ಯಾತ ಹಾಗೂ ಹಿರಿಯ ಕೊಂಕಣಿ ಕಲಾವಿದರಾದ, ಕನ್ನಡಿಗ ಕಲಾವಿದರ ಪರಿಷತ್ತು -ಮಹಾರಾಷ್ಟ್ರದ ಉಪಾಧ್ಯಕ್ಷ ಕಮಲಾಕ್ಷ ಸರಾಫರು ನಾಟಕದುದ್ದಕ್ಕೂ ಉತ್ತಮ ಹಾಸ್ಯಾಭಿನಯ ಪ್ರಸ್ತುತಪಡಿಸಿ, ಪ್ರೇಕ್ಷಕರನ್ನು ರಂಜಿಸಿ, ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಖಳ ನಾಯಕರಾದ “ಬಾಳಿY’ ಪಾತ್ರದಲ್ಲಿ ಅಶೋಕ ಪ್ರಭು ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದರು.
“ನಾಣ್ಣಾ’ನ ಪಾತ್ರದಲ್ಲಿ ಮೇಲ್ಗಂಗೊಳ್ಳಿ ರವೀಂದ್ರ ಪೈ, “ಶ್ರೀಧರ್’ನ ಪಾತ್ರದಲ್ಲಿ ಹರೀಶ್ ಚಂದಾವರ್, “ನಂದನ್’ ಪಾತ್ರದಲ್ಲಿ ಶ್ರೀರಾಮಮಂದಿರ ಹಿರಿಯ ಸಂಸ್ಥಾಪಕಿ, ಕಲಾವಿದೆ ವಿನಯಾ ಪ್ರಭು, “ಲತಾ’ಳ ಪಾತ್ರದಲ್ಲಿ ಆಶಾ ನಾಯಕ್, ಡಾಕ್ಟರ್ ಭೂಮಿಕೆಯಲ್ಲಿ ಪ್ರಬುದ್ಧ ಕಲಾವಿದೆ, ದಿಗªರ್ಶಕಿ ಮತ್ತು ಕೊಂಕಣಿ ಸಿನೆಮಾ ನಟಿ ವಸುಧಾ ಪ್ರಭು ಹಾಗೂ ಶ್ರೀಪಾದ ಶೆಣೈ ಪಾತ್ರದಲ್ಲಿ ಬಾಲಕೃಷ್ಣ ಕಾಮತ್ ತಮ್ಮ ಕಲಾನೈಪುಣ್ಯವನ್ನು ಮೆರೆದರು.
ಅಶೋಕ ಪ್ರಭು ಅವರ ಇಂಪಾದ ಸಂಗೀತವನ್ನು ಆಲಿಸಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಗಣಪತಿ ಕಾಮತ್ – ಸುಧಾಕರ ಭಟ್ಟರ್ ರಂಗವಿನ್ಯಾಸ, ಬೆಳಕು, ಧ್ವನಿ ಸಂಯೋಜನೆ ಒಪ್ಪುವಂತಿತ್ತು. ನೇಪಥ್ಯದಲ್ಲಿ ಶ್ರೀಕಾಂತ ಪ್ರಭು, ವಸುಧಾ ಪ್ರಭು, ಮಾಯಾ ಸರಾಫ, ಮಾಲಿನಿ ಪೈ, ವಸಂತ ಪೈ ಇನ್ನಿತರರು ಸಹಕರಿಸಿದ್ದರು. ಡಾ| ಚಂದ್ರಶೇಖರ್ ಶೆಣೈಯವರು ವಿಶೇಷ ಮಾರ್ಗದರ್ಶಕರಾಗಿದ್ದರು. ಶಾಂತಾರಾಮ ಮಹಾಲೆ ವೇಷಭೂಷಣ ನೀಡಿದ್ದರು.
ಸುಪ್ರಸಿದ್ಧ ಶ್ರೀ ರಾಮಮಂದಿರ ವಡಾಲಾದ ಅವಿಭಾಜ್ಯ ಅಂಗವಾದ ರಾಮ ಸೇವಕ ಸಂಘದ ಈ ಕೊಂಕಣಿ ನಾಟಕವು ನಿರೀಕ್ಷೆಗೂ ಮಿಗಿಲಾಗಿ ಪ್ರದರ್ಶನೆಗೊಂಡಿದೆ. ವಡಾಲಾ ಶ್ರೀರಾಮ ಮಂದಿರವು ಆಧ್ಯಾತ್ಮಿಕ ಕ್ಷೇತ್ರದೊಡನೆ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಹೆಸರು ಗಳಿಸಿದೆ. ಈ ನಾಟಕವು ಸುವರ್ಣ ಪ್ರಯೋಗದ ಹೊಸ್ತಿಲಲ್ಲಿದೆ.
ನಾಟಕಪ್ರಿಯ