ಪಣಜಿ: ಕೊಂಕಣಿ ಭಾಷಾ ಮಂಡಲವು ಕೊಂಕಣಿ ಭಾಷೆಯ ಪ್ರಚಾರದಲ್ಲಿ ಉತ್ತಮ ಕೆಲಸ ಮಾಡುತ್ತದೆ. ಸಾಹಿತ್ಯ ಅಥವಾ ಇತರ ಕ್ಷೇತ್ರಗಳಲ್ಲಿ ಹಿರಿಯ ಕೊಂಕಣಿ ನಾಯಕರು ಸಂರಕ್ಷಿಸಿದ ಅಮೂಲ್ಯ ಪರಂಪರೆಯು ಮುಂದಿನ ಪೀಳಿಗೆಗೆ ಪ್ರಯೋಜನವನ್ನು ನೀಡುತ್ತದೆ. ರಾಜ್ಯದಲ್ಲಿ ವಿಶಾಲವಾದ ಕೊಂಕಣಿ ಭವನ ನಿರ್ಮಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.
ಮಡಗಾಂವ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ಹಿರಿಯ ಕೊಂಕಣಿ ಗಣ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ದವರ್ಲಿಯಲ್ಲಿ ಒಂದು ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸಲಾಗುವುದು. ಅದಕ್ಕಾಗಿ ಪ್ರಕ್ರಿಯೆ ನಡೆಯುತ್ತಿದ್ದು, ಮಡಗಾಂವ್ ನಗರದ ಶಾಲೆಗಳಿಗೆ ಅಲ್ಲಿಯೇ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ಸಾವಂತ್ ಹೇಳಿದರು. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಡಾ. ಅಶ್ವಿನ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ “ಕೊಂಕಣಿ” ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ನಾಗೇಶ ಕರಮಳಿ, ಅಡ್. ಉದಯ್ ಭೆಂಬ್ರೆ, ದಾಮೋದರ್ ಮಾವ್ಜೋ, ಪುಂಡಲೀಕ ನಾಯ್ಕ್, ಮೀನಾ ಕಾಕೋಡ್ಕರ್, ಹೇಮಾ ನಾಯ್ಕ್ ಅವರಿಗೆ ಜೀವನ್ ಗೌರವ ಪ್ರಶಸ್ತಿ ನೀಡಲಾಯಿತು.
ಖ್ಯಾತ ಗಾಯಕಿ ಲೋರ್ನಾ, ಹಿಮಾಚಲ ಪ್ರದೇಶದ ರಾಜ್ಯಪಾಲ ಹಾಗೂ ಮಾಜಿ ಸ್ಪೀಕರ್ ರಾಜೇಂದ್ರ ಅರ್ಲೇಕರ್, ಪಂಡಿತ್ ಅಜಿತ್ ಕಾಕಡೆ, ಉದ್ಯಮಿ ಅವಧೂತ್ ಟಿಂಬಲ್, ಶ್ರೀನಿವಾಸ್ ಧೆಂಪೆ, ದತ್ತರಾಜ್ ಸಲಗಾಂವ್ಕರ್, ಡಾ. ಪ್ರಮೋದ ಸಾಳಗಾಂವಕರ, ಕಾಶಿನಾಥ ನಾಯ್ಕ ರವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಉಲ್ಲಾಸ ಗಾಂವಕರ ಕಾರ್ಯಕ್ರಮದ್ ಕೊನೆಯಲ್ಲಿ ವಂದನಾರ್ಪಣೆಗೈದರು.
ಇದನ್ನೂ ಓದಿ : ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಚಿಂತಾಜನಕ; ಐಸಿಯುನಲ್ಲಿ ಚಿಕಿತ್ಸೆ