ಉಡುಪಿ: ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರು ವರೆಗಿನ 740 ಕಿ.ಮೀ. ರೈಲು ಮಾರ್ಗವನ್ನು 1,287 ಕೋ.ರೂ.ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗಿದೆ. ಇದರಿಂದ ವಾರ್ಷಿಕ ಇಂಧನದಲ್ಲಿ 180 ಕೋ.ರೂ. ಹಾಗೂ ನಿರ್ವಹಣೆಯಲ್ಲಿ 120 ಕೋ.ರೂ. ಉಳಿತಾಯವಾಗಲಿದೆ. 2024ರೊಳಗೆ 67,956 ಕಿ.ಮೀ. ರೈಲು ಹಳಿಯ ವಿದ್ಯುದೀಕರಣ ಯೋಜನೆ ಹಾಕಿಕೊಳ್ಳಲಾಗಿದೆ. ದಿನಕ್ಕೆ 37 ಕಿ.ಮೀ. ಕಾಮಗಾರಿ ಮಾಡಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೊಂಕಣ ರೈಲ್ವೇಯ ಶೇ. 100 ವಿದ್ಯುದೀಕರಣ ಯೋಜನೆಗೆ ಸೋಮವಾರ ಉಡುಪಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಉದ್ಘಾಟಿಸಿದ ಕಾರ್ಯಕ್ರಮದ ನೇರಪ್ರಸಾರವನ್ನು ಉಡುಪಿಯಲ್ಲಿ ವೀಕ್ಷಿಸಲಾಯಿತು.
ಕೊಂಕಣ ರೈಲ್ವೇ ಕರಾವಳಿಯ ಜೀವನಾಡಿ. ಕರಾವಳಿಯಿಂದ ಮುಂಬಯಿ ಮೂಲಕ ಉತ್ತರ ಭಾರತಕ್ಕೆ ಬೆಸೆಯುವ ಕೊಂಡಿಯಾಗಿದೆ. ಕೊಂಕಣ ರೈಲ್ವೇ ಅಂದಾಕ್ಷಣ ಜಾರ್ಜ್ ಫೆರ್ನಾಡಿಸ್ ಅವರ ಸೇವೆಗಳೂ ನೆನಪಾಗುತ್ತವೆ ಎಂದರು.
ಕೊಂಕಣ ರೈಲ್ವೇಯ ದ್ವಿಪಥ ಹಾಗೂ ವಿದ್ಯುದೀಕರಣದ ಬೇಡಿಕೆ ಯಿತ್ತು. ಆ ಪೈಕಿ ವಿದ್ಯುದೀಕರಣ ಪೂರ್ಣಗೊಂಡಿದೆ. ಇದರಿಂದಾಗಿ ಪರಿಸರಕ್ಕೂ ಪೂರಕವಾಗಲಿದೆ. ವೇಗವೂ ವರ್ಧನೆಯಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕಾರವಾರ ಕ್ಷೇತ್ರೀಯ ರೈಲ್ವೇ ಪ್ರಬಂಧಕ ಬಿ.ಬಿ. ನಿಕ್ಕಂ, ಪಿಆರ್‌ಒ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರೈತರ ಮೂಲಕ ದೇಶದ ಅಭಿವೃದ್ಧಿ :
ಆಹಾರ ಪದಾರ್ಥಗಳನ್ನು ರಫ್ತು ಮಾಡುವ ದೇಶಗಳಲ್ಲಿ ಭಾರತ ದೇಶ 9ನೇ ಸ್ಥಾನದಲ್ಲಿದೆ. ಕೃಷಿಕರು ಬೆಳೆ ಬೆಳೆಯುವುದರ ಜತೆಗೆ ಅದನ್ನು ರಫ್ತು ಮಾಡುವ ಬಗ್ಗೆಯೂ ಚಿಂತಿಸಬೇಕು. ಈ ಮೂಲಕ ಪ್ರಗತಿಪರ ದೇಶದಲ್ಲಿ ಭಾರತ ಮತ್ತಷ್ಟು ಮುಂಚೂಣಿಗೆ ಬರಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.