ಮಣಿಪಾಲ: ಕೊಂಕಣ ರೈಲಿನಲ್ಲಿ ಕಳ್ಳತನ ಪ್ರಕರಣಗಳು ನಿತ್ಯ ವರದಿಯಾಗುತ್ತಿದ್ದು, ಈ ಬಗ್ಗೆ ಶೀಘ್ರವೇ ರೈಲ್ವೇ ಇಲಾಖೆಯ ಉನ್ನತಾಧಿಕಾರಿಗಳ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ “ದಿಶಾ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈಲು ಪ್ಲಾರ್ಟ್‌ಫಾರ್ಮ್, ರೈಲು ಬೋಗಿಗಳಲ್ಲಿ ಸಿಸಿ ಕೆಮರಾ ಹಾಗೂ ಲಾಕರ್ ವ್ಯವಸ್ಥೆಯನ್ನು ಅಗತ್ಯವಾಗಿ ಕಲ್ಪಿಸಬೇಕು. ರೈಲ್ವೇ ಪೊಲೀಸರು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ರೈಲಿನಲ್ಲಿ ಕಳ್ಳತನ ಆಗುತ್ತಿರುವ ಬಗ್ಗೆ ಪೊಲೀಸರಿಗೂ ದೂರು ಬರುತ್ತಿವೆ. ಹೊರ ರಾಜ್ಯ, ಜಿಲ್ಲೆಗಳಲ್ಲಿ ಪ್ರಕರಣಗಳು ನಡೆದು ಇಲ್ಲಿಗೆ ಬಂದು ದೂರು ನೀಡಲಾಗುತ್ತಿದೆ. ಇದರ ಪತ್ತೆಕಾರ್ಯ ಜಟಿಲವಾಗಿದ್ದು, ರೈಲ್ವೇ ಪೊಲೀಸರು ಮತ್ತಷ್ಟು ಸಕ್ರಿಯವಾಗಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ ಎಂದರು.
ಕುಂದಾಪುರ ಹಾಗೂ ಉಡುಪಿ ರೈಲು ನಿಲ್ದಾಣಗಳಲ್ಲಿರುವ ಬೀದಿ ದೀಪದ ಸಮಸ್ಯೆ ಹಾಗೂ ಕೊಂಕಣ ರೈಲ್ವೇ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪಿಡಬ್ಲೂéಡಿ, ರೈಲ್ವೇ ಹಾಗೂ ನಗರಸಭೆಯವರು ಸೇರಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಚಿವರು ನಿರ್ದೇಶಿಸಿದರು.
Related Articles
ಸಿಗ್ನಲ್ ಕೊರತೆ
ಉಡುಪಿ ನಗರ, ಕಟಪಾಡಿ, ಪಡುಬಿದ್ರಿ ಸಹಿತ ಪ್ರಮುಖ ಭಾಗಗಳಲ್ಲಿ ಸಿಗ್ನಲ್ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಎಸ್‌ಪಿ ತಿಳಿಸಿದರು.
ಪರ್ಯಾಯ ವ್ಯವಸ್ಥೆ ಸೂಚನೆ
ಸಂತೆಕಟ್ಟೆಯಲ್ಲಿ ಓವರ್‌ಪಾಸ್ ನಿರ್ಮಾಣ ಕಾಮಗಾರಿ ನಡೆಯಲಿರುವ ಕಾರಣ ಆ ಭಾಗದಲ್ಲಿ ಯಾವುದೇ ವಾಹನ ದಟ್ಟನೆ ಉಂಟಾಗದಂತೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸರ್ವಿಸ್ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ಸಚಿವರು ಸೂಚಿಸಿದರು.
ಸರ್ವಿಸ್ ರಸ್ತೆ ಪೂರಕವಾಗಿರಲಿ
ಓವರ್‌ಪಾಸ್ ನಿರ್ಮಾಣ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಲಿಂಗೇಗೌಡ, ಹೆದ್ದಾರಿಯಿಂದ ಕುಂದಾಪುರ ಪೇಟೆಗೆ ಹೋಗಲು ಸರ್ವಿಸ್ ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ವ್ಯವಸ್ಥೆಯ ಡೈವರ್ಷನ್‌ಗೆ ಸ್ವಲ್ಪ ಸಮಸ್ಯೆಯಿದ್ದು, ಈ ಬಗ್ಗೆ ಕೇಂದ್ರ ಕಚೇರಿಗೆ ವಿವರಣೆಯೊಂದಿಗೆ ಮಾಹಿತಿ ನೀಡಲಾಗಿದೆ. ತಾತ್ಕಾಲಿಕವಾಗಿ ಓಪನ್ ಮಾಡಲು ಅನುಮತಿ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲೆಯಲ್ಲಿ 12 ಹಾಟ್‌ಸ್ಪಾಟ್‌ಗಳಿದ್ದು, ಅದನ್ನು ಸರಿಪಡಿಸಲಾಗುವುದು ಎಂದರು.
ಪರ್ಕಳ-ಈಶ್ವರನಗರ ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ
ರಾ.ಹೆ.169ಎ ಕೆಳಪರ್ಕಳದಿಂದ ಈಶ್ವರ ನಗರದ ವರೆಗಿನ ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಯಾವುದೇ ನೆಪ ನೀಡದೆ ಪೂರ್ಣಗೊಳಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗೆ ಸಚಿವರು ಸೂಚಿಸಿದರು.
ಮಲ್ಪೆ – ಹೆಬ್ರಿ- ಪರ್ಕಳ ರಸ್ತೆ 1 ತಿಂಗಳ ಯೋಜನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ತಾಂತ್ರಿಕ ಬಿಡ್ ಪರಿಶೀಲನೆಯಾಗುತ್ತಿದೆ. ಗುತ್ತಿಗೆ ನಿಗದಿಯಾದ ಅನಂತರ ಆರಂಭಿಸುವುದಾಗಿ ಹೆದ್ದಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿ.ಪಂ. ಸಿಇಒ ಪ್ರಸನ್ನ ಎಚ್., ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.
ಟೈಗರ್ ಸರ್ಕಲ್ ಅವೈಜ್ಞಾನಿಕ?
ಮಣಿಪಾಲದ ಟೈಗರ್ ಸರ್ಕಲ್ ಅವೈಜ್ಞಾನಿಕ ಎಂಬ ಬಗ್ಗೆ ಮಾಹಿತಿಯಿದೆ. ಬಸ್ ತಂಗುದಾಣವೂ ಅಲ್ಲಿಯೇ ಇರುವ ಕಾರಣ ಪರ್ಕಳ ಭಾಗದಿಂದ ಬರುವವರಿಗೆ ಅದು ಹೆದ್ದಾರಿ ಎಂಬುದೇ ತಿಳಿಯುವುದಿಲ್ಲ. ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎಸ್‌ಪಿ, ನಗರಸಭೆ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸುವಂತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸುರತ್ಕಲ್ ಟೋಲ್ – ಹಂಚಿಕೆಯ ಸೂತ್ರ!
ಸುರತ್ಕಲ್ ಬಳಿಯ ಎನ್‌ಐಟಿಕೆ ಟೋಲ್ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಹೆದ್ದಾರಿ ಇಲಾಖೆ ಅಧಿಕಾರಿ, ಇಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಹೆಜಮಾಡಿ, ತಲಪಾಡಿ ಹಾಗೂ ಬ್ರಹ್ಮರಕೋಟ್ಲು ಟೋಲ್‌ಗೇಟ್‌ಗಳ ಮೂಲಕ ಸಂಗ್ರಹಿಸಲು ಯೋಜನೆಯಿದೆ. ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ ಎಂದರು. ಏನೇ ಮಾಡಿದರೂ ಜನರಿಗೆ ಯಾವುದೇ ರೀತಿ ಹೊರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶೋಭಾ ಸೂಚಿಸಿದರು.
ಇದನ್ನೂ ಓದಿ: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಪ್ರಣಯ್ ಕ್ವಾರ್ಟರ್ ಫೈನಲ್ ಪಯಣ