Advertisement
ಮಂಗಳೂರು: ಕರಾವಳಿಯ ಮಣ್ಣಿನ ಮಗ ಜಾರ್ಜ್ ಫೆರ್ನಾಂಡಿಸ್ ಅವರ ಪ್ರಯತ್ನದ ಫಲವಾಗಿ ಕೊಂಕಣ ರೈಲ್ವೇ ಅನುಷ್ಠಾನಕ್ಕೆ ಬಂದಾಗ ಕರ್ನಾಟಕದ ಜನತೆಯಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿದ್ದವು.
ಕೊಂಕಣ ರೈಲ್ವೇ ಮಾರ್ಗ ನಿರ್ಮಾಣ ಸಂದರ್ಭ ಹಳಿ ಪರೀಕ್ಷಾರ್ಥ ಕಾರ್ಯಾಚರಿಸುತ್ತಿದ್ದ ಮಂಗಳೂರು-ಮಡ್ಗಾಂವ್- ಮಂಗಳೂರು ಪ್ಯಾಸೆಂಜರ್ ರೈಲನ್ನು ಬಳಿಕ ಖಾಯಂಗೊಳಿಸಲಾಯಿತು. ಮುಂಬಯಿ ಎಲ್‌ಟಿಟಿ- ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಕೊಂಕಣ ರೈಲು ಮಾರ್ಗದ ಉದ್ಘಾಟನೆ ಸಂದರ್ಭ ಆಗಿನ ರೈಲ್ವೇ ಸಚಿವ ನಿತೀಶ್ ಕುಮಾರ್ ಚಾಲನೆ ನೀಡಿದ್ದರು. ಇದಾದ ಬಳಿಕ ಕರಾವಳಿ ಕರ್ನಾಟಕವನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಬೇರಾವುದೇ ರೈಲನ್ನು ಮಂಗಳೂರು ಭಾಗಕ್ಕೆ ಕೊಂಕಣ ರೈಲ್ವೇ ನಿಗಮ ದಿಂದ ಆರಂಭವಾಗಿಲ್ಲ. ಪ್ರಸ್ತುತ ಕೊಂಕಣ ಮಾರ್ಗದಲ್ಲಿ ಸುಮಾರು 40 ರೈಲುಗಳು ಓಡಾಡುತ್ತಿವೆ. ಇವುಗಳಲ್ಲಿ ಏಳು ಮಾತ್ರ ರಾಜ್ಯದ ಅಗತ್ಯಗಳಿಗೆ ಪೂರಕವಾಗಿವೆ. ಉಳಿದವುಗಳು ಉತ್ತರ ಭಾರತ ಮತ್ತು ಕೇರಳವನ್ನು ಸಂಪರ್ಕಿಸುವಂಥವು. ಇದಲ್ಲದೆ ಕರಾವಳಿಯ ರೈಲ್ವೇ ನಿಲ್ದಾಣಗಳ ಸ್ಥಿತಿಯಲ್ಲೂ 30 ವರ್ಷಗಳಲ್ಲಿ ಮಹತ್ತರ ಸುಧಾರಣೆಯಾಗಿಲ್ಲ ಎಂಬುದು ಬಳಕೆದಾರರ ಸಂಘಟನೆಗಳ ವಾದ.
Related Articles
Advertisement
ಇದೂ ನಿಜವೆನ್ನೋಣ. ಆದರೆ ಒಟ್ಟಿನಲ್ಲಿ ಬಡವಾಗುತ್ತಿರುವುದು ಕರಾವಳಿಯ ರೈಲ್ವೇ ಕ್ಷೇತ್ರ ಮತ್ತು ಕರಾವಳಿಗರು. ಈ ಹಿನ್ನೆಲೆಯಲ್ಲೇ ಕರಾವಳಿ ರೈಲ್ವೇ ಭಾಗವನ್ನು ತ್ರಿಶಂಕು ಸ್ಥಿತಿಯಿಂದ ಬಿಡುಗಡೆಗೊಳಿಸಿ ಎಂದು ಆಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೇ ವಿಭಾಗಕ್ಕೆ ಸೇರ್ಪಡೆಗೊಳಿಸಿದರೆ ಸ್ವಲ್ಪ ಅನುಕೂಲವಾಗಬಹುದು ಎಂಬ ಪ್ರತಿಪಾದನೆ ಬಳಕೆದಾರರ ಸಂಘಟನೆಗಳದ್ದು.
ಕೊಂಕಣ ರೈಲ್ವೇ ನಿಗಮ ಆರಂಭವಾಗಿ 30 ವರ್ಷಗಳು ಕಳೆದಿವೆ. 1998ರ ಜನವರಿಯಲ್ಲಿ ಪೂರ್ಣ ಪ್ರಮಾಣದ ರೈಲು ಸಂಚಾರ ಆರಂಭವಾಗಿತ್ತು. ಕೊಂಕಣ ರೈಲ್ವೇ ನಿಗಮದಲ್ಲಿ ಶೇ. 51ರಷ್ಟು ಪಾಲು ರೈಲ್ವೇ ಇಲಾಖೆ, ಮಹಾರಾಷ್ಟ್ರ ಶೇ. 22ರಷ್ಟು, ಕರ್ನಾಟಕ ಶೇ. 15ರಷ್ಟು, ಗೋವಾ ಶೇ. 6ರಷ್ಟು ಮತ್ತು ಕೇರಳ ಶೇ. 6ರಷ್ಟು ಪಾಲು ಹೊಂದಿವೆ. ಮಹಾರಾಷ್ಟ್ರದ ಬಳಿಕ ಅಧಿಕ ಪಾಲು ಬಂಡವಾಳವನ್ನು ಕರ್ನಾಟಕ ಹೊಂದಿದ್ದರೂ ಪ್ರಯೋಜನವಾದದ್ದು ಕಡಿಮೆ. ಹೆಚ್ಚಿನ ರೈಲು ಸೇವೆ ಕಡಿಮೆ ಪಾಲು ಬಂಡವಾಳ ಹೂಡಿರುವ ರಾಜ್ಯಗಳ ಪಾಲಾಗುತ್ತಿದೆ ಎಂಬ ಟೀಕೆ ಇದೆ.