Advertisement

ಅಪಾಯಕಾರಿ ಸ್ಥಿತಿಯಲ್ಲಿ ಕೊಂದಲ್ಕಾನ ತೂಗು ಸೇತುವೆ

11:51 PM Jun 12, 2019 | mahesh |

ಈಶ್ವರಮಂಗಲ: ಪಾಣಾಜೆ ಗ್ರಾಮದ ಕೊಂದಲ್ಕಾನದಲ್ಲಿ ಶಾರದಾ ನದಿಗೆ ನಿರ್ಮಿಸಿದ ತೂಗು ಸೇತುವೆ 13 ವರ್ಷಗಳಿಂದ ಯಾವುದೇ ನಿರ್ವ ಹಣೆ ಇಲ್ಲದೆ ಅಪಾಯವನ್ನು ಅಹ್ವಾನಿಸುತ್ತಿದೆ. ಕೊಂದಲ್ಕಾನದಿಂದ ಗುರಿಕೇಲು ವರೆಗೆ ಸಂಪರ್ಕಿಸುವ ಈ ತೂಗು ಸೇತುವೆಯನ್ನು ಹಲವರು ಅವಲಂಬಿಸಿದ್ದಾರೆ.

Advertisement

2006ರಲ್ಲಿ ಜಿಲ್ಲೆಯ ಸಂಸದ ಡಿ.ವಿ. ಸದಾನಂದ ಗೌಡ, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪಾಣಾಜೆ ಪಂಚಾಯತ್‌ ಅಧ್ಯಕ್ಷ ಸೇರ್ತಾಜೆ ರಾಧಾಕೃಷ್ಣ ಅವರ ಉಸ್ತುವಾರಿಯಲ್ಲಿ ಸುಮಾರು 30 ಮೀ. ಉದ್ದದ ತೂಗು ಸೇತುವೆ ಯನ್ನು ಬಹಳ ಮುತುವರ್ಜಿಯಿಂದ ಸುಳ್ಯದ ಗಿರೀಶ್‌ ಭಾರದ್ವಾಜ್‌ ಅವರು ನಿರ್ಮಾಣ ಮಾಡಿದ್ದರು. ಇದರಿಂದ ಎರಡು ಪ್ರದೇಶಗಳಿಗೆ ಸೇತು ಬಂಧವಾಯಿತು. ಅನಂತರದ ವರ್ಷಗಳಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಈ ತೂಗು ಸೇತುವೆ ಶಿಥಿಲವಾಗುತ್ತಾ ಬಂತು.

ಮುರ್ತುವರ್ಜಿ ವಹಿಸಿದ ಪಂಚಾಯತ್‌
ಕಳೆದ ವರ್ಷ ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ ಮತ್ತು ಸ್ಥಳೀಯ ಪಂಚಾಯತ್‌ ಅಧ್ಯಕ್ಷ ನಾರಾಯಣ ಪೂಜಾರಿ ಅವರು ವಿಶೇಷವಾಗಿ ಕಾಳಜಿ ವಹಿಸಿ, ಜಿ.ಪಂ. ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಸೇತುವೆ ಪರಿಶೀಲನೆಗೆ ವ್ಯವಸ್ಥೆ ಮಾಡಿದ್ದರು. ಸೇತುವೆಯ ಒಂದು ಭಾಗದ ತಡೆಗೋಡೆ ಮಳೆ ನೀರಿಗೆ ಕೊಚ್ಚಿ ಹೋಗಿತ್ತು. ತಾ.ಪಂ. ಅನುದಾನದಲ್ಲಿ ಸದಸ್ಯೆ ಮೀನಾಕ್ಷಿ ಮಂಜುನಾಥ ಅವರು ತಡೆಗೋಡೆಗೆ ಕ್ರಮ ಕೈಗೊಂಡು ದುರಸ್ತಿಯಾಗಿದೆ. ಈ ಸೇತುವೆಯ ನಿರ್ವಹಣೆ ಮಾಡುವಂತೆ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಗ್ರಾ.ಪಂ. ಆಡಳಿತ ಒತ್ತಾಯಿಸಿದೆ.

ಸಲಹೆ ಪಡೆದು ನಿರ್ವಹಣೆ
ಅನುದಾನದ ಕೊರತೆ ಇದೆ. ತೂಗು ಸೇತುವೆ ನಿರ್ಮಾಣ ಮಾಡಿದವರ ಬಳಿ ಸಲಹೆ-ಸೂಚನೆಗಳನ್ನು ಪಡೆದು ನಿರ್ವಹಣೆ ಮಾಡಲಾಗುವುದು. ತೂಗು ಸೇತುವೆಯ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಕ್ರಮ ಕೈಗೊಳ್ಳಲಾಗುವುದು.
-ಪರಮೇಶ್ವರ ಜಿ.ಪಂ. ಎಂಜಿನಿಯ ರಿಂಗ್‌ ವಿಭಾಗ, ಮಂಗಳೂರು

ಕಾಯಕಲ್ಪಗೆ ಸೂಕ್ತ ಕ್ರಮ
ತೂಗು ಸೇತುವೆಯನ್ನು ವೀಕ್ಷಣೆ ಮಾಡಲಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿ ಕ್ರಮ ಕೈಗೊಳ್ಳಲು ನಿರ್ಣಯಿಸಲಾಗಿದೆ. ನಿರ್ವಹಣೆಗೆ ಹೆಚ್ಚು ಅನುದಾನ ಬೇಕಾಗಿರುವುದರಿಂದ ಜಿಲ್ಲಾಧಿಕಾರಿಗಳಿಗೆ, ಜಿ.ಪಂ.ಗೆ ಬರೆಯಲಾಗುವುದು. ಗಡಿಭಾಗದ ತೂಗು ಸೇತುವೆಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ನಾರಾಯಣ ಪೂಜಾರಿ, ಅಧ್ಯಕ್ಷರು, ಪಾಣಾಜೆ ಗ್ರಾ.ಪಂ

ಕಬ್ಬಿಣದಿಂದ ನಿರ್ಮಾಣ ಮಾಡಲಾಗಿರುವ ತೂಗು ಸೇತುವೆ ತುಕ್ಕು ಹಿಡಿಯುತ್ತಿದೆ. ಇಕ್ಕೆಲಗಳಲ್ಲಿ ಬಲೆಗಳನ್ನು ನಿರ್ಮಿಸಲಾಗಿದೆ. ಆದರೆ ಒಂದು ಬದಿಯ ಬಲೆಗಳು ನದಿಗೆ ಬಿದ್ದು ಹೋಗಿವೆ. ಅವುಗಳಿಗೆ ಅಳವಡಿಸಿದ್ದ ಕಬ್ಬಿಣದ ಬೋಲ್rಗಳು ತುಕ್ಕು ಹಿಡಿದು ಕಳಚಿ ಬೀಳುವ ಸಾಧ್ಯತೆ ಇದೆ. ಇದರಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಅಪಾಯ ಹೆಚ್ಚಿದೆ. ಈ ತೂಗು ಸೇತುವೆ ಕಡಿದು ಬಿದ್ದು ಅನಾಹುತ ಸಂಭವಿಸುವ ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಂಭಾವ್ಯ ಜೀವಹಾನಿ ತಪ್ಪಬಹುದು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next