ಮಂಗಳೂರು: ಕೊಣಾಜೆ ನಿವಾಸಿ ನಮಿತ್ (24) ಮನೆಯಿಂದ ನಾಪತ್ತೆಯಾಗಿದ್ದು, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಕಾಂ ವಿದ್ಯಾಭ್ಯಾಸ ಮುಗಿಸಿದ್ದ ಆತ ಮನೆಯವರ ಸೂಚನೆ ಮೇರೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮನೆಯಿಂದ 25 ಸಾವಿರ ರೂ. ನಗದು ಪಡೆದುಕೊಂಡಿದ್ದು, ಮಾಡೂರಿನ ಕಾಲೇಜೊಂದರಲ್ಲಿ ಪ್ರವೇಶಾತಿ ಪಡೆದಿರುವುದಾಗಿ ತಿಳಿಸಿದ್ದ. ಪ್ರತಿ ದಿನ ಕಾಲೇಜಿಗೆಂದು ತೆರಳಿ ಸಂಜೆ ವಾಪಾಸಾಗುತ್ತಿದ್ದ.
ಅ.17ರಂದು ಕಾಲೇಜು ಫೀಸು ಎಂದು ಹೇಳಿ ಕಾಲೇಜು ಖಾತೆಗೆ 1.25 ಲಕ್ಷ ರೂ. ವರ್ಗಾವಣೆ ಮಾಡಿಸಿದ್ದ. ಅ. 25ರಂದು ಬೆಳಗ್ಗೆ ಕಾಲೇಜಿನಿಂದ ಆತನ ತಂದೆಗೆ ಕರೆ ಮಾಡಿ, ನಿಮ್ಮ ಮಗ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆದಿಲ್ಲ. ಕಟ್ಟಿರುವ ಹಣವನ್ನು ವಾಪಾಸು ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಮಿತ್‌ನಲ್ಲಿ ವಿಚಾರಿಸಿದಾಗ ಆತ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಆತ ನೇರವಾಗಿ ಕಾಲೇಜಿಗೆ ಹೋಗಿ ಹಣ ವಾಪಸು ಕೇಳಿದ್ದು, ಇದರಿಂದ ಅನುಮಾನಗೊಂಡ ಕಾಲೇಜು ಸಿಬಂದಿ, ಆತನ ತಂದೆಗೆ ಮಾಹಿತಿ ನೀಡಿದ್ದಾರೆ.
ಅವರು ಅಲ್ಲಿಗೆ ಹೋದಾಗ ಆತ ಅಲ್ಲಿಂದ ತೆರಳಿದ್ದ. ಅವರು ತತ್‌ಕ್ಷಣ ಮನೆಗೆ ಕರೆಮಾಡಿ ಕೇಳಿದಾಗ ಮಧ್ಯಾಹ್ನ ಆಟೋದಲ್ಲಿ ಮನೆಗೆ ಬಂದು ಅದೇ ಆಟೋದಲ್ಲಿ ವಾಪಸು ಹೋಗಿರುವುದಾಗಿ ಯುವಕನ ತಾಯಿ ತಿಳಿಸಿದ್ದಾರೆ. ಆದರೆ ಆ ಬಳಿಕ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
6.2 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು, ಕೋಲು ಮುಖ, ಮೂಗಿನಲ್ಲಿ ಕಪ್ಪು ಮಚ್ಚೆ, ಉಬ್ಬು ಹಲ್ಲು ಇದೆ. ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಬಲ್ಲವನಾಗಿದ್ದು, ಹಳದಿ ಬಣ್ಣದ ಟಿ-ಶರ್ಟ್ ಮತ್ತು ನಸು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ. ಈತನ ಬಗ್ಗೆ ಮಾಹಿತಿಯಿದ್ದಲ್ಲಿ ಕೊಣಾಜೆ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.