Advertisement

ಸಹೋದರಿ ಸಹಿತ ಎಲ್ಲ ಮೂವರು ಆರೋಪಿಗಳ ಖುಲಾಸೆ

09:52 AM May 01, 2018 | Team Udayavani |

ಮಂಗಳೂರು: ಕೊಣಾಜೆಯ ಅಸೈಗೋಳಿಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದು ಬಹಳಷ್ಟು ಕುತೂಹಲ ಮತ್ತು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಫಜೀರು ಸುದರ್ಶನ ನಗರದ ಕಾರ್ತಿಕ್‌ರಾಜ್‌ ಕೊಲೆ ಪ್ರಕರಣದ ಆರೋಪಿಗಳಾದ ಕಾರ್ತಿಕ್‌ರಾಜ್‌ ತಂಗಿ ಕಾವ್ಯಶ್ರೀ, ಕುತ್ತಾರು ಸಂತೋಷ ನಗರದ ಗೌತಮ್‌ ಮತ್ತು ಆತನ ಸೋದರ ಗೌರವ್‌ ಅವರನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

Advertisement

ಆರೋಪಿಗಳ ಮೇಲಣ ಆರೋಪ ಸಾಬೀತಾಗಿಲ್ಲ ಎಂಬ ತೀರ್ಮಾನಕ್ಕೆ ಬಂದು ನ್ಯಾಯಾಧೀಶರಾದ ಕೆ.ಎಸ್‌. ಬೀಳಗಿ ಅವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳನ್ನು 2017 ಎ. 29ರಂದು ಬಂಧಿಸಲಾಗಿದ್ದು, ಸರಿಯಾಗಿ ಒಂದು ವರ್ಷದೊಳಗೆ ವಿಚಾರಣೆ ಮುಕ್ತಾಯಗೊಂಡು ಆರೋಪಿಗಳು ದೋಷಮುಕ್ತ ಹೊಂದಿದ್ದಾರೆ. 

ಸಹೋದರಿಯಿಂದ ಸಂಚು
ಮೃತ ಕಾರ್ತಿಕ್‌ರಾಜ್‌ನ ಸಹೋದರಿ ಕಾವ್ಯಶ್ರೀ ಅವರು ಶಾಶ್ವತ್‌ ಅವರನ್ನು ಮದುವೆಯಾಗಿದ್ದರು. ಪ್ರಕರಣದ ಒಂದನೇ ಆರೋಪಿ ಗೌತಮ್‌ ಕಯ್ಯ ಜತೆಯಲ್ಲಿ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಸಂಸಾರದಲ್ಲಿ ಹೊಂದಿಕೊಳ್ಳದೆ ಕಾವ್ಯಶ್ರೀ ತಾಯಿ ಮನೆಯಾದ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸುದರ್ಶನ ನಗರಕ್ಕೆ ಬಂದು ವಾಸಿಸಲು ಆರಂಭಿಸಿದ್ದಕ್ಕೆ ಆಕೆಯ ಅಣ್ಣ ಕಾರ್ತಿಕ್‌ರಾಜ್‌ ಆಕ್ಷೇಪಿಸಿ ಜಗಳ ತೆಗೆದಿದ್ದರು. ಈ ಕಾರಣಕ್ಕಾಗಿ ಕಾವ್ಯಶ್ರೀ ಬೇರೆ ಮನೆ ಮಾಡಿ ವಾಸ ಮಾಡು ತ್ತಿದ್ದು, ತನ್ನ ಅಣ್ಣನು ತಾಯಿ ಮನೆಯಲ್ಲಿ ಇರುವುದನ್ನು ಕಂಡು ಮತ್ತು ವಾಪಸ್‌ ಕಾವ್ಯಶ್ರೀ ಗಂಡ ಶಾಶ್ವತ್‌ ಮನೆಗೆ ಹೋಗಲು ಒತ್ತಾಯಿಸಿದ ದ್ವೇಷದಿಂದ ಕಾವ್ಯಶ್ರೀ ತನ್ನ ಅಣ್ಣ ಕಾರ್ತಿಕ್‌ರಾಜ್‌ನನ್ನು ಕೊಲೆ ಮಾಡಬೇಕೆಂದು ಉದ್ದೇಶಿಸಿದ್ದರು ಹಾಗೂ ಕೊಲೆ ಮಾಡುವ ಬಗ್ಗೆ ತನ್ನ ಪ್ರಿಯಕರ ಗೌತಮ್‌ ಕಯ್ಯನ ಜತೆಗೂಡಿ ಒಳಸಂಚು ನಡೆಸಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು. 

ಅದರಂತೆ 2016ರ ಅ. 22ರಂದು ಗೌತಮ್‌ ಕಯ್ಯ ಮತ್ತು ಗೌರವ್‌ ಕಯ್ಯ ಅವರು ಕಬ್ಬಿಣದ ರಾಡ್‌, ಸುತ್ತಿಗೆ ಮತ್ತು ಮೆಣಸಿನ ಹುಡಿಯನ್ನು ಹಿಡಿದು ಕೊಂಡು ಮನೆಯಿಂದ ಹೊರಟು ಕೊಣಾಜೆ ಗ್ರಾಮದ ಗಣೇಶ ಮಹಲ್‌ ಎಂಬಲ್ಲಿಗೆ ಬಂದು ರಸ್ತೆ ಬದಿಯ ಪೊದೆಯಲ್ಲಿ ಅಡಗಿ ಕುಳಿ ತಿದ್ದರು. ಬೆಳಗ್ಗೆ 5.30 ಗಂಟೆಗೆ ಪಜೀರು ಕಡೆಯಿಂದ ಜಾಗಿಂಗ್‌ ಮಾಡಿಕೊಂಡು ಬರುತ್ತಿದ್ದ ಕಾರ್ತಿಕ್‌ರಾಜ್‌ನನ್ನು ನೋಡಿದ ಆರೋಪಿಗಳು, ಬೈಕ್‌ ಕೆಟ್ಟು ಹೋಗಿದೆ ಎಂದು ನೆಪ ಹೇಳಿದರು. ಆಗ ಕಾರ್ತಿಕ್‌ರಾಜ್‌ ಬೈಕ್‌ ಅನ್ನು ನೋಡುತ್ತಿದ್ದಂತೆ 2ನೇ ಆರೋಪಿ ಗೌರವ್‌ ಕಯ್ಯ, ಕಾರ್ತಿಕ್‌ರಾಜ್‌ನ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದು ಗೌತಮ್‌ ಕಯ್ಯ ಹಿಂದಿನಿಂದ ಬಂದು ಕಾರ್ತಿಕ್‌ರಾಜ್‌ನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದನು. ಗಾಯಗೊಂಡ ಕಾರ್ತಿಕ್‌ರಾಜ್‌ ಮರುದಿನ ಸಾವ ನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಆದರೆ ಈ ಕೊಲೆ ಪ್ರಕರಣದ ಹಿಂದೆ ಕೋಮು ಶಕ್ತಿಗಳ ಕೈವಾಡವಿರುವುದಾಗಿ ಆರೋಪಿಸಿ ಕೆಲವು ಹಿಂದೂ ಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆ ಸಿದ್ದವು. ಇನ್ನೊಂದೆಡೆ ಮಂಗಳೂರು ಸಂಸದರು ಪ್ರತಿಭಟನೆ ನಡೆಸಿ, ಠಾಣೆಗೆ ಬೆಂಕಿ ಹಾಕುವುದಾಗಿ ಹೇಳಿಕೆ ನೀಡಿದ್ದರು ಮತ್ತು ಈ ಬಗ್ಗೆ ಸಂಸದರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

Advertisement

ಕ್ಷಿಪ್ರ ತೀರ್ಪು
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿ ಕೊಂಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್‌. ಬೀಳಗಿ ಅವರು 33 ಜನ ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದರು. 1 ಮತ್ತು 2ನೇ ಆರೋಪಿಗಳ ಪರವಾಗಿ ವಕೀಲರಾದ ವೇಣು ಕುಮಾರ್‌ ಮತ್ತು ಯುವರಾಜ್‌ ಕೆ. ಅಮೀನ್‌ ವಾದಿಸಿದ್ದು, 3ನೇ ಆರೋಪಿ ಕಾವ್ಯಶ್ರೀ ಪರವಾಗಿ ದಯಾನಂದ ಎ. ಅವರು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ
ಕಾರ್ತಿಕ್‌ರಾಜ್‌ ಎಂದಿನಂತೆ 2016 ಅ. 22ರಂದು ಬೆಳಗ್ಗೆ 5.30ಕ್ಕೆ ಜಾಗಿಂಗ್‌ಗೆ ಹೋಗಿದ್ದ ಸಂದರ್ಭ ಅಸೈಗೋಳಿಯಲ್ಲಿ ಕೊಣಾಜೆ ಪೊಲೀಸ್‌ ಠಾಣೆ ಸಮೀಪ ರಸ್ತೆಯಲ್ಲಿ ಅವರ ಗಮನ ಬೇರೆ ಕಡೆ ಸೆಳೆದು ತಲೆಗೆ ಬಲವಾದ ಆಯುಧದಿಂದ ಹೊಡೆದು ಗಾಯಗೊಳಿಸಲಾಗಿತ್ತು. ರಸ್ತೆಯಲ್ಲಿ ಬಿದ್ದಿದ್ದ ಅವರನ್ನು ಸಾರ್ವಜನಿಕರು ಮತ್ತು ಕೊಣಾಜೆ ಪೊಲೀಸರ ಸಹಾಯದಿಂದ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ವರೂಪದ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅ. 23ರಂದು ಸಾವನ್ನಪ್ಪಿದ್ದರು. ಕಾರ್ತಿಕ್‌ರಾಜ್‌ ಬಿಜೆಪಿ ಕಾರ್ಯಕರ್ತರೂ ಆಗಿದ್ದರಿಂದ ಈ ಪ್ರಕರಣ ಕುತೂಹಲ ಕೆರಳಿಸಿತ್ತು. 
ಬಹಳಷ್ಟು ಶ್ರಮಿಸಿದ್ದರೂ ಪ್ರಕರಣದ ಆರೋಪಿಗಳ ಪತ್ತೆಯಾಗಿರಲಿಲ್ಲ. ಬಳಿಕ ವಿಶೇಷ ಪೊಲೀಸ್‌ ತನಿಖಾ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಬಗ್ಗೆ ಪೊಲೀಸರ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೂಲಂಕಷ ಮಾಹಿತಿಯನ್ನು ಕಲೆ ಹಾಕಿದಾಗ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿರುವ ಮೃತ ಕಾರ್ತಿಕ್‌ರಾಜ್‌ನ ತಂಗಿ ಕಾವ್ಯಶ್ರೀ ಅದೇ ಆಸ್ಪತ್ರೆಯಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿರುವ ಗೌತಮ್‌ ಕಯ್ಯ ಹಾಗೂ ಆತನ ಸಹೋದರ ಎಂಜಿನಿಯರಿಂಗ್‌ ಕಾಲೇಜೊಂದರ ವಿದ್ಯಾರ್ಥಿ ಗೌರವ್‌ ಕಯ್ಯ ಅವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದು ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next