ಮಡಿಕೇರಿ: ನರಿಯಂದಡ ವ್ಯಾಪ್ತಿಯ ಕೋಕೇರಿ ಶ್ರೀಭಗವತಿ ದೇವಾಲಯದಲ್ಲಿ ನೀಲಿಯಾಟ್ ಸಾರ್ಥಾವು ಪ್ರಯುಕ್ತ ನಡೆದ “ಕೊಂಬಾಟ್ ನಮ್ಮೆ”ಗೆ ಶ್ರದ್ಧಾಭಕ್ತಿಯ ತೆರೆ ಬಿದ್ದಿದೆ. ಕಳೆದ ಮೂರು ವಾರಗಳಿಂದ ಆಚರಣೆಯಲ್ಲಿದ್ದ ಹಬ್ಬದ ಕಟ್ಟುಪಾಡುಗಳಿಗೆ ಎಂಟು ಕೊಡವ ಕುಟುಂಬಗಳು ಸೇರಿದಂತೆ ಗ್ರಾಮಸ್ಥರು ಸಾಕ್ಷಿಯಾದರು.
ಪ್ರಕೃತಿ ಸಿರಿಯ ಕೊಡಗಿನ ವಿಶಿಷ್ಟ ಆಚರಣೆಗಳಲ್ಲಿ “ಕೊಂಬಾಟ್ ನಮ್ಮೆ” ಕೂಡ ಒಂದು. ಕೋಕೇರಿ ಗ್ರಾಮದಲ್ಲಿ ತಲೆತಲಾಂತರಗಳಿಂದ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀಭಗವತಿ ದೇವಾಲಯಕ್ಕೆ ನೀಲಿಯಾಟ್ ಬನದಿಂದ ಭಂಡಾರ ತಂದ ನಂತರ ಹಬ್ಬ ಆರಂಭಗೊಳ್ಳುತ್ತದೆ.
ಒಟ್ಟು ಎಂಟು ಕೊಡವ ಕುಟುಂಬಗಳು ನೀಲಿಯಾಟ್ ಸಾರ್ಥಾವು ಪ್ರಯುಕ್ತ “ಕೊಂಬಾಟ್ ನಮ್ಮೆ” ಯನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷ. ಚೇನಂಡ, ಮಚ್ಚಂಡ, ಪೆಮ್ಮಂಡ, ಮೂಡೆರ, ಬಿದ್ದಂಡ, ಪೊನ್ನಚಂಡ, ಚೇರುವಾಳಂಡ ಮತ್ತು ಕುಮ್ಮಂಡ ಕುಟುಂಬಗಳ ಸದಸ್ಯರು ಒಂದು ತಿಂಗಳ ಕಾಲ ಹಬ್ಬದ ಕಟ್ಟುಪಾಡನ್ನು ಅನುಸರಿಸುತ್ತಾರೆ. ಪ್ರತಿವರ್ಷ ನ.23 ರಂದು ಹಬ್ಬಕ್ಕೆ ಚಾಲನೆ ದೊರೆಯುತ್ತದೆ. ಡಿ.4 ರಿಂದ ಆರಂಭಗೊಳ್ಳುವ ಹಬ್ಬದ ಕಟ್ಟುಪಾಡುಗಳು ಡಿ.16 ರಂದು “ಕೊಂಬಾಟ್ ನಮ್ಮೆ”ಯ ಮೂಲಕ ಕೊನೆಗೊಳ್ಳುತ್ತದೆ.
ಕಟ್ಟು ಬಿದ್ದ ದಿನದಿಂದ ದಿನ ಬಿಟ್ಟು ದಿನ ಬಿಲ್ಲು, ಕೊಂಬು, ನವಿಲು ಗರಿ, ಕತ್ತಿಯಾಟ್ ಗಳು ನಡೆಯುತ್ತವೆ. ಸುಮಾರು 60 ಮಂದಿ ‘ನಮ್ಮೆ’ಯಲ್ಲಿ (ಹಬ್ಬದಲ್ಲಿ) ಪ್ರಮುಖ ಪಾತ್ರ ವಹಿಸುವುದರೊಂದಿಗೆ ವಿವಿಧ ನೃತ್ಯ ಪ್ರಕಾರಗಳ ಸೇವೆಯನ್ನು ಅರ್ಪಿಸುತ್ತಾರೆ. ಸುಮಾರು ಮೂರು ವಾರಗಳ ಕಾಲ ಕಠಿಣ ವ್ರತಾಚರಣೆಯಲ್ಲಿರುವ ಇವರು ಪ್ರತಿದಿನ ಹೊಸ ನೀರಿನಲ್ಲಿ ತಯಾರಿಸಿದ ಶುದ್ಧವಾದ ಆಹಾರವನ್ನು ಸೇವಿಸುತ್ತಾರೆ. ರಾತ್ರಿ ವೇಳೆ ಮನೆಯ ಹೊರ ಭಾಗದಲ್ಲಿ ಪ್ರಕೃತಿಗೆ ಮೈಯೊಡ್ಡಿ ನಿದ್ರಿಸುವ ಕ್ರಮವೂ ಆಚರಣೆಯಲ್ಲಿದೆ.
ಒಟ್ಟಿನಲ್ಲಿ ಶ್ರೀಭಗವತಿ ದೇವಾಲಯದಲ್ಲಿ ನಡೆದ ಅತ್ಯಂತ ಕಟ್ಟುನಿಟ್ಟಿನ ಮತ್ತು ಶ್ರದ್ಧಾಭಕ್ತಿಯ “ಕೊಂಬಾಟ್ ನಮ್ಮೆ” ಕೊಡಗಿನ ವಿಶಿಷ್ಟ ಸಂಸ್ಕøತಿಗೆ ಸಾಕ್ಷಿಯಾಯಿತು.