Advertisement

ಬ್ರೇಕ್‌ ಕೆ ಬಾದ್‌ ಕೋಮಲ್‌ ನಗೆಹಬ್ಬ: ತೆರೆಗೆ ಬಂತು ‘ಉಂಡೆನಾಮ’

11:34 AM Apr 14, 2023 | Team Udayavani |

ಕಾಮಿಡಿ ನಟರಾಗಿ ಬೇಡಿಕೆಯಲ್ಲಿದ್ದ ಕೋಮಲ್‌ ಹೀರೋ ಆಗಿ ಅನೇಕ ಸಿನಿಮಾಗಳನ್ನು ಮಾಡಿದ್ದು ನಿಮಗೆ ಗೊತ್ತೇ ಇದೆ. ಆದರೆ, ಏಕಾಏಕಿ ಕೋಮಲ್‌ ಸಿನಿಮಾದಿಂದ ಗ್ಯಾಪ್‌ ತೆಗೆದುಕೊಂಡು ತಮ್ಮದೇ “ಲೋಕ’ದಲ್ಲಿದ್ದರು. 2019ರಲ್ಲಿ ಬಿಡುಗಡೆಯಾದ “ಕೆಂಪೇಗೌಡ’ ಬಿಟ್ಟರೆ ಆ ನಂತರ ಕೋಮಲ್‌ ನಟನೆಯ ಯಾವ ಸಿನಿಮಾವೂ ತೆರೆಕಂಡಿರಲಿಲ್ಲ. ಈಗ ಕೋಮಲ್‌ ಕಂಬ್ಯಾಕ್‌ ಆಗಿದ್ದಾರೆ. ಅದು “ಉಂಡೆ ನಾಮ’ ಮೂಲಕ. ಈ ಚಿತ್ರ ಇಂದು ತೆರೆಕಾಣುತ್ತಿದೆ.

Advertisement

ಕೋಮಲ್‌ ಅವರ ವಿಭಿನ್ನ ಮ್ಯಾನರೀಸಂ, ಟೈಮಿಂಗ್‌ ನೋಡಿ ನಕ್ಕು ಖುಷಿಪಟ್ಟವರಿಗೆ “ಉಂಡೆನಾಮ’ದಲ್ಲಿ ಅದೆಲ್ಲವೂ ಸಿಗಲಿದೆ. ಈ ವಿಶ್ವಾಸ ಸ್ವತಃ ಕೋಮಲ್‌ ಅವರಿಗೂ ಇದೆ.

“ಈ ಸಿನಿಮಾದ ಮೂಲ ಉದ್ದೇಶ ಪ್ರೇಕ್ಷಕರನ್ನು ನಗಿಸುವುದು. ಆ ಕೆಲಸ ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಆಗಿದೆ. ಜನ ಈ ಸಿನಿಮಾ ನೋಡಿ ಮುಕ್ತ ಮನಸ್ಸಿನಿಂದ ನಗುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೇ ಸಿನಿಮಾ ನೋಡಿದವರು ಖುಷಿಪಟ್ಟಿದ್ದಾರೆ. ಇವತ್ತಿನ ಜನರಿಗೆ ನಗುಬೇಕು. ಅದೆಲ್ಲವೂ “ಉಂಡೆನಾಮ’ ಚಿತ್ರದಲ್ಲಿದೆ.ಎಲ್ಲ ವರ್ಗದ ಮತ್ತು ಎಲ್ಲ ವಯೋಮಾನದ ಪ್ರೇಕ್ಷಕರು ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾ ಮಾಡಿದ್ದೇವೆ. ಆಡಿಯನ್ಸ್‌ ನಮ್ಮ ಸಿನಿಮಾ ಮೆಚ್ಚಿಕೊಂಡರೆ, ನಮ್ಮ ಪ್ರಯತ್ನ ಸಾರ್ಥಕ’ ಎನ್ನುವುದು ಕೋಮಲ್‌ ಮಾತು.

ಬ್ರೇಕ್‌ ತಗೊಂಡಿದ್ದ ಬಗ್ಗೆ ಮಾತನಾಡುವ ಕೋಮಲ್‌, “ಆಗ ನನ್ನ ಸಮಯ ಸರಿ ಇರಲಿಲ್ಲ. ನಮ್ಮ ಗುರುಗಳು “ಸದ್ಯಕೆ ಯಾವುದೇ ಕಾರ್ಯಕ್ಕೆ ಮುಂದಾಗಬೇಡ ಎಂದಿದ್ದರು. ಅದರಂತೆ ಸುಮ್ಮನಿದ್ದೇ, ಈಗ ಮತ್ತೆ ಬಂದಿದ್ದೇನೆ. ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಖುಷಿಯ ವಿಚಾರವೆಂದರೆ ಎಲ್ಲವೂ ಒಳ್ಳೆಯ ಸ್ಕ್ರಿಪ್ಟ್. ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬಂತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಸಿನಿಮಾಗಳು ನನ್ನಿಂದ ಬರಲಿದೆ’ ಎನ್ನುತ್ತಾರೆ ಕೋಮಲ್‌

“ಇಡೀ ಚಿತ್ರತಂಡ ಸಹಕಾರದಿಂದ ಇಂಥದ್ದೊಂದು ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು. ಕೋಮಲ್‌ ಅವರ ಕಾಮಿಡಿಯನ್ನು ಇಷ್ಟುದಿನ ಮಿಸ್‌ ಮಾಡಿಕೊಳ್ಳುತ್ತಿದ್ದವರಿಗೆ ಕೋಮಲ್‌ ಮತ್ತೆ ಮನರಂಜಿಸಲಿದ್ದಾರೆ. ನಮ್ಮ ನಡುವಿನ ಹಾಸ್ಯದ ಕಥೆಯೊಂದನ್ನು ಈ ಸಿನಿಮಾದಲ್ಲಿ ತೆರೆಮೇಲೆ ಹೇಳಿದ್ದೇವೆ. ಈಗಾಗಲೇ ಎಲ್ಲ ಕಡೆಗಳಿಂದಲೂ “ಉಂಡೆನಾಮ’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಥಿಯೇಟರ್‌ ನಲ್ಲೂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ರಾಜಶೇಖರ್‌.

Advertisement

ಕೋಮಲ್‌ ಅವರೊಂದಿಗೆ ಹರೀಶ್‌ ರಾಜ್‌, ಧನ್ಯಾ ಬಾಲಕೃಷ್ಣ, ತಬಲಾನಾಣಿ, ಅಪೂರ್ವಾ, ವೈಷ್ಣವಿ, ತನಿಷಾ ಕುಪ್ಪಂಡ, ಬ್ಯಾಂಕ್‌ ಜನಾರ್ಧನ್‌ ಮುಂತಾದವರು “ಉಂಡೆನಾಮ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಎನ್‌. ಕೆ ಸ್ಟುಡಿಯೋಸ್‌’ ಬ್ಯಾನರ್‌ ಅಡಿಯಲ್ಲಿ ಸಿ. ನಂದ ಕಿಶೋರ್‌ ನಿರ್ಮಿಸಿರುವ “ಉಂಡೆನಾಮ’ ಸಿನಿಮಾಕ್ಕೆ “ಮಜಾ ಟಾಕೀಸ್‌’ ಖ್ಯಾತಿಯ ಸಂಭಾಷಣೆಗಾರ ಕೆ. ಎಲ್. ರಾಜಶೇಖರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್‌ ಸಂಭ್ರಮ ಸಂಗೀತ ಸಂಯೋಜಿಸಿದ್ದು, ನವೀನ್‌ ಕುಮಾರ್‌ ಛಾಯಾಗ್ರಹಣ, ಕೆ. ಎಂ ಪ್ರಕಾಶ್‌ ಸಂಕಲನವಿದೆ.

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next