Advertisement
ಮೂಲೆತ್ತಡ್ಕ ಉದಯ ಭಟ್ ಅವರ ತೋಟದಲ್ಲಿ ನಿರ್ಮಿಸಿದ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಾದ ಕೊಳ್ತಿಗೆ ಗ್ರಾಮದ ಕೆಂಪುಗುಡ್ಡೆ ಗುಡ್ಡಪ್ಪ ಗೌಡ ಎಂಬವರ ಪುತ್ರಿ ಪ್ರಜ್ಞಾ (12) ಹಾಗೂ ದಾಮೋದರ ಗೌಡ ಎಂಬವರ ಪುತ್ರಿ ಸಂಜನಾ (9) ಜೀವ ಕಳೆದುಕೊಂಡಿದ್ದು, ಊರಲ್ಲೇ ನೀರವ ಆವರಿಸುವಂತೆ ಮಾಡಿದೆ.
ಪೆರ್ಲಂಪಾಡಿ ಶಾಲಾ ನಾಯಕಿಯಾಗಿರುವ ಪ್ರಜ್ಞಾ ಪ್ರತಿಭಾನ್ವಿತೆ. ತನ್ನ ಚುರುಕುತನದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಶಾಲೆಯ ಎಲ್ಲ ಚಟುವಟಿಕೆಯಲ್ಲೂ ಆಕೆ ಮುಂದಿದ್ದಳು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪ್ರವಾಸ ಆಯೋಜಿಸುವಂತೆ ಮುಖ್ಯ ಗುರುಗಳಲ್ಲಿ ಕೆಲ ದಿನಗಳ ಹಿಂದಷ್ಟೇ ವಿನಂತಿಸಿದ್ದಳು. ಆದರೆ ಮುಖ್ಯಶಿಕ್ಷಕ ಲಕ್ಷ್ಮಣ ನಾಯ್ಕ, ವಾರ್ಷಿಕೋತ್ಸವದಲ್ಲಿ ನೀವೆಲ್ಲ ಸಂಭ್ರಮಿಸಿದ್ದೀರಿ. ಶಾಲೆಯ ಪ್ರತಿ ಕಾರ್ಯಕ್ರಮಕ್ಕೂ ಹೆತ್ತವರು ಧನಸಹಾಯ ನೀಡುತ್ತಿದ್ದು, ಪ್ರವಾಸ ಆಯೋಜಿಸಿದರೆ ಬಡ ಮಕ್ಕಳ ಹೆತ್ತವರಿಗೆ ಹೊರೆಯಾಗುತ್ತದೆ ಎಂದು ಪ್ರಜ್ಞಾಗೆ ಮನವರಿಕೆ ಮಾಡಿಕೊಟ್ಟಿದ್ದರು.
Related Articles
Advertisement
ಬಡ ಕುಟುಂಬಇಬ್ಬರೂ ವಿದ್ಯಾರ್ಥಿನಿಯರ ಕುಟುಂಬಗಳು ಬಡತನದಲ್ಲಿದ್ದು, ದುಡಿಮೆಯನ್ನೇ ನೆಚ್ಚಿಕೊಂಡಿವೆ. ಮಕ್ಕಳ ಭವಿಷ್ಯದ ಕುರಿತು ಸುಂದರ ಕನಸು ಕಂಡಿದ್ದ ಮನೆಯವರಿಗೆ ವಿಧಿ ಕ್ರೂರವಾಗಿ ಕಾಡಿದೆ. ನೀರಿನ ತೊಟ್ಟಿಯಲ್ಲಿ ಕಾದಿತ್ತು ಸಾವು!
ಪ್ರಜ್ಞಾ ಹಾಗೂ ಸಂಜನಾ ಮನೆ ಮಧ್ಯೆ 100 ಮೀ. ಅಂತರವಿದೆ. ಶನಿವಾರ ಜ್ವರವಿದ್ದ ಕಾರಣ ಪ್ರಜ್ಞಾ ಶಾಲೆಗೆ ಹೋಗಿರಲಿಲ್ಲ. ಮಧ್ಯಾಹ್ನದ ವೇಳೆಗೆ ತಾಯಿಯ ಜತೆಗೆ ಬೆಳ್ಳಾರೆಗೆ ಔಷಧಿ ತರಲು ಹೋಗಿದ್ದು, ಪ್ರವಾಸಕ್ಕಾಗಿ ಬಳೆ, ಕಿವಿಯೋಲೆ ಇತ್ಯಾದಿಗಳನ್ನು ಖರೀದಿಸಿ ತಂದಿದ್ದಳು. ಸಂಜೆ ಸಂಜನಾಳ ಮನೆಗೆ ತೆರಳಿದ್ದ ಪ್ರಜ್ಞಾ ಅಲ್ಲಿ ವಾರ್ಷಿಕೋತ್ಸವದ ದಿನ ಮಾಡಿದ್ದ ನೃತ್ಯವನ್ನು ಮತ್ತೂಮ್ಮೆ ಮಾಡಿ, ಬಳಿಕ ಮನೆ ಸಮೀಪದ ಮೂಲೆತ್ತಡ್ಕ ಉದಯ ಭಟ್ ಅವರ ಜಾಗದಲ್ಲಿದ್ದ 80ಗಿ45 ಅಡಿ ಅಗಲ ಹಾಗೂ 13 ಅಡಿ ಆಳದ ನೀರಿನ ತೊಟ್ಟಿ ಬಳಿ ಆಡಲು ತೆರಳಿದ್ದರು. ತೊಟ್ಟಿಯ ಬದಿಯಲ್ಲಿ ಕುಳಿತು, ಕಾಲುಗಳನ್ನು ನೀರಲ್ಲಿ ಇಳಿಬಿಟ್ಟು ಆಡುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಕಲ್ಲನ್ನೂ ಮಾತಾಡಿಸಬಲ್ಲ ಹುಡುಗಿ!
ಅವಳಿ ಮಕ್ಕಳಾಗಿರುವ ಸಂಜನಾ ಮತ್ತು ಸಿಂಚನಾ ಇಬ್ಬರೂ ಮಾತಿನ ಮಲ್ಲಿಯರು. ಸದಾ ಜತೆಯಾಗಿಯೇ ಇರುತ್ತಿದ್ದ ಪ್ರಜ್ಞಾ ಹಾಗೂ ಸಂಜನಾ ಸಾವಿನಲ್ಲೂ ಒಂದಾಗಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ರವಿವಾರ ಮಧ್ಯಾಹ್ನ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮಧ್ಯಾಹ್ನದ ವೇಳೆಗೆ ಪ್ರಜ್ಞಾಳ ಮನೆ ಪಕ್ಕದಲ್ಲೇ ಒಂದೇ ಚಿತೆಯಲ್ಲಿ ಇಬ್ಬರಿಗೂ ಅಂತಿಮ ಸಂಸ್ಕಾರ ನಡೆಸಲಾಯಿತು. ನೆರೆದಿದ್ದವರು ಎಳೆಯ ಜೀವಗಳಿಗೆ ಕಣ್ಣೀರಿನ ವಿದಾಯ ಹೇಳಿದರು. ಮೂಕ ಸಾಕ್ಷಿಯಾಗಿದ್ದವು ಮಕ್ಕಳ ಚಪ್ಪಲಿಗಳು
ಮಕ್ಕಳು ಸಂಜೆಯಾದರೂ ಸಂಜೆಯಾದರೂ ವಾಪಸ್ ಬಂದಿಲ್ಲವೆಂದು ಮನೆಯವರು ಕೂಗಿ ಕರೆದಿದ್ದಾರೆ. ಉತ್ತರ ಬಾರದೇ ಇದ್ದಾಗ ಹುಡುಕಲು ತೆರಳಿದ್ದಾರೆ. ಸಂಜನಾಳ ತಾಯಿ ಜ್ಯೋತಿ ಅವರಿಗೆ ತೊಟ್ಟಿಯ ಪಕ್ಕದಲ್ಲಿ ಚಪ್ಪಲಿಗಳು ಕಂಡಿವೆ. ತತ್‌ಕ್ಷಣ ಬೊಬ್ಬೆ ಹಾಕಿದರು. ಪಕ್ಕದ ಮನೆಯ ಅಜ್ಜಿ ನೀಲಮ್ಮ ಏನೋ ಅನಾಹುತವಾಗಿದೆ ಎಂದು ಧಾವಿಸಿ ಬಂದು, ಎಲ್ಲರನ್ನೂ ಕೂಗಿ ಕರೆದಿದ್ದಾರೆ. ಸ್ಥಳೀಯರಾದ ಜನಾರ್ದನ ಗೌಡ ಪೆರ್ಲಂಪಾಡಿ, ಕೇಶವ ಗೌಡ ಕಾನತ ಬರಿ, ಗಂಗಾಧರ ಕೂರೇಲು ಮತ್ತಿತರರ ಸಹಾಯದಿಂದ ಮಕ್ಕಳ ದೇಹಗಳನ್ನು ತೊಟ್ಟಿಯಿಂದ ಮೇಲೆತ್ತಲಾಯಿತು. ದುರ್ಗಮ ಹಾದಿ ಪಯಣ
ಪೆರ್ಲಂಪಾಡಿಯಿಂದ ಮೂಲೆತ್ತಡ್ಕ, ಕೆಂಪುಗುಡ್ಡೆ ಸಂಪರ್ಕಿಸುವ ಮಾರ್ಗವು ತೀರಾ ಹದೆಗೆಟ್ಟಿದ್ದು, ಸಂಚಾರಕ್ಕೆ ದುರ್ಗಮವಾಗಿದೆ. ಕಿತ್ತು ಹೋದ ಡಾಮರು ರಸ್ತೆ, ಹೊಂಡಗುಂಡಿಗಳ ಕಚ್ಚಾ ರಸ್ತೆ ಇದು. ಪೆರ್ಲಂಪಾಡಿಗೆ ಮಕ್ಕಳೂ ಇದೇ ದಾರಿಯಾಗಿ 3 ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕಿದೆ. ಇಂತಹ ಘಟನೆಗಳಿಂದ ಹಳ್ಳಿಗಾಡಿನ ಸಮಸ್ಯೆಗಳು ಸಾರ್ವಜನಿಕರ ಗಮನಕ್ಕೆ ಬರುತ್ತವೆ. ಈ ರಸ್ತೆ ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರವೀಣ್ ಚೆನ್ನಾವರ