ಚೆನ್ನೈ: ʼಜೈಲರ್ʼ ಬಳಿಕ ಸೂಪರ್ ಸ್ಟಾರ್ ರಜಿನಿಕಾಂತ್ ‘ತಲೈವರ್ 170’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಅವರ ‘ತಲೈವರ್ 170′ ಸಿನಿಮಾದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ʼತಲೈವರ್ 171ʼ ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್ನ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ತಮಿಳು ಸಿನಿಮಾರಂಗದ ಖ್ಯಾತ ಸ್ಟಾರ್ ಗಳು ಇರಲಿದ್ದಾರೆ ಎನ್ನುವ ಮಾತೊಂದು ಸಿನಿಮಾ ಸಟ್ಟೇರುವ ಮುನ್ನವೇ ಹರಿದಾಡುತ್ತಿದೆ.
ರಜಿನಿಕಾಂತ್ ಅವರೊಂದಿಗಿನ ಸಿನಿಮಾಕ್ಕಾಗಿ ಲೋಕೇಶ್ ಕನಕರಾಜ್ ಅವರು ಸಾಕಷ್ಟು ತಯಾರಿಯಲ್ಲಿ ನಿರತರಾಗಿದ್ದಾರೆ. ಪಾತ್ರವರ್ಗಗಳ ಚರ್ಚೆ ನಡೆಯುತ್ತಿರುವ ವೇಳೆ ಸ್ಟಾರ್ ನಟರೊಬ್ಬರು ʼತಲೈವಾʼ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಎನ್ನುವ ವರದಿಯೊಂದು ಹೊರಬಿದ್ದಿದೆ.
ʼಮಾವೀರನ್’ ನಟ ಶಿವಕಾರ್ತಕೇಯನ್ ರಜಿನಿಕಾಂತ್ ದೊಡ್ಡ ಅಭಿಮಾನಿಯಲ್ಲಿ ಒಬ್ಬರು. ಅನೇಕ ಸಂದರ್ಶನದಲ್ಲಿ ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಈ ಹಿಂದೆ ರಜಿನಿ ಅವರ ಧ್ವನಿಯನ್ನು ಮಿಮಿಕ್ರಿ ಮಾಡಿದ್ದರು. ಇದೀಗ ತನ್ನ ಸ್ಪೂರ್ತಿದಾಯಕ ನಾಯಕನ ಜತೆ ಶಿವಕಾರ್ತಿಕೇಯನ್ ನಟಿಸಲಿದ್ದಾರೆ ಎನ್ನುವ ವರದಿಯೊಂದು ಬಂದಿದೆ.
ಮೂಲಗಳ ಪ್ರಕಾರ ರಜಿನಿಕಾಂತ್ – ಲೋಕೇಶ್ ಅವರ ʼತಲೈವರ್ 171ʼ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕಾಲಿವುಡ್ ನಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಸದ್ಯ ಬಹು ನಿರೀಕ್ಷಿತ ʼಅಯಾಲನ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣಲಿದೆ. ಇತ್ತ ರಜಿನಿಕಾಂತ್ ಟಿಜೆ ಜ್ಞಾನವೇಲ್ ಅವರ ʼತಲೈವರ್ 170ʼ ದಲ್ಲಿ ಬ್ಯುಸಿಯಾಗಿದ್ದಾರೆ.