ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ʼಜೈಲರ್ʼ ಬಾಕ್ಸ್ ಆಫೀಸ್ ಕಲೆಕ್ಷನ್ ಮುಂದುವರೆದಿದೆ. ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದರೂ ಹೌಸ್ ಫುಲ್ ಪ್ರದರ್ಶನ ಮಾತ್ರ ಇನ್ನು ಕೂಡ ಕಡಿಮೆಯಾಗಿಲ್ಲ. ರಜಿನಿಕಾಂತ್ ಅವರನ್ನು ಎರಡು ವರ್ಷದ ಬಳಿಕ ಬಿಗ್ ಸ್ಕ್ರೀನ್ ನಲ್ಲಿ ನೋಡಲು ಜನ ಥಿಯೇಟರ್ ನತ್ತ ಹರಿದು ಬರುತ್ತಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ಅವರ ʼಜೈಲರ್ʼ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ವೀಕೆಂಡ್ ಮಾತ್ರವಲ್ಲದೇ ವೀಕ್ ಡೇಸ್‌ನಲ್ಲೂ ʼಜೈಲರ್ʼ ಹೌಸ್ ಫುಲ್ ಆಗಿರುವುದರ ಜೊತೆಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಬುಧವಾರ (ಆ.16 ರಂದು) ಭಾರತದಲ್ಲಿ 15 ಕೋಟಿಗೂ ಅಧಿಕ ಕಲೆಕ್ಷನ್ ʼಜೈಲರ್ʼ ಮಾಡಿದೆ. ಯಾವುದೇ ಸಿನಿಮಾವೊಂದು ವಾರದ ಮಧ್ಯದದಲ್ಲಿ ಇಷ್ಟು ಕಲೆಕ್ಷನ್ ಮಾಡುವುದು ಅಪರೂಪ. ಈ ಮೂಲಕ ʼಜೈಲರ್ ʼ ಏಳು ದಿನಗಳಲ್ಲಿ ಕಮಲ್ ಹಾಸನ್ ಅವರ ‘ವಿಕ್ರಮ್’ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ನ್ನು ಮೀರಿಸಿದೆ.
ಆಗಸ್ಟ್ 10 ರಂದು ತೆರೆಕಂಡ ಜೈಲರ್, ವರ್ಲ್ಡ್ ವೈಡ್ ಬೇರೆ ಬೇರೆ ಭಾಷೆಗಳಲ್ಲಿ ತೆರೆಕಂಡಿದೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಜೈಲರ್ ಭಾರತದಲ್ಲಿ 225.65 ಕೋಟಿ ಕಲೆಕ್ಷನ್ ಮಾಡಿದೆ.
ಭಾರತದ ಹೊರತಾಗಿ ಯುಎಸ್ಎ, ಯುಎಇ, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲೂ ‘ಜೈಲರ್’ ಅಮೋಘ ಪ್ರದರ್ಶನ ನೀಡುತ್ತಿದೆ. ʼಜೈಲರ್ʼ ಯುಎಸ್ ಎ ನಲ್ಲಿ ʼಕಬಾಲಿʼ ಚಿತ್ರದ ಕಲೆಕ್ಷನ್ ನ್ನು ಮೀರಿಸಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದರ ಜೊತೆಗೆ ರಜಿನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಕೇವಲ ಒಂದು ವಾರದಲ್ಲಿ ಕಮಲ್ ಹಾಸನ್ ಅವರ ‘ವಿಕ್ರಮ್’ ಚಿತ್ರದ ಜೀವಮಾನದ ಕಲೆಕ್ಷನ್ ನ್ನು ವರ್ಲ್ಡ್ ವೈಡ್ ನಲ್ಲಿ ಹಿಂದಿಕ್ಕಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಜೈಲರ್’ ಚಿತ್ರದಲ್ಲಿ ರಜಿನಿಕಾಂತ್, ವಿನಾಯಕನ್, ರಮ್ಯಾ ಕೃಷ್ಣನ್, ವಸಂತ ರವಿ ಮತ್ತು ತಮನ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.