Advertisement

Kolluru; ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಮೃತ್ಯು: ತಾಯಿಯ ರಕ್ಷಣೆ, ಸ್ಥಿತಿ ಗಂಭೀರ

01:10 AM Jun 30, 2024 | Team Udayavani |

ವಂಡ್ಸೆ: ಬೆಳ್ಳಾಲ ಗ್ರಾಮದ ನಂದ್ರೋಳಿಯ ಕುಕ್ಕಡಬೈಲು ಹೊಸಮನೆ ನಿವಾಸಿಗಳಾಗಿದ್ದ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿಯನ್ನು ಸ್ಥಳೀಯರು ಕಾಪಾಡಿದ್ದಾರೆ. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಧನರಾಜ್‌(13) ಹಾಗೂ ಆತನ ಸಹೋದರಿ, 1ನೇ ತರಗತಿಯ ಛಾಯಾ (7) ಮೃತಪಟ್ಟವರು. ಅವರು ಮಧ್ಯಾಹ್ನ ತರಗತಿ ಮುಗಿದ ಬಳಿಕ ಶಾಲಾ ವಾಹನದಲ್ಲಿ ಮನೆಗೆ ತೆರಳಿದ್ದರು. ಬಸ್ಸಿನಿಂದಿಳಿದ ಮಕ್ಕಳ ಜತೆಗೆ ತಾಯಿ ಶೀಲಾ (40) ಕೆರೆಯ ಅಂಚಿನಲ್ಲಿ ಸಾಗುತ್ತಿದ್ದಾಗ ಛಾಯಾ ಕಾಲುಜಾರಿ ಕೆರೆಗೆ ಬಿದ್ದಳು. ಕೂಡಲೇ ಆಕೆಯನ್ನು ಹಿಡಿಯಲು ಹೋದ ಧನರಾಜ್‌ ಕೂಡ ನೀರಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಶೀಲಾ ಕೆರೆಗೆ ಹಾರಿದ್ದರು ಎನ್ನಲಾಗಿದೆ.

ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿದ್ದು, ಅಪಾಯದಲ್ಲಿದ್ದ ಮಹಿಳೆಯನ್ನು ಆ ದಾರಿಯಲ್ಲಿ ತೆರಳುತ್ತಿದ್ದ ಅರಣ್ಯ ಇಲಾಖೆಯ ಅ ಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ರಕ್ಷಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಶೀಲಾ ಮಡಿವಾಳ ಅವರ ಪತಿ ಸತೀಶ ಮಡಿವಾಳ ದಾವಣಗೆರೆಯಲ್ಲಿ ಹೊಟೇಲ್‌ ಕಾರ್ಮಿಕರಾಗಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಧನರಾಜ್‌ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಮಿಮಿಕ್ರಿ ಮಾಡು ವುದರ ಮೂಲಕ ಎಲ್ಲರನ್ನು ರಂಜಿಸುತ್ತಿದ್ದ. ವಿವಿಧ ಸ್ಪರ್ಧೆಯಲ್ಲಿ ಬಹುಮಾನವನ್ನೂ ಪಡೆದಿದ್ದ. ಛಾಯಾ ಕೂಡ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

ಕೆರೆಗೆ ಆವರಣವಿಲ್ಲುದಿದ್ದುದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಕ್ಕಳ ಸಾವು ಗ್ರಾಮಸ್ಥರನ್ನು ಆಘಾತಗೊಳಿಸಿದೆ. ವಿದ್ಯಾರ್ಥಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯ ಶಿಕ್ಷಕರು ಆಸ್ಪತ್ರೆಗೆ ದೌಡಾಯಿಸಿದ್ದರು. ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ವಂಡ್ಸೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಉದಯಕುಮಾರ್‌ ಶೆಟ್ಟಿ ಮತ್ತಿತರ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ಮಗುವನ್ನು ರಕ್ಷಿಸಲು ಪೊಲೀಸರ ಪ್ರಯತ್ನ
ಕುಂದಾಪುರ: ಶೀಲಾ ಹಾಗೂ ಧನ್‌ರಾಜ್‌ನನ್ನು ಕೆರೆಯಿಂದ ಮೇಲೆತ್ತಿ ಆ್ಯಂಬುಲೆನ್ಸ್‌ ಮೂಲಕ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಈ ವೇಳೆ ಧನರಾಜ್‌ ದಾರಿ ಮಧ್ಯೆ ಸಾವನ್ನಪ್ಪಿದ್ದ. ಇವರನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಛಾಯಾಳನ್ನು ಮೇಲಕ್ಕೆತ್ತಲಾಗಿದ್ದು, ಅವರನ್ನು ಕರೆದೊಯ್ಯಲು ಆ್ಯಂಬುಲೆನ್ಸ್‌ ಇರಲಿಲ್ಲ. ಕರೆ ಮಾಡಲು ಸ್ಥಳದಲ್ಲಿ ಯಾವುದೇ ನೆಟ್‌ವರ್ಕ್‌ ಸಿಗುತ್ತಿರಲಿಲ್ಲ. ಕೂಡಲೇ ಸ್ಥಳದಲ್ಲಿದ್ದ 112 ಪೊಲೀಸ್‌ ವಾಹನದಲ್ಲಿ ಚಾಲಕ ದಿನೇಶ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ರಾಮಚಂದ್ರ ಅವರು ಆ ಮಗುವನ್ನು ಹಿಡಿದುಕೊಂಡು ಆಸ್ಪತ್ರೆಗೆ ಹೊರಟರು. ಆದರೆ ಆಗಲೇ ವಾಂತಿ ಮಾಡುತ್ತಿದ್ದ ಆ ಮಗು ದಾರಿ ಮಧ್ಯೆ ಸಾವನ್ನಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next