ಕೊಲ್ಲೂರು: ಇಲ್ಲಿನ ಸೊಸೈಟಿಗುಡ್ಡೆಯಲ್ಲಿ ಗುಡ್ಡ ಕುಸಿದು ಅಲ್ಲಿನ ನಿವಾಸಿಯೋರ್ವರ ಮನೆಕೆಲಸದಾಕೆ ಹಳ್ಳಿಬೇರು ನಿವಾಸಿ ಅಂಬಾ (55) ಅವರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.
ಅಂಬಾ ಅವರು ಕೊಲ್ಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಅಡಿಗರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಜು.4ರಂದು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಪಾತ್ರೆ ತೊಳೆಯಲೆಂದು ಮನೆಯ ಹಿಂಭಾಗಕ್ಕೆ ತೆರಳಿದ್ದಾಗ ಗುಡ್ಡ ಕುಸಿದು ಬಿದ್ದಿದೆ.
ಅಂಬಾ ಅವರ ಶರೀರದ ಮಕ್ಕಾಲು ಭಾಗವು ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದು, ಕುತ್ತಿಗೆಯ ಭಾಗ ಮಾತ್ರ ಕಾಣುತ್ತಿತ್ತು. ಕೂಡಲೇ ಸ್ಥಳೀಯರು ಸೇರಿ ಮಹಿಳೆಯನ್ನು ರಕ್ಷಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದರು.
ಗುಡ್ಡ ಕುಸಿತದಿಂದ ಮನೆಯ ಹಿಂಭಾಗವೂ ಜಖಂಗೊಂಡಿದೆ.
ಅಂಬಾ ಹಳ್ಳಿಬೆೇರು ನಿವಾಸಿಯಾಗಿದ್ದರು. ಪತಿ ಪುಟ್ಟ ಅವರು ಕೂಲಿ ಕಾರ್ಮಿಕರಾಗಿದ್ದು, ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ. ಅಡಿಗರ ಮನೆಗೆ ಬೆಳಗ್ಗೆ ಕೆಲಸಕ್ಕೆ ಬಂದು ಸಂಜೆ ಮರಳುತ್ತಿದ್ದರು.
ಸ್ಥಳಕ್ಕೆ ಕುಂದಾಪುರ ಉಪಕಮಿಷನರ್ ರಶ್ಮಿ, ಬೈಂದೂರು ತಹಶೀಲ್ದಾರ್ ಪ್ರದೀಪ್, ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.