Advertisement

Kollur: ರಸ್ತೆಯುದ್ದಕ್ಕೂ ಪ್ಲಾಸ್ಟಿಕ್‌ ಬಾಟಲಿಗಳ ತ್ಯಾಜ್ಯ

01:09 PM Dec 02, 2024 | Team Udayavani |

ಕೊಲ್ಲೂರು: ಸಾವಿರಾರು ಯಾತ್ರಾರ್ಥಿಗಳು ಆಗಮಿಸುವ ದೇಗುಲ ನಗರಿ ಕೊಲ್ಲೂರಿನಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಸವಾಲೆಂಬಂತೆ ರಸ್ತೆಯ ಉದ್ದಕ್ಕೂ ಪ್ಲಾಸ್ಟಿಕ್‌ ಬಾಟಲಿ ಸಹಿತ ತ್ಯಾಜ್ಯರಾಶಿ ತುಂಬಿಕೊಂಡಿದೆ. ಕೆಲವು ಕಡೆ ಹಸಿ ಕಸವನ್ನೂ ಎಸೆಯಲಾಗುತ್ತಿದೆ.

Advertisement

ಕೊಲ್ಲೂರು ಕ್ಷೇತ್ರ ದರ್ಶನಕ್ಕೆ ಆಗಮಿಸುವ ಭಕ್ತರು ದಣಿವಾರಿಸಲು ಬಳಸುವ ನೀರು ಮತ್ತು ತಂಪು ಪಾನೀಯಗಳ ಪ್ಲಾಸ್ಟಿಕ್‌ ಬಾಟಲಿಗಳನ್ನು ಮುಖ್ಯ ರಸ್ತೆಯಲ್ಲಿ ಎಸೆಯುತ್ತಿರುವುದರಿಂದ ಬಹುತೇಕ ಕಡೆ ಮೂಟೆಗಟ್ಟಲೆ ತ್ಯಾಜ್ಯ ಕಂಡುಬರುತ್ತಿದೆ. ಅವುಗಳ ವಿಲೇವಾರಿ ಮಾಡಲು ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಯಿಂದಾಗಿ ರಸ್ತೆಯಲ್ಲೇ ಕಸ ಬಿದ್ದಿದೆ.

ಕಾರ್ಯವ್ಯಾಪ್ತಿಯಲ್ಲಿ ಗೊಂದಲ
ಕೊಲ್ಲೂರಿನಲ್ಲಿ ಪಂಚಾಯತ್‌ ಸಿಬಂದಿ ಅಂಗಡಿ ಮುಂಗಟ್ಟುಗಳು ಹಾಗೂ ವಸತಿ ಗೃಹಗಳ ತ್ಯಾಜ್ಯ ವಿಲೇವಾರಿಗೆ ಸೀಮಿತವಾಗಿದ್ದಾರೆ. ಎಸ್‌.ಎಲ್‌. ಆರ್‌.ಎಂ. ಘಟಕ ಹಸಿಕಸಗಳ ವಿಲೇವಾರಿಗೆ ಹಿಂದೇಟು ಹಾಕುತ್ತಿದೆ. ಹೀಗಾಗಿ ರಸ್ತೆಯಲ್ಲಿ ಬಿದ್ದ ಬಾಟಲಿ ತ್ಯಾಜ್ಯ ಮತ್ತು ಹಸಿ ಕಸ ತೆಗೆಯುವುದು ಯಾರ ಜವಾಬ್ದಾರಿ ಎನ್ನುವುದೇ ನಿಗದಿಯಾಗಿಲ್ಲ. ಸ್ವತ್ಛ ಕೊಲ್ಲೂರು ಪರಿಕಲ್ಪನೆಯ ಯೋಚನೆಗೆ ಈ ರೀತಿಯ ವಿದ್ಯಮಾನದಿಂದ ಹಿನ್ನಡೆಯಾಗಿದೆ.

ಬಳಕೆಯಾಗದ ಗೋವರ್ಧನ ಘಟಕ
ಗ್ರಾ.ಪಂ. ವತಿಯಿಂದ ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಹಸಿಕಸ ವಿಲೇವಾರಿಗೆ ವ್ಯವಸ್ಥೆ ಮಾಡಿದ್ದರೂ ಅದರ ಉಪಯೋಗವಾಗದಿರುವುದು ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಸಿ ಹಾಗೂ ಒಣ ಕಸಗಳನ್ನು ಡಂಪಿಂಗ್‌ ಯಾರ್ಡ್‌ನಲ್ಲಿ ಎಸೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಇದೆ. ಡಂಪಿಂಗ್‌ ಯಾರ್ಡ್‌ ಪರಿಸರವು ದುರ್ವಾಸನೆಯಿಂದ ಕೂಡಿದ್ದು, ಆ ಮಾರ್ಗವಾಗಿ ಸಾಗುವವರು ಮೂಗು ಮುಚ್ಚಿಕೊಂಡು ಸಾಗಬೇಕಾಗಿದೆ.

ವ್ಯವಸ್ಥೆಯಲ್ಲಿ ಗೊಂದಲ
ಹಸಿಕಸ ಹಾಗೂ ಒಣಕಸ ವಿಲೇವಾರಿ ವಿಚಾರದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಎಸ್‌.ಎಲ್‌.ಆರ್‌.ಎಂ. ಘಟಕ ಹಾಗೂ ಪಂಚಾಯತ್‌ಗೆ ನಿರ್ವಹಣೆಯ ಜವಾಬ್ದಾರಿಯ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿದೆ. ಕೊಲ್ಲೂರು ದೇಗುಲ ಸಹಕರಿಸಿದಲ್ಲಿ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬಹುದು.
– ರುಕ್ಕನಗೌಡ, ಪಿಡಿಒ ಕೊಲ್ಲೂರು ಗ್ರಾ.ಪಂ.

Advertisement

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next