Advertisement

Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

04:22 PM Sep 25, 2024 | Team Udayavani |

ಕೊಲ್ಲೂರು: ವಂಡ್ಸೆಯಿಂದ ಹಾಲ್ಕಲ್‌ ವರೆಗಿನ ರಾ.ಹೆದ್ದಾರಿಯ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ.

Advertisement

ಭಾರೀ ಹೊಂಡಮಯ ರಸ್ತೆ
ಹೆಮ್ಮಾಡಿಯಿಂದ ವಂಡ್ಸೆ ತನಕದ ಮುಖ್ಯ ರಸ್ತೆ ಸಂಪೂರ್ಣ ಡಾಮರೀಕರಣಗೊಂಡಿದೆ. ಆದರೆ ವಂಡ್ಸೆಯಿಂದ ಕೊಲ್ಲೂರಿಗೆ ಸಾಗುವ ಪ್ರಯಾಣದ ದಾರಿ ಪ್ರಯಾಸವಾಗಿದ್ದು, ದ್ವಿಚಕ್ರವಾಹನ ಕೂಡ ಸಾಗುವುದು ಕಷ್ಟಸಾಧ್ಯವಾಗಿದೆ. ಈ ಭಾಗದಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನದಲ್ಲಿ ಸಾಗುವುದು ಅಪಾಯ ಆಹ್ವಾನಿಸುವಂತಿದೆ. ಅನೇಕ ಕಡೆ ಭಾರಿ ಹೊಂಡಗಳಿಂದ ಕೂಡಿದ್ದು, ಮಳೆಗಾಲದಲ್ಲಿ ನಿಂತ ನೀರಿನಿಂದ ದ್ವಿಚಕ್ರ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುತ್ತಾರೆ.

ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಪ್ರಮುಖ ರಸ್ತೆ
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಸಹಸ್ರಾರು ಭಕ್ತರು ದಿನಂಪ್ರತಿ ಕೊಲ್ಲೂರು ದೇಗುಲ ಹಾಗು ಸಿಗಂಧೂರು ಕ್ಷೇತ್ರ ದರ್ಶನಕ್ಕೆ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಹೆಮ್ಮಾಡಿಯಿಂದ ಸುಮಾರು 45 ಕಿ.ಮೀ. ದೂರ ವ್ಯಾಪ್ತಿಯ ಕೊಲ್ಲೂರಿಗೆ ಸಾಗಲು ಯಾತ್ರಾರ್ಥಿಗಳು ಸಹಿತ ನಿತ್ಯ ಪ್ರಯಾಣಿಕರು ಹರಸಾಹಸ ಪಡಬೇಕಾಗಿದೆ.

ತಿರುವುಗಳಲ್ಲಿ ಭಾರೀ ಹೊಂಡ
ಅನೇಕ ಕಡೆ ತಿರುವುಗಳಲ್ಲಿ ಭಾರೀ ಗಾತ್ರದ ಹೊಂಡಗಳಿದ್ದು, ಹೊಂಡ ತಪ್ಪಿಸುವ ಪ್ರಯತ್ನದಲ್ಲಿ ಅನೇಕ ವಾಹನಗಳು ಮುಖಾಮುಖೀಯಾಗಿ ಅಪಘಾತ ಸಂಭವಿಸಿದೆ. ಜಡ್ಕಲ್‌ ಬಳಿಯ ರಸ್ತೆಯು ಸಂಪೂರ್ಣ ದುಸ್ತಿತಿಯಾಗಿದ್ದು, ಗ್ರಾಮಸ್ಥರು ಸಹಿತ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ನವರಾತ್ರಿ ಮೊದಲು ರಸ್ತೆ ದುರಸ್ತಿಯಾದೀತೇ
ಲಕ್ಷಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ಕೊಲ್ಲೂರಿನ ನವರಾತ್ರಿ ಉತ್ಸವ ಅಕ್ಟೋಬರ್‌ ಮೊದಲ ವಾರದಲ್ಲಿ ಆರಂಭಗೊಳ್ಳಲಿದ್ದು, ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿದೆ.ಕೇವಲ ಹೊಂಡ ಮುಚ್ಚುವ ಕಾರ್ಯಕ್ಕೆ ಮಾತ್ರ ಇಲಾಖೆ ಕ್ರಮ ಕೈಗೊಂಡಲ್ಲಿ ಒಂದಿಷ್ಟು ದಿನಗಳ ಅನಂತರ ರಸ್ತೆ ಮತ್ತಷ್ಟು ಹದಗೆಟ್ಟು ವಿರೂಪಗೊಳ್ಳಲಿದೆ. ಹಾಗಾಗಿ ಹಾಲ್ಕಲ್‌ ನಿಂದ ವಂಡ್ಸೆ ತನಕ ಸಂಪೂರ್ಣ ಡಾಮರೀಕರಣಕ್ಕೆ ಸರಕಾರ ಅನುದಾನ ಬಿಡುಗಡೆಗೊಳಿಸಿ ನಿತ್ಯ ಪ್ರಯಾಣಿಕರ ಗೋಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.

Advertisement

ತಾತ್ಕಾಲಿಕ ಹೊಂಡ ಮುಚ್ಚುವ ಕಾರ್ಯ
ಸಂಪೂರ್ಣ ಡಾಮರು ಕಾಮಗಾರಿಗೆ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುದಾನ ದೊರೆತೊಡನೆ ಕಾಮಗಾರಿ ಆರಂಭಿಸಲಾಗುವುದು. ರಾ. ಹೆದ್ದಾರಿ ಹಾಲ್ಕಲ್‌ನಿಂದ ಕುಂದಾಪುರ ತನಕ 10 ಕಿ.ಮೀ. ದೂರ ವ್ಯಾಪ್ತಿಯವರೆಗೆ ಸಂಪೂರ್ಣ ಡಾಮರು ರಸ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಲ್ಕಲ್‌ ನಿಂದ ವಂಡ್ಸೆವರೆಗೆ ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಜಲ್ಲಿ ಪುಡಿ ಬಳಸಿ ಹೊಂಡ ಮುಚ್ಚುವ ಕಾರ್ಯ ಮಾಡಲಾಗುವುದು.
-ಎಂ.ಪಿ. ಮೂರ್ತಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

ಇಲಾಖೆ ಕ್ರಮ ಕೈಗೊಳ್ಳಲಿ
ಹದಗೆಟ್ಟ ಕೊಲ್ಲೂರು ವಂಡ್ಸೆ ರಸ್ತೆಯ ಸಂಪೂರ್ಣ ಡಾಮರು ಕಾಮಗಾರಿಗೆ ಸರಕಾರ ಅನುದಾನ ಬಿಡುಗಡೆಗೊಳಿಸಬೇಕು. ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಭಕ್ತರ ಸುಗಮ ವಾಹನ ಸಂಚಾರಕ್ಕೆ ಇಲಾಖೆ ಕ್ರಮ
ಕೈಗೊಳ್ಳಬೇಕಾಗಿದೆ.
-ಸರ್ವೋತ್ತಮ ಶೆಟ್ಟಿ, ಇಡೂರುಕುಂಜ್ಞಾಡಿ

Advertisement

Udayavani is now on Telegram. Click here to join our channel and stay updated with the latest news.

Next