Advertisement
ಚಿತ್ತಾಪುರ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಕಂಡುಬರುತ್ತಿಲ್ಲ. ಬೇಸಿಗೆ ರಜೆಗೆಂದು ಊರಿಗೆ ಹೋದ ವಿವಿಧ ಗ್ರಾಮಗಳ ಶಾಲೆಯ ಮುಖ್ಯಶಿಕ್ಷಕರು ಶಾಲೆಯತ್ತ ಇಣುಕಿ ನೋಡಿಲ್ಲ. ಶಾಲೆ ವಾತಾವರಣ ಹದಗೆಡುತ್ತಿದ್ದರೂ ಶಿಕ್ಷಣ ಇಲಾಖೆ ಮೌನವಹಿಸಿದೆ. ಬಳವಡಗಿ, ಕುಂಬಾರಹಳ್ಳಿ, ಕಮರವಾಡಿ, ಸೂಲಹಳ್ಳಿ, ರಾವೂರ, ಕನಗನಹಳ್ಳಿ, ಕಡಬೂರ ಸೇರಿದಂತೆ ಇತರ ಗ್ರಾಮಗಳ ಶಾಲೆಗಳಿಗೆ ಶುಚಿತ್ವದ ಸಮಸ್ಯೆ ಕಾಡುತ್ತಿದೆ.
Related Articles
Advertisement
ಹೆಣ್ಣು ಮತ್ತು ಗಂಡು ಮಕ್ಕಳ ಶೌಚಾಲಯ ಮುರಿದು ಬಿದ್ದಿವೆ. ಬಾಗಿಲುಗಳು ತುಕ್ಕು ಹಿಡಿದಿವೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಹಳೆಯ ನೀರಿನ ಟ್ಯಾಂಕ್ ಹಸಿರು ಪಾಚಿಗಟ್ಟಿದ್ದು, ಕಳೆದ ಹದಿನೈದು ವರ್ಷಗಳಿಂದ ಬಳಕೆ ಕೈಬಿಡಲಾಗಿದೆ. ಶಾಲೆಯ ಕಾಂಪೌಂಡ್ ಗೋಡೆ ಶಿಥಿಲವಾಗಿ ಉರುಳಿ ಬಿದ್ದಿದೆ.
ಶಾಲೆಯಲ್ಲಿ 1 ರಿಂದ 8ರ ವರೆಗೆ ತರಗತಿಗಳು ನಡೆಯುತ್ತಿದ್ದು, ಒಟ್ಟು 521 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ 12 ಶಿಕ್ಷಕರಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಐವರು ಶಿಕ್ಷಕರ ಕೊರತೆಯಿದೆ. ಶಾಲೆಗೆ ನಳ ಸಂಪರ್ಕಕ್ಕಾಗಿ ಕೋರಿ ಎಸ್ ಡಿಎಂಸಿ ಅಧ್ಯಕ್ಷರು ಮನವಿ ಸಲ್ಲಿಸಿದರೂ ಗ್ರಾಪಂ ಆಡಳಿತ ಸ್ಪಂದಿಸಿಲ್ಲ ಎನ್ನುವ ಆರೋಪವಿದೆ. ಸಮಸ್ಯೆಗಳ ನಡುವೆಯೂ ಶಿಕ್ಷಕರು ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಮಕ್ಕಳ ಸಂಖ್ಯೆ (521) ಹೆಚ್ಚಿರುವ ಕೊಲ್ಲೂರಿನ ಶಾಲೆಗೆ ಐವರು ಶಿಕ್ಷಕರ ಕೊರತೆಯಿದೆ. ಕಳೆದ ಸಾಲಿನಿಂದ ಇಂಗ್ಲಿಷ್ ಬೋಧನೆ ಶುರುವಾಗಿದೆ. ತರಗತಿ ಕೋಣೆಗಳ ಕೊರತೆ ಗಮನಿಸಿ ತಾಲೂಕು ಆಡಳಿತ ಏಳು ಕೋಣೆಗಳ ನಿರ್ಮಾಣಕ್ಕೆ ಮುಂದಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಾರಣ ಶುಚಿ ಮಾಡಿದಷ್ಟು ಶಾಲೆಯ ಪರಿಸರ ಹದಗೆಡುತ್ತಿದೆ. ಪರಿಣಾಮ ಸೋಮವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಶಾಲಾ ಶುಚಿತ್ವಕ್ಕೆ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ. ಮಕ್ಕಳು ಬರುವ ಮುಂಚೆಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಕಾಶಪ್ಪ ಬೊಮ್ಮಣ್ಣಿ. –ಮುಖ್ಯಶಿಕ್ಷಕ, ಸ.ಹಿ. ಪ್ರಾಥಮಿಕ ಶಾಲೆ, ಕೊಲ್ಲೂರ
–ಮಡಿವಾಳಪ್ಪ ಹೇರೂರ