Advertisement

ಕೊಲ್ಲೂರು ಶಿಲಾಯುಗ ಕಾಲದ ಆದಿಮ ಚಿತ್ರಗಳು ಪತ್ತೆ

01:00 AM Feb 27, 2019 | Harsha Rao |

ಶಿರ್ವ : ಭಾರತದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರಿನ ಸಮೀಪ, ಅವಲಕ್ಕಿ ಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ್ಮಶಿಲಾಯುಗ ಕಾಲದ ಮಾನವ ಬೇಟೆಯ ಚಿತ್ರಗಳು ಪತ್ತೆಯಾಗಿವೆ.
ಹಂದಿ ಬೇಟೆ, ಹಕ್ಕಿ ಬೇಟೆ, ಕಾಡುಗೂಳಿಗಳ ಬೇಟೆ, ಜಿಂಕೆ ಬೇಟೆಯ ವಿವಿಧ ಆದಿಮ ಚಿತ್ರಗಳು ಕಂಡು ಬಂದಿವೆ.

Advertisement

ಬೇಟೆಯ ವಿವಿಧ ಭಾವ-ಭಂಗಿಗಳಲ್ಲಿ ನಿಂತ ಮಾನವರ ಹಾಗೂ ಪ್ರಾಣಿಗಳ ಚಿತ್ರಗಳು ತಮ್ಮ ನೈಜತೆಯಿಂದ ಆಕರ್ಷಕವಾಗಿವೆ. ಈ ಚಿತ್ರಗಳಲ್ಲಿ ಪ್ರಧಾನವಾದ ಚಿತ್ರ ಓರ್ವ ಮಹಿಳೆಯದ್ದೆಂದು ಗುರುತಿಸಲಾಗಿದ್ದು, ಆಕೆಯ ಚಿತ್ರವನ್ನು ಆದಿಮ ಕಾಲದ ಜನರು ಆರಾಧಿಸುತ್ತಿದ್ದರೆಂದು ನಂಬಲಾಗಿದೆ. ವಿವಿಧ ರೀತಿಯ ಒಟ್ಟು 20 ಚಿತ್ರಗಳು ಪ್ರಸ್ತುತ ಪತ್ತೆಯಾಗಿದ್ದು, ನಂತರದ ದಿನಗಳಲ್ಲಿ ಶೋಧವನ್ನು ಮುಂದುವರಿಸಲಾಗುವುದು ಎಂದು ಶಿರ್ವ ಎಂ.ಎಸ್‌.ಆರ್‌.ಎಸ್‌ ಕಾಲೇಜಿನ ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.

ಈ ಚಿತ್ರಗಳ ಶೋಧದ ಮೊದಲು ಕರ್ನಾಟಕದ ಕರಾವಳಿಯಲ್ಲಿ ಡಾ| ಕೆ.ಬಿ. ಶಿವತಾರಕ್‌, ಪಿ. ರಾಜೇಂದ್ರನ್‌ ಹಾಗೂ ಎಲ್‌.ಎಸ್‌.ರಾವ್‌ ಅವರು ಸೂಕ್ಷ್ಮಶಿಲಾಯುಗದ ನೆಲೆಗಳನ್ನು, ಉಪ್ಪಿನಂಗಡಿ, ಮಾಣಿ, ಕಾರ್ಕಳ, ಮಸಿಕೆರೆ ಮುಂತಾದ ಸ್ಥಳಗಳಲ್ಲಿ ಶೋಧಿಸಿದ್ದರು. ಆದರೆ ಇದೇ ಪ್ರಥಮ ಬಾರಿ ಆ ಸಂಸ್ಕೃತಿಗೆ ಸಂಬಂಧಿಸಿದ ಆದಿಮ ಚಿತ್ರಗಳು ಕಪ್ಪು ಪಾದೆ ಕಲ್ಲಿನ ಮೇಲೆ ಕುಟ್ಟಿ-ಉಜ್ಜಿ ಮಾಡಿರುವುದು ಕಂಡು ಬಂದಿದೆ. ಸರಿ ಸುಮಾರು, ಕ್ರಿ.ಪೂ. 10.000 ದಿಂದ 3000 ವರ್ಷಗಳ ಕಾಲಾವಧಿಯನ್ನು ಸೂಕ್ಷ್ಮಶಿಲಾಯುಗ ಕಾಲವೆಂದು ಡಾ| ಅ. ಸುಂದರ ಅವರು ತರ್ಕಿಸಿದ್ದು, ಸರಿಸುಮಾರು ಅದೇ ಕಾಲದ ಚಿತ್ರಗಳೆಂದು ಅವಲಕ್ಕಿ ಪಾರೆಯ ಚಿತ್ರಗಳ ಕಾಲವನ್ನು ತಾತ್ಕಾಲಿಕವಾಗಿ ಭಾವಿಸಲಾಗಿದೆ. ಕೊಲ್ಲೂರು ವನ್ಯಜೀವಿ ಅರಣ್ಯ ವಿಭಾಗದ ಆರ್‌ಎಫ್‌ಒ ನರೇಶ್‌,ಅರಣ್ಯ ಸಿಬಂದಿ, ಕಾಲೇಜಿನ ವಿದ್ಯಾರ್ಥಿಗಳಾದ ಶ್ರೇಯಸ್ಮ ಶ್ಯಾಮಿಲಿ, ನಾಗರಾಜ ಮತ್ತು ಕೊಲ್ಲೂರಿನ ಮುರಳೀಧರ ಹೆಗಡೆ ಅಧ್ಯಯನದಲ್ಲಿ ಸಹಕರಿಸಿದ್ದಾರೆ ಎಂದು ಪ್ರೊ|ಟಿ. ಮುರುಗೇಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next