Advertisement

ಕೊಳ್ಳೇಗಾಲ ಎಸ್‌ಸಿ ಮೀಸಲು ಕ್ಷೇತ: ಯಾರು ಹಿತವರು ವರಿಷ್ಠರಿಗೆ ಈ ಮೂವರೊಳಗೆ?

10:58 AM Apr 04, 2023 | Team Udayavani |

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಎಸ್‌ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬಹುದೆಂಬುದು ನಿಗೂಢವಾಗಿದ್ದು, ಪಕ್ಷದ ಕಾರ್ಯಕರ್ತರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಕ್ಷೇತ್ರಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

Advertisement

ಚಾಮರಾಜನಗರ ಹಾಗೂ ಹನೂರಿನಲ್ಲಿ ಹಾಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಆರ್‌. ನರೇಂದ್ರ ಅವರಿಗೆ ಟಿಕೆಟ್‌ ನೀಡಲಾಗಿದೆ. ಗುಂಡ್ಲುಪೇಟೆಯಲ್ಲಿ ನಿರೀಕ್ಷೆಯಂತೆ ಮಾಜಿ ಸಚಿವ ದಿ.ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಪುತ್ರ ಎಚ್‌.ಎಂ.ಗಣೇಶ್‌ ಪ್ರಸಾದ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.

ಅಭ್ಯರ್ಥಿಗಳೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಮೂರೂ ಮಂದಿ ಈಗಾಗಲೇ ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ.

ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ: ಆದರೆ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಮೂವರು ಪ್ರಬಲ ಆಕಾಂಕ್ಷಿಗಳಿದ್ದು, ಇವರಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುವುದು ಎಂಬುದು ವರಿಷ್ಠರಿಗೂ ಕ್ಲಿಷ್ಟಕರವಾಗಿ ಪರಿಣಮಿಸಿದೆ. ಅಭ್ಯರ್ಥಿಗಳನ್ನು ಘೋಷಿಸದ 100 ಕ್ಷೇತ್ರಗಳಲ್ಲಿ ಕೊಳ್ಳೇಗಾಲ ಸಹ ಒಂದಾಗಿದ್ದು, ಈ ನೂರು ಕ್ಷೇತ್ರಗಳಲ್ಲಿ ಎರಡು ಮೂರು ಮಂದಿ ಪೈಪೋಟಿ ಯಲ್ಲಿದ್ದು, ಏಕ ಹೆಸರನ್ನು ಆಯ್ಕೆ ಮಾಡಲು ವರಿಷ್ಠರು ಕಸರತ್ತು ನಡೆಸಿದ್ದಾರೆ.

ಇಂದು ಆಯ್ಕೆ ಸಮಿತಿ ಸಭೆ: ದೆಹಲಿಯಲ್ಲಿ ಏ.4 ರಂದು ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಇದರಲ್ಲಿ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದ ರಾಮಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ.

Advertisement

ಮೂರು ಹೆಸರುಗಳು ಚಾಲ್ತಿಯಲ್ಲಿವೆ: ಕೊಳ್ಳೇಗಾಲ ಕ್ಷೇತ್ರ ಕುರಿತಂತೆ ಮೂರು ಹೆಸರುಗಳು ಚಾಲ್ತಿಯಲ್ಲಿವೆ. ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌. ಜಯಣ್ಣ ಹಾಗೂ ಎಸ್‌. ಬಾಲರಾಜು ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಕೆಲವರು ಆಯ್ಕೆ ಸಮಿತಿ ಮುಂದೆ ಎರಡು ಹೆಸರುಗಳು ಮಾತ್ರ ಹೋಗಿವೆ ಎನ್ನುತ್ತಿದ್ದಾರೆ. ಆದರೆ ಅದು ಖಚಿತವಾಗಿಲ್ಲ. ಆ ಎರಡು ಹೆಸರುಗಳು ಯಾರವು ಎಂಬುದೂ ಸಹ ಗೊತ್ತಾಗಿಲ್ಲ. ಮೂವರು ಆಕಾಂಕ್ಷಿಗಳು ಸಹ ತಮ್ಮನ್ನೇ ಏಕೆ ಆಯ್ಕೆ ಮಾಡಬೇಕೆಂಬ ಬಗ್ಗೆ ಕಾರಣಗಳನ್ನು ನೀಡಿದ್ದಾರೆ.

ಎ.ಆರ್‌. ಕೃಷ್ಣಮೂರ್ತಿ ಅವರು, ಕಳೆದ ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 52 ಸಾವಿರ ಮತಗಳನ್ನು ಪಡೆದಿದ್ದೇನೆ. ಕಾಂಗ್ರೆಸ್‌ ಶಾಸಕ ರಾಗಿ ಆಯ್ಕೆಯಾಗಿದ್ದವರೂ ಇಷ್ಟು ಮತಗಳನ್ನು ಪಡೆದಿರಲಿಲ್ಲ. ಒಂದು ಮತದ ಅಂತರದಿಂದ ಸೋತ ಬಳಿಕ 19 ವರ್ಷಗಳಿಂದ ಸತತ ಸೋಲುಗಳಿಂದ ನೊಂದಿದ್ದೇನೆ. ಈ ಬಾರಿ ಇನ್ನೊಂದು ಅವಕಾಶ ನನಗೆ ನೀಡಬೇಕು ಎಂದು ಕೇಳಿ ಕೊಂಡಿದ್ದಾರೆ.

ಎಸ್‌. ಜಯಣ್ಣ ಅವರು, 2013ರ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಅನಾರೋಗ್ಯದ ಕಾರಣ ಟಿಕೆಟ್‌ ದೊರಕಲಿಲ್ಲ. ಈ ಬಾರಿ ನನಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

2013ರಿಂದಲೂ ಪಕ್ಷ ಸಂಘಟನೆಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದೇನೆ. ಭಾರತ್‌ ಜೋಡೋ ಯಾತ್ರೆಯ ಮೂರು ಕ್ಷೇತ್ರಗಳ ಉಸ್ತು ವಾರಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕ್ರಮಗಳ ಸಂಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಉಳಿದ ಇಬ್ಬರು ಆಕಾಂಕ್ಷಿಗಳಿಗೂ ಅವಕಾಶ ನೀಡಲಾಗಿದೆ. ನನಗೂ ಒಂದು ಅವಕಾಶ ನೀಡಬೇಕು ಎಂಬುದು ಎಸ್‌. ಬಾಲರಾಜು ಅವರ ವಾದ. ಬಾಜಿ ಕಟ್ಟಿ ನೋಡು ಬಾರಾ..! : ಚುನಾವಣೆಯಲ್ಲಿ ಯಾರು ಗೆಲ್ಲಬಹುದೆಂಬ ಬಗ್ಗೆ ಬಾಜಿ, ಪಣ ಕಟ್ಟುವುದು ಮಾಮೂಲಿ. ವಿಶೇಷವೆಂದರೆ, ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬಹುದೆಂಬ ಬಗ್ಗೆ ಮೂವರು ಆಕಾಂಕ್ಷಿಗಳ ಬೆಂಬಲಿಗರು ಬಾಜಿ ಕಟ್ಟಿ ನೋಡು ಬಾರಾ ಎನ್ನುತ್ತಿದ್ದಾರೆ! ನಮ್ಮ ನಾಯಕರಿಗೇ ಟಿಕೆಟ್‌ ಗ್ಯಾರಂಟಿ ಎಂದು ಎ.ಆರ್‌. ಕೆ, ಜಯಣ್ಣ ಹಾಗೂ ಬಾಲರಾಜ್‌ ಬೆಂಬಲಿಗರು ಒಬ್ಬರಿಗೊಬ್ಬರು ಲಕ್ಷ ರೂ.ಗಳವರೆಗೂ ಬಾಜಿ ಕಟ್ಟಲು ಸಿದ್ಧರಾಗಿದ್ದಾರೆ!

ಇನ್ನೆರಡು ದಿನಗಳಲ್ಲಿ ಘೋಷಣೆ ನಿರೀಕ್ಷೆ : ಆಯ್ಕೆ ಸಮಿತಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಮೂವರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿ, ಇನ್ನಿಬ್ಬರಲ್ಲಿ ಒಬ್ಬರಿಗೆ ಲೋಕಸಭಾ ಕ್ಷೇತ್ರದ ಟಿಕೆಟ್‌, ಇನ್ನೊಬ್ಬರಿಗೆ ಎಂಎಲ್‌ ಸಿ ಸ್ಥಾನ ನೀಡುವ ಆಶ್ವಾಸನೆ ನೀಡಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಇನ್ನೆರಡು ದಿನಗಳಲ್ಲಿ ಕೊಳ್ಳೇಗಾಲದ ಕಾಂಗ್ರೆಸ್‌ ಅಭ್ಯರ್ಥಿಯ ಹೆಸರು ಘೋಷಣೆಯಾಗುವ ನಿರೀಕ್ಷೆಯಿದೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next