ಈ ಬಾರಿಯ ಗ್ರಾಮ ಭಾರತ ಸರಣಿಯಲ್ಲಿ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು ಗ್ರಾಮದತ್ತ ಚಿತ್ತ. ಎಲ್ಲ ಗ್ರಾಮಗಳಂತೆ ಮೇಲ್ನೋಟಕ್ಕೆ ಈ ಗ್ರಾಮಕ್ಕೆ ಕೆಲವು ಸೌಲಭ್ಯಗಳು ಸಿಕ್ಕಿದ್ದರೂ ಮೂಲ ಸೌಕರ್ಯದಲ್ಲಿ ಸಾಕಷ್ಟು ಹಿಂದಿದೆ. ಜನಪ್ರತಿನಿಧಿಗಳು ಗಮನವೇ ನೀಡಿಲ್ಲವೇ ಎಂದರೆ ಇಲ್ಲ ಎನ್ನುವಂತಿಲ್ಲ. ನಮ್ಮ ಊರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂಬುದು ಗ್ರಾಮಸ್ಥರ ಆಗ್ರಹ.
ಕೊಲ್ಲಮೊಗ್ರು, ಕಲ್ಮಕಾರು: ಹರಿಯಲಿ ಪ್ರಗತಿ ನೀರು..
ಸುಬ್ರಹ್ಮಣ್ಯ/ಕಾರ್ಕಳ: ಈ ಗ್ರಾಮಗಳು ಇರುವುದು ಎರಡು ಜಿಲ್ಲೆಗಳ ಗಡಿಯಲ್ಲಿ. ಹಾಗಾಗಿ ಬದುಕಿನ ಅರ್ಧ ಭಾಗ ಆ ಜಿಲ್ಲೆಯಲ್ಲಿ, ಇನ್ನರ್ಧ ಭಾಗ ಈ ಜಿಲ್ಲೆಯಲ್ಲಿ. ಹೊಳೆಗಳಿವೆ, ಸೇತುವೆಯಿಲ್ಲ; ರಸ್ತೆ ಇದೆ, ಅಭಿವೃದ್ಧಿಯಾಗಿಲ್ಲ. ಹೀಗೆ ಹಲವು ಮೂಲ ಸೌಕರ್ಯಗಳ ಕೊರತೆ ಅನು ಭವಿ ಸುತ್ತಿರುವ ಈ ಊರುಗಳಿಗೆ ಇನ್ನಾದರೂ ಪ್ರಗತಿಯ ನೀರು ಹರಿಯಬೇಕಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಭಾಗ, ಸುಳ್ಯ ತಾಲೂಕಿನ ಕಟ್ಟಕಡೆಯ ಊರು ಕೊಲ್ಲಮೊಗ್ರು, ಕಲ್ಮಕಾರು. ಇವೆರಡು ಅವಳಿ ಗ್ರಾಮಗಳು. ಪುಷ್ಪಗಿರಿ ವನ್ಯ ಧಾಮದ ತಪ್ಪಲಿನಲ್ಲಿ ತಳಭಾಗದ ಅರಣ್ಯ ದಂಚಿನಲ್ಲಿವೆ. ತಾಲೂಕು ಕೇಂದ್ರದಿಂದ 70 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಗ್ರಾಮ ಗಳಿವು. ಇಂದಿಗೂ ಹತ್ತಾರು ಸಮಸ್ಯೆ ಗಳಿಗೆ ಪರಿಹಾರ ಸಿಕ್ಕೀತು ಎಂಬ ನಿರೀಕ್ಷೆ ಯಲ್ಲೇ ದಿನ ತಳ್ಳುತ್ತಿದ್ದಾರೆ ಈ ಗ್ರಾಮದವರು.
“ಗ್ರಾಮ ಭಾರತ’ ಸರಣಿಯಡಿ ಈ ಗ್ರಾಮ ಗಳಿಗೆ ಉದಯವಾಣಿ ತಂಡ ಭೇಟಿ ನೀಡಿದಾಗ ಗ್ರಾಮಸ್ಥರು ತಮ್ಮ ಸಂಕಷ್ಟ ಗಳನ್ನೆಲ್ಲ ವಿವರಿಸಿದರು.
ದಟ್ಟ ಕಾಡು, ಸುತ್ತಲೂ ಗುಡ್ಡಗಾಡಿನ ಮಧ್ಯೆ ಜನರ ವಾಸ. ಲೆಕ್ಕದ ಪ್ರಕಾರ ಎಲ್ಲ ಸೌಲಭ್ಯಗಳು ಜನರ ಮನೆ ಬಾಗಿಲನ್ನು ತಲುಪಿವೆ. ಆದರೆ ಒಂದೆರಡು ದಿನ ಗಳಿದ್ದರೆ ವಾಸ್ತವ, ಈ ಪ್ರದೇಶದಲ್ಲಿ ಬದುಕೆಂಬುದು ಎಷ್ಟು ಕಷ್ಟ ಎಂಬುದು ಅನುಭವಕ್ಕೆ ಬರುತ್ತದೆ.
ಪುಷ್ಪಗಿರಿ ವನ್ಯಧಾಮ ವಿಸ್ತರಣೆ, ಆನೆ ಕಾರಿಡಾರ್, ಗಾಡ್ಗಿàಳ್ ವರದಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ-ಹೀಗೆ ನಾನಾ ಅರಣ್ಯ ಸಂರಕ್ಷಣೆ ಯೋಜನೆ ಗಳು ಈ ಗ್ರಾಮಗಳು ಸೇರಿದಂತೆ ಪಶ್ಚಿಮ ಘಟ್ಟದ ಹಲವೆಡೆ ಸುದ್ದಿ ಮಾಡಿವೆ. ಇದರ ತೂಗುಗತ್ತಿ ಈಗಲೂ ತೂಗುತ್ತಲೇ ಇದೆ. ಇದರ ವಿರುದ್ಧ ಮೊದಲು ಚಳವಳಿ ಇಲ್ಲಿ ಆರಂಭ ವಾಗಿತ್ತು. ಈ ಮಧ್ಯೆ ನಕ್ಸಲರ ಸದ್ದು ಮತ್ತು ಪೊಲೀಸರ ಬೂಟಿನ ಸದ್ದೂ ಕೇಳಿಸಿತ್ತು.
ಕೃಷಿ ಅವಲಂಬಿತರು:
ಪಶ್ಚಿಮ ಘಟ್ಟದ ತಪ್ಪಲಿನ ಶ್ರೇಣಿ ಯಲ್ಲಿರುವ ಇವರೆಲ್ಲ ಕೃಷಿಯನ್ನು ಆಶ್ರ ಯಿಸಿದ್ದಾರೆ. ಆದರಿಂದು ಕೃಷಿಯನ್ನೇ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಡುಪ್ರಾಣಿಗಳ ಹಾವಳಿ ಬೆಳೆಯನ್ನೂ ಬದುಕನ್ನೂ ಕಸಿದುಕೊಳ್ಳುತ್ತಿವೆ. ಜೀವ ಭಯವೂ ಕಾಡುತ್ತಿದೆ. ಜನರು ಒಂದು ದಡದಿಂದ ಇನ್ನೊಂದು ದಡವನ್ನು ಸೇರಲು ಬೆಳಕು ಹರಿಯುವವರೆಗೂ ಕಾಯುವ ಸ್ಥಿತಿ. ರಾತ್ರಿವೇಳೆ ಎಲ್ಲಿಯೂ ಹೋಗುವಂತಿಲ್ಲ. ಒಟ್ಟಿನಲ್ಲಿ ಮೂಲಸೌಕರ್ಯಗಳಿಲ್ಲದೇ ಬಸವಳಿದಿವೆ ಗ್ರಾಮಗಳು.
ಸಂಪರ್ಕ ಸೇತುವೆಗಳಿಲ್ಲ :
ತಾವೇ ನಿರ್ಮಿಸಿಕೊಂಡ ಕಾಲು ಸಂಕಗಳ ಮೇಲೆ ಕತ್ತಿಯ ಅಲಗಿನ ಮೇಲಿನ ನಡೆದಂತೆ ನಡೆಯಬೇಕು. ಹೊಳೆ, ತೋಡುಗಳಿಗೆ ಸಂಪರ್ಕ ಸೇತುವೆಗಳಿಲ್ಲ. ಊರುಗಳಿಗೆ ತಲುಪಲು ಸಮಯಕ್ಕೆ ಸರಿಯಾದ ಬಸ್‌ಗಳಿಲ್ಲ. ಹೆಚ್ಚು ಸಮಯ ಇಲ್ಲದಿರುವ ವಿದ್ಯುತ್, ನೆಟ್‌ವರ್ಕ್ ಕೊರತೆ, ತುರ್ತು ಸೇವೆಗೂ ಪರದಾಡುವ ಸ್ಥಿತಿ ಇಲ್ಲಿಯದು. ಶಿಕ್ಷಣ, ವೈದ್ಯಕೀಯ ಸೇವೆಗಳು ಕೈಗೆಟಕುವ ರೀತಿಯಲ್ಲಿಲ್ಲ. ರಸ್ತೆ, ನಿವೇಶನ, ವಸತಿ ವ್ಯವಸ್ಥೆ ಯಾವುದನ್ನೂ ಕೇಳುವಂತಿಲ್ಲ. ಊರಿಗೆ ಹೋಗುವ ಒಂದು ಬಸ್ ತಪ್ಪಿಸಿಕೊಂಡರೆ ಮಾರನೆಯ ದಿನ ಸೂರ್ಯೋದಯದವರೆಗೂ ಕಾಯಬೇಕಾದದ್ದು ಅನಿವಾರ್ಯ. ಒಂದು ದಿನ ಅಭಿವೃದ್ಧಿಯ ಬೆಳಕು ಇಲ್ಲಿಗೂ ಹರಿಯಬಹುದು ಎಂಬ ಭರವಸೆಯೊಂದಿಗೆ ಕಗ್ಗತ್ತಲ ಕಾಡಿನಲ್ಲಿ ಕಾಯುತ್ತಲೇ ಇದ್ದಾರೆ ಈ ಗ್ರಾಮಗಳು ಮತ್ತು ಗ್ರಾಮಸ್ಥರು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕೊನೆಯ ಗ್ರಾಮ ಕೊಲ್ಲಮೊಗ್ರು. ಇದು ಜಿಲ್ಲೆಯ ಕೊನೆಯ ಗ್ರಾಮ ಮಾತ್ರವಲ್ಲ, ಇಲ್ಲಿನ ಕೆಲವು ಪ್ರದೇಶ ಅಭಿವೃದ್ಧಿಯಲ್ಲೂ ಕೊನೆಯಲ್ಲಿದೆ ಎಂದರೆ ಅತಿಶಯೋಕ್ತಿ ಆಗದು.
ಇವರಿಗೆ ಮೇ ಮುಗಿದು ಜೂನ್ ಬಂದಿತೆಂದರೆ ನಡುಕ ಶುರು ವಾಗುತ್ತದೆ. ಯಾಕೆಂದರೆ, ಯಾವಾಗ ಹೊಳೆ ತುಂಬಿ ಉಳಿದ ಪ್ರದೇಶ ಗಳೊಂದಿಗೆ ಸಂಪರ್ಕ ಕಳೆದುಕೊಂಡು ಬಿಡುತ್ತೇವೆಯೇ? ಎಷ್ಟು ದಿನ ಹಾಗೆಯೇ ಇರಬೇಕೋ? ಎಂಬ ಆತಂಕ ಸದಾ ಕಾಡ ತೊಡಗುತ್ತದೆ.
ಕೊಲ್ಲಮೊಗ್ರು-ಶಿವಾಲ- ಕಲ್ಮಕಾರು ಒಳ ರಸ್ತೆಯಲ್ಲಿ ಸಾಗಿದರೆ ಮೆಂಟಕಜೆ ಹಾಗೂ ದಬ್ಬಡ್ಕ ಎಂಬಲ್ಲಿ ಎರಡು ಹೊಳೆಗಳು ಹರಿಯುತ್ತಿವೆ. ಇಲ್ಲಿ ಸೇತುವೆ ಇಲ್ಲ. ಹಾಗಾಗಿ ಮಳೆಗಾಲದಲ್ಲಿ ಮೆಂಟಕಜೆ ಪ್ರದೇಶ ದ್ವೀಪ. ಇಲ್ಲಿರುವ ಕುಟುಂಬಗಳು ಎಲ್ಲ ಸಂಪರ್ಕಗಳಿಂದ ಕಡಿತಗೊಳ್ಳುತ್ತವೆ. ಕೂಲಿ ಕೆಲಸಕ್ಕೆ ಹೋಗುವವರು, ಶಾಲೆಗಳಿಗೆ ತೆರಳುವ ಮಕ್ಕಳು, ಉದ್ಯೋಗಕ್ಕೆ ತೆರಳುವವರಿಗೂ ಸಮಸ್ಯೆಯೇ. ಶಾಲಾ ಮಕ್ಕಳಿಗೆ ಅಘೋಷಿತ ರಜೆ. ಹೆಚ್ಚಿನವರು ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ 4 ಕಿ. ಮೀ. ದೂರದ ಡೈರಿಗೆ ಹಾಲು ಕೊಂಡೊಯ್ಯಲು, ಔಷಧ ತೆರಳಲು ಸಾಧ್ಯವಾಗುವುದಿಲ್ಲ. ಪ್ರತಿ ಮಳೆಗಾಲದಲ್ಲೂ ಇದು ಇದ್ದದ್ದೇ. ಕಿರು ಸೇತುವೆ ಯನ್ನಾದರೂ ನಿರ್ಮಿಸಿಕೊಡಿ ಎನ್ನುತ್ತಾರೆ ಇಲ್ಲಿನ ನಿವಾಸಿ ಮೋಹಿನಿ.
ಪ್ರತಿ ಮಳೆಗಾಲದಲ್ಲೂ ಐದಾರು ಬಾರಿ ಈ ಸಮಸ್ಯೆ ಇದ್ದದ್ದೇ. ಕೆಲವೊಮ್ಮೆ ಕೆಲವೇ ಗಂಟೆಗಳಲ್ಲಿ ಹೊಳೆ ನೆರೆ ಇಳಿಯಬಹುದು, ಕೆಲವೊಮ್ಮೆ ಒಂದೆರಡು ದಿನಗಳನ್ನು ಕಾಯ ಬೇಕಾಗಲೂ ಬಹುದು.
ಬಿದಿರಿನ ಸೇತುವೆ ಮೇಲೆ ಸರ್ಕಸ್! :
ಈ ಗ್ರಾಮದವರೆಲ್ಲ ಬಿದಿರಿನ ಸೇತುವೆ ಮೇಲೆ ಸರ್ಕಸ್ ಮಾಡಬೇಕು. ಬೇರೆ ಸಂದರ್ಭದಲ್ಲಿ ಹೇಗೋ ಕಷ್ಟಪಟ್ಟು ನೀರು ಬತ್ತಿದ ಬಳಿಕ ನದಿಗೆ ಇಳಿದು ಹೋಗಬಹುದು. ಆದರೆ ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟುವುದೆಂದರೆ ಪ್ರಾಣ ಕೈಯಲ್ಲಿಟ್ಟುಕೊಂಡು ಸರ್ಕಸ್ ಮಾಡಿದಂತೆ. ಏನಾದರೂ ಹೆಚ್ಚು ಕಡಿಮೆ ಆದರೆ ಹೊಳೆಪಾಲು!
ಅಂಜನಕಜೆ, ಕೊಪ್ಪಡ್ಕ, ಗುಳಿಕಾನ, ಗುಡ್ಡೆಕಾನ, ಪೆರ್ಮುಕಜೆ ಇಲ್ಲಿಯ ವರೆಲ್ಲ ಎಲ್ಲ ಆವಶ್ಯಕತೆಗಳಿಗೂ ಈ ಬಿದಿರಿನ ಸೇತುವೆ ದಾಟಲೇಬೇಕು. 1986ರಿಂದಲೂ ಸೇತುವೆ ಕೇಳುತ್ತಲೇ ಇದ್ದಾರೆೆ. ಸೇತುವೆ ನೆರೆಗೆ ಕೊಚ್ಚಿಕೊಂಡು ಹೋದಲ್ಲಿ ಕಗ್ಗತ್ತಲ ಕಾಡೊಳಗೆ ಎಲ್ಲ ಸಂಪರ್ಕವನ್ನು ಕಡಿದುಕೊಂಡು ವಾರಗಟ್ಟಲೆ ಇರಬೇಕು ಎನ್ನುತ್ತಾರೆ ಸ್ಥಳೀಯ ರಾಮಣ್ಣ. ಈ ಹಿಂದೆ ಮತದಾನ ಬಹಿಷ್ಕಾರ ನಡೆಸಿದ್ದರು. ಆಗ ತಹಶೀಲ್ದಾರ್ ಬಂದು ಭರವಸೆ ನೀಡಿದ್ದರು, ಜನಪ್ರತಿನಿಧಿಗಳು ಬಂದು ಹೋದರು. ಫಲಿತಾಂಶ ಮಾತ್ರ ಇಂದಿಗೂ ಶೂನ್ಯ.
5 ಕಿ.ಮೀ. ಬದಲು 105 ಕಿ.ಮೀ. :
ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಬಳಿಯ ಕಡಮಕಲ್ಲು ಸ್ಥಳ ಮಡಿಕೇರಿಗೆ ಸೇರಿದೆ. ಇಲ್ಲಿರುವ ಹತ್ತಾರು ಕುಟುಂಬಗಳ ಸಂಕಷ್ಟ ದಶಕಗಳಿಂದಲೂ ತಪ್ಪಿಲ್ಲ. ಇವರೆಲ್ಲರೂ ಮಡಿಕೇರಿಯ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ್ದಾರೆ. ಪಡಿತರ ಹೊರತುಪಡಿಸಿ ಉಳಿದೆಲ್ಲ ಸೌಕರ್ಯಕ್ಕೆ ಮಡಿಕೇರಿಯ ಗಾಳಿ ಬೀಡಿಗೆ ತೆರಳಬೇಕು. ಆದರೆ ಆ ದಾರಿ ಅಷ್ಟು ಸುಗಮವಲ್ಲ. ಗಾಳಿ ಬೀಡು- ಕಡಮಕಲ್ಲು ಕಚ್ಚಾ ರಸ್ತೆ. 1962ರಿಂದ ರಸ್ತೆ ಬಗ್ಗೆ ಪ್ರಸ್ತಾವವಿದೆ. ಕಡಮಕಲ್ಲು ಗಡಿಭಾಗದಿಂದ ಗಾಳಿಬೀಡು ಮೂಲಕ ಮಡಿಕೇರಿ ಪೇಟೆಗೆ ಸುಮಾರು 27 ಕಿ.ಮೀ. ದೂರವಿದೆ. ಇದರ 5 ಕಿ.ಮೀ.ರಸ್ತೆ ಸಂಚರಿಸಲು ಯೋಗ್ಯವೇ ಇಲ್ಲ. ಎಷ್ಟರ ಮಟ್ಟಿಗೆ ಹಾಳಾಗಿದೆ ಎಂದರೆ ದ್ವಿಚಕ್ರ ವಾಹನ ತೆರಳುವುದಕ್ಕೂ ಸಾಧ್ಯವಿಲ್ಲ. ಅದಕ್ಕೆ ಈ ಜನರು ಗಾಳಿ ಬೀಡುವಿಗೆ ತೆರಳಲು ಸುಳ್ಯ ಮೂಲಕ ಸುಮಾರು 100 ಕಿ.ಮೀ. ಮತ್ತು ಮಡಿಕೇರಿ ಪೇಟೆಯಿಂದ ಹಿಂದಕ್ಕೆ ಗಾಳಿ ಬೀಡಿಗೆ ಬರಲು 5 ಕಿ.ಮೀ.- ಒಟ್ಟು 105 ಕಿ.ಮೀ. ದೂರ ಪ್ರಯಾಣಿಸುತ್ತಾರೆ. ಕಡಮ ಕಲ್ಲಿನಿಂದ ಸುಳ್ಯಕ್ಕೆ ತೆರಳಲು ಕಲ್ಮಕಾರಿಗೆ 5 ಕಿ.ಮೀ. ಕಾಲ್ನಡಿಗೆಯಲ್ಲಿ ಬರಬೇಕು. ಕಡಮಕಲ್ಲು ಗಾಳಿಬೀಡು ರಸ್ತೆ ಅಭಿವೃದ್ಧಿಯಾದರೆ ಮಡಿಕೇರಿ-ಸುಬ್ರಹ್ಮಣ್ಯ ನಡುವೆ ಕೂಗಳತೆ ದೂರವಾಗಲಿದೆ. ಈ ಪ್ರದೇಶ ವನ್ಯಧಾಮಕ್ಕೆ ಒಳಪಟ್ಟ ಕಾರಣ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಈ ರಸ್ತೆ ಆದಲ್ಲಿ ಅಲ್ಲಿನ ನಿವಾಸಿಗಳ ಅಲೆದಾಟ ತಪ್ಪುತ್ತದೆ. ಕಲ್ಮಕಾರು, ಸುಬ್ರಹ್ಮಣ್ಯ ಎಲ್ಲರಿಗೂ ಮಡಿಕೇರಿ ಹತ್ತಿರವಾಗುತ್ತದೆ.
300 ಕುಟುಂಬಗಳ ದಶಕದ ಕೂಗು :
ಕೊಲ್ಲಮೊಗ್ರು ಮತ್ತು ಕಲ್ಮಕಾರು ಈ ಎರಡು ಗ್ರಾಮಗಳನ್ನು ಸಮೀಪವಾಗಿ ಬೆಸೆಯುವ ಕೊಲ್ಲಮೊಗ್ರು-ಶಿವಾಲ-ಕಲ್ಮಕಾರು ಒಳ ರಸ್ತೆಯ ಬೇಡಿಕೆ ಇನ್ನೂ ಈಡೇರಿಲ್ಲ. ಕೊಲ್ಲಮೊಗ್ರು, ಶಿವಾಲ, ಮೆಂಟಕಜೆ, ಬೈಲು, ದಬ್ಬಡ್ಕ-ಹೀಗೆ ಸುಮಾರು 300 ಮನೆಗಳಿರುವ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ಮಾರ್ಗ ಅಭಿವೃದ್ಧಿ ಆಗದ ಕಾರಣ 8 ಕಿ. ಮೀ. ಸುತ್ತು ಬಳಸಿ ತಲುಪಬೇಕು. ಬೈಪಾಸ್ ರಸ್ತೆ ಆದಲ್ಲಿ ಅದು ಜನವಸತಿ ಪ್ರದೇಶದ ಮೂಲಕವೇ ಹಾದು ಹೋಗುವುದರಿಂದ ಇದರ ಮಧ್ಯೆ ಇರುವ ಜಾಗಗಳಲ್ಲಿ ವಾಸವಿರುವ ಕುಟುಂಬಗಳಿಗೆ ಈ ರಸ್ತೆ ನೆರವಾಗಲಿದೆ.
ಅಸೌಖ್ಯಗೊಂಡರೇ ದೇವರೇ ಗತಿ! :
ರಾತ್ರಿ ಅಸೌಖ್ಯಗೊಂಡರೆ ನೋವಿನ ನರಳಾಟ. ಮಳೆಗಾಲವಾಗಿದ್ದರೆ ಅರ್ಧಕ್ಕೆ ಬರುವ ಹೊತ್ತಿಗೆ ಹೊಳೆ ದಾಟಲಾಗದೆ ದಡದಲ್ಲೇ ಬಾಕಿ. ಇನ್ನು ಆಸ್ಪತ್ರೆಗೆ ಸೇರಿಸುವ ಅಂದರೆ ತುರ್ತು ವಾಹನದ ವ್ಯವಸ್ಥೆಗಳಿಲ್ಲ. ಎರಡೂ ಗ್ರಾಮಕ್ಕೆ ಸೇರಿ ಒಂದು ಆ್ಯಂಬು ಲೆನ್ಸ್ ಸಹ ಇಲ್ಲ. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಆ್ಯಂಬುಲೆನ್ಸ್ ಒಂದು ಇದೆ. ಅವಳಿ ಗ್ರಾಮಕ್ಕೆ ಸಹಕಾರಿಯಾಗುವಂತೆ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರವಿದೆ. ವೈದ್ಯರಿದ್ದರೂ ಗ್ರೂಪ್ “ಡಿ’, ಆರೋಗ್ಯ ಕಾರ್ಯಕರ್ತೆಯರ ಸಹಿತ ಹುದ್ದೆ ಖಾಲಿಯಾಗಿದೆ. ಆಸ್ಪತ್ರೆಗೆ ತೆರಳುವ ರಸ್ತೆಯೇ ಸರಿಯಿಲ್ಲ. ಬೆಡ್‌ಗಳ ಕೊರತೆಯೂ ಸಾಕಷ್ಟಿದೆ.
ಹಳ್ಳಿಹೊಳೆ ಅಭಿವೃದ್ಧಿಯತ್ತ :
ಮೊದಲ ಗ್ರಾಮ ಭಾರತ ಸರಣಿಯಿಂದಾದ ಬೆಳವಣಿಗೆ :
ಕುಂದಾಪುರ : “ಉದಯವಾಣಿ’ಯು ಜು. 2ರಂದು ಮೊದಲ ಗ್ರಾಮಭಾರತ ಸರಣಿಯಲ್ಲಿ ಹಳ್ಳಿಹೊಳೆ ಗ್ರಾಮದ ಕುರಿತಂತೆ ಸಮಗ್ರ ವರದಿ ಪ್ರಕಟಿಸಿ, ಗಮನಸೆಳೆದಿತ್ತು. ವರದಿ ಪ್ರಕಟಗೊಂಡ ಬಳಿಕ ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ.
- ಶೆಟ್ಟಿಪಾಲು – ವಾಟೆಬಚ್ಚಲು ಕಡೆಗೆ ಸಂಪರ್ಕಿಸುವ ರಸ್ತೆಯ ಹಕ್ಕಿನಕೊಡ್ಲುವಿನಿಂದ ವಾಟೆಬಚ್ಚಲುವರೆಗಿನ ರಸ್ತೆ ಅಭಿವೃದ್ಧಿಗೆ 1.25 ಕೋ.ರೂ. ಹಾಗೂ ಕುಂದಾಲಬೈಲು ವಿನಿಂದ ದಾಸನಕೊಡ್ಲು ಕಡೆಗಿನ ರಸ್ತೆ ಕಾಂಕ್ರಿಟೀಕರಣಕ್ಕೆ 55 ಲಕ್ಷ ರೂ. ಅನುದಾನ ಮಂಜೂರಾಗಿದೆ.
- ಹಳ್ಳಿಹೊಳೆ ಗ್ರಾಮಕ್ಕೆ ವರದಿ ಪ್ರಕಟಗೊಂಡ ತತ್‌ಕ್ಷಣ ಸಂಸದ ಬಿ.ವೈ. ರಾಘವೇಂದ್ರ ಅವರ ಕಚೇರಿಯ ತಂಡ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾದ ದೇವರಬಾಳು ಹಾಗೂ ಕಬ್ಬಿನಾಲೆಯಲ್ಲಿ ಸೇತುವೆ ಸಹಿತ ಗ್ರಾಮದ ನೆಟ್‌ವರ್ಕ್, ರಸ್ತೆ ಸಮಸ್ಯೆ ಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಬೈಂದೂರು ತಹಶೀಲ್ದಾರ್ ಸಹ ಭೇಟಿ ನೀಡಿ ವರದಿ ತಯಾರಿಸಿದ್ದಾರೆ.
- ಜಿಯೋ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಆಗಮಿಸಿ, ಯಳಬೇರಿನಲ್ಲಿ ರಿಪ್ಲೆಕೇಬಲ್ ಅನ್ನು ಅಳ ವಡಿಸಿದರೆ ಚಕ್ರಾ ಮೈದಾನ, ದೇವರಬಾಳು ಹಾಗೂ ಹಳ್ಳಿಹೊಳೆ ಹೀಗೆ 3 ಕಡೆಗಳಲ್ಲಿ ಟವರ್ ನಿರ್ಮಿಸುವ ಕುರಿತು, ಪರಿಶೀಲನೆ ನಡೆಸಿದ್ದಾರೆ.
- ಹಿಂದೆ ಗ್ರಾಮಕ್ಕೆ ಒಂದು ದಿನ ಮಾತ್ರ ಗ್ರಾಮ ಕರಣಿಕರು ಭೇಟಿ ನೀಡುತ್ತಿದ್ದು, ಈಗ ವಾರದ ಎರಡು ದಿನ ಬುಧವಾರ ಹಾಗೂ ಶನಿವಾರ ಭೇಟಿ ನೀಡುತ್ತಿದ್ದಾರೆ.
ಈಡೇರದ ರಸ್ತೆ ಬೇಡಿಕೆ :
ಕೊಲ್ಲ ಮೊಗ್ರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಖ್ಯ ರಸ್ತೆ ಹೊರತುಪಡಿಸಿ ಯಾವ ರಸ್ತೆಯೂ ಅಭಿವೃದ್ಧಿ ಯಾಗಿಲ್ಲ. ಗ್ರಾಮೀಣ ಒಳ ರಸ್ತೆಗಳಿಗೆ ಡಾಮರೇ ಸೋಕಿಲ್ಲ. ಎಲ್ಲ ರಸ್ತೆಗಳಲ್ಲೂ ಹೊಂಡ ಗುಂಡಿಗಳೇ ಇವೆ. ಕಲ್ಮಕಾರು-ಕೊಲ್ಲಮೊಗ್ರು ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ 75 ಕಿ.ಮೀ. ಗ್ರಾಮೀಣ ಕಚ್ಚಾ ರಸ್ತೆ ಅಭಿವೃದ್ಧಿಯಾಗಬೇಕು.
ತೋಟದಮಜಲು-ಮಾವಿನಕಟ್ಟೆ ಜಿ.ಪಂ. ರಸ್ತೆ ಬೇಡಿಕೆಯೂ ಜನಪ್ರತಿನಿಧಿಗಳ ಭರವಸೆಗಷ್ಟೇ ಸೀಮಿತ. ಈ ರಸ್ತೆಯಾದಲ್ಲಿ ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ಕಟ್ಟ ಗೋವಿಂದನಗರ, ಕಜೊjàಡಿ, ದೊಡ್ಡ ಕಜೆ, ಕರಂಗಲ್ಲು ಗ್ರಾಮಸ್ಥರು ತಾ| ಕೇಂದ್ರ ತಲುಪಲು ಸುತ್ತು ಬಳಸುವುದು ತಪ್ಪಲಿದೆ. ಹರಿಹರ ಪಳ್ಳತ್ತಡ್ಕದಿಂದ ಬೆಂಡೋಡಿ, ಶಿರೂರು ಮೂಲಕ ಕೊಲ್ಲಮೊಗ್ರು ಸಂಪರ್ಕಿಸುವ ಬೈಪಾಸ್ ರಸ್ತೆ ಬೇಡಿಕೆಯೂ ಇದೆ. ಇದು ಈಡೇರಿದಲ್ಲಿ ಬೆಂಡೋಡಿ, ಶಿರೂರು ಪರಿಸರದ 60 ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಕೋನಡ್ಕ ರಸ್ತೆ ಬೇಡಿಕೆ ಈಡೇರಿದರೆ ಇನ್ನಷ್ಟು ಅನುಕೂಲ ವಾಗಲಿದೆ. ಇಲ್ಲಿಯವರೆಲ್ಲರೂ ಶ್ರಮಿಕರು ಮತ್ತು ಮುಗ್ಧರು. ಸಣ್ಣ, ಮಧ್ಯಮ, ಸ್ವದ್ಯೋಗ, ಸಂಪ್ರದಾಯದ ಕರಕುಶಲ ಕೆಲಸ ಗಳಲ್ಲಿ ನಿರತರಾಗಿದ್ದಾರೆ. ಹೊಳೆಗಳಲ್ಲಿ ಸಾಕಷ್ಟು ನೀರು ಹರಿದರೂ ಅಭಿವೃದ್ಧಿಯ ನದಿಯ ನೀರು ಇವರವರೆಗೂ ಹರಿದೇ ಇಲ್ಲ.
ಸಿಂಹ ಬಿಟ್ಟು ಬೇರೆಲ್ಲ ಇದೆಯಂತೆ :
ನಮ್ಮ ಪೂರ್ವಜರು ಕೃಷಿಕರು. ಹೇಗೋ ಮೂಲ ಸೌಕರ್ಯ ಇಲ್ಲದೆ ಇದ್ದರು. ಇದೀಗ ವ್ಯವಸಾಯ, ಕೃಷಿ ಮಾಡಿಕೊಂಡು ಬದುಕುವ ಎಂದರೆ ಅದಕ್ಕೂ ಅವಕಾಶವಿಲ್ಲ. ಕಾಡುಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಕೊಕ್ಕೋ, ತೆಂಗು,ಬಾಳೆ, ರಬ್ಬರ್, ಕರಿಮೆಣಸು ಇತ್ಯಾದಿ ಬೆಳೆಯಲೂ ಪ್ರಾಣಿಗಳು ಬಿಡುತ್ತಿಲ್ಲ. ಆನೆ, ಚಿರತೆ, ಕಾಡುಕೋಣ, ಹಂದಿ, ನವೀಲು ಹೀಗೆ ಪ್ರಾಣಿ ಪಕ್ಷಿಗಳು ಸಾಕಷ್ಟಿವೆ. ಸಿಂಹ ಬಿಟ್ಟು ಉಳಿದೆಲ್ಲವೂ ನಮ್ಮಲ್ಲಿ ಇವೆ. ಅದೆಷ್ಟು ವರ್ಷಗಳು ಉರುಳಿದರೂ ಭರವಸೆಗಳು ಸಿಕ್ಕಿವೆಯೇ ಹೊರತು ಪರಿಹಾರವಲ್ಲ ಎನ್ನುತ್ತಾರೆ ಕೃಷಿಕ ಹರ್ಷ ದೇವಜನ.
ಇನ್ನೊಂದಿಷ್ಟು ಸಮಸ್ಯೆಗಳಿವೆ ! :
ಕೊಲ್ಲಮೊಗ್ರು ಗ್ರಾ. ಪಂ. ನಿರ್ಮಲಾ ಗಾಂಧಿ ಪುರಸ್ಕೃತಗೊಂಡಿದೆ. ದುರ್ದೈವ ಎಂದರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕವೇ ಇಲ್ಲ. ಮಂಜಲ್‌ಪಡ್ಪು ಎಂಬಲ್ಲಿ ಜಾಗ ಗುರುತಿಸಿದ್ದು, ಅರಣ್ಯ ಎಂಬ ಕಾರಣಕ್ಕೆ ತಿರಸ್ಕರಿಸಲ್ಪಟ್ಟಿದೆ. ಮನೆ ಗಳಿಂದ ಕಸ ಸಂಗ್ರಹ ವ್ಯವಸ್ಥೆಯಿಲ್ಲ. ಶ್ಮಶಾನಕ್ಕೆ ಕೊಲ್ಲಮೊಗ್ರುವಿನ ಬೆಂಡೋಡಿ (ಪರಿಶಿಷ್ಟ ಜಾತಿ), ಕಲ್ಮಕಾರುವಿನ ಗಡಿ ಕಲ್ಲು ಎಂಬಲ್ಲಿ ಜಾಗ ಕಾದಿರಿಸಲಾಗಿದೆ. ಆದರೆ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಪಂಚಾ ಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶ್ಮಶಾನವಿಲ್ಲ. ಜಾಗವಿಲ್ಲ ದವರು ಕಾಡು ಗುಡ್ಡಗಳಲ್ಲೇ ಶವಸಂಸ್ಕಾರ ಪೂರೈಸಬೇಕು.
ಪಂಚಾಯತ್ ಕಟ್ಟಡ ಅರಣ್ಯ ಜಾಗದಲ್ಲಿ :
ಈ ಅವಳಿ ಗ್ರಾಮಗಳು ಕಾಡುಗಳಿಂದ ಆವೃತ ಗೊಂಡಿವೆ. ಡೀಮ್ಡ್ ಫಾರೆಸ್ಟ್, ಅರಣ್ಯ ಭೂಮಿ ಕಾರಣಕ್ಕೆ ನೂರಾರು ಕುಟುಂಬಗಳು ನಿವೇಶನ, ವಸತಿ ರಹಿತವಾಗಿವೆ. ವಿಶೇಷವೆಂದರೆ ಗ್ರಾ.ಪಂ. ಕಟ್ಟಡವೂ ಅರಣ್ಯ ವ್ಯಾಪ್ತಿಯಲ್ಲಿದೆ. ಸಾರ್ವಜನಿಕರ ಆಟದ ಮೈದಾನ, ಶ್ಮಶಾನ, ಅಂಗನವಾಡಿ ಕೇಂದ್ರ ಹೀಗೆ ರಸ್ತೆ ಸಹಿತ ಅಭಿವೃದ್ಧಿ ಕೆಲಸ ಮಾಡಲು ಬೇರೆ ಭೂಮಿಯೇ ಇಲ್ಲ. ಹಾಗಾಗಿ ಸೌಕರ್ಯ ಗಳೂ ಇಲ್ಲ.
ಕಾಡು ಬಿಡಲ್ಲ, ಪರಿಹಾರ ಸಿಗುತ್ತಿಲ್ಲ :
ಗಡಿಭಾಗ ಕಲ್ಮಕಾರು ಭಾಗದಲ್ಲಿ ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಭೂಕುಸಿತ ಮತ್ತು ಜಲಪ್ರಳಯ ಸಂಭವಿಸಿತ್ತು. ಘಟನೆಯಲ್ಲಿ ಗುಳಿಕ್ಕಾನದ 10 ಕುಟುಂಬಗಳು ಭೂಮಿ, ಮನೆ ಕಳೆದುಕೊಂಡಿದ್ದವು. ಅವರಲ್ಲಿ ಒಂದು ಕುಟುಂಬ ಹೊರಬಂದು ಸ್ವಂತ ಮನೆ ಹೊಂದಿದ್ದರೆ, 8 ಪರಿಶಿಷ್ಟ ಕುಟುಂಬಗಳಿಗೆ ಇನ್ನೂ ಶಾಶ್ವತ ಪರಿಹಾರ ದೊರಕಿಲ್ಲ. ಸೂಕ್ತ ಜಾಗ ಸಿಗದೆ ಕುಟುಂಬಗಳು ತತ್‌ಕ್ಷಣಕ್ಕೆ ಕಾಡು ಬಿಟ್ಟು ಹೊರ ಬರಲು ಸಿದ್ಧರಿಲ್ಲ. ಆದರೆ ಪ್ರತಿ ಮಳೆಗಾಲದಲ್ಲೂ ಕಾಡಿನಿಂದ ಹೊರಗೆ ಓಡಿ ಬರುತ್ತಾರೆ. ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡುತ್ತಾರೆ. ನಮ್ಮ ಕಷ್ಟಕ್ಕೆ ಶಾಶ್ವತ ಪರಿಹಾರ ಹುಡುಕುವವರೇ ಇಲ್ಲ ಎನ್ನುತ್ತಾರೆ ಇಲ್ಲಿನ ಸಂತ್ರಸ್ತರು. ಇವರಿಗೆ ಸೂಕ್ತ ನಿವೇಶನ ನೀಡುವಲ್ಲಿ ಅರಣ್ಯ ನೀತಿಯೂ ತೊಡಕಾಗಿದೆ. ಅರಣ್ಯ, ಡೀಮ್ಡ್ ಫಾರೆಸ್ಟ್ ಗಡಿಗುರುತು ಸ್ಪಷ್ಟಪಡಿಸಿದರೆ ಅನುಕೂಲವಾಗಲಿದೆ.
ಮಕ್ಕಳ ಮುಖಕ್ಕೆ ಕರಿ, ಘಾಟು ! :
ಕೊಲ್ಲಮೊಗ್ರು-ಕಲ್ಮಕಾರು ಹೆಚ್ಚು ಮಳೆಯಾಗುವ ಪ್ರದೇಶ. ಒಂದೊಮ್ಮೆ ಮಳೆ ಅಬ್ಬರಿಸಿದರೆ ಸಾಲು ಸಾಲು ವಿದ್ಯುತ್ ಕಂಬಗಳು ಕ್ಷಣಾರ್ಧದಲ್ಲಿ ಮುರಿದು ಬೀಳುತ್ತವೆ. ತಂತಿಗಳಲ್ಲಿ ದೋಷಗಳು ಕಾಣಿಸಿಕೊಳ್ಳುತ್ತವೆ. ಇಂದು ಹೋದ ವಿದ್ಯುತ್ ಮರು ಪೂರೈಕೆಗೊಳ್ಳಲು ನಾಲ್ಕೈದು ದಿನಗಳು ಕಾಯ ಬೇಕು. ಅಲ್ಲಿಯವರೆಗೂ ಕತ್ತಲೆಯ ಬದುಕು. ಮಳೆಗಾಲದಲ್ಲಿ ಎಲ್ಲರ ಮನೆಗಳಲ್ಲಿ ಡೀಸೆಲ್ ಚಿಮಿಣಿ ದೀಪ. ಚಿಮಿಣಿ ದೀಪದ ಕರಿಗೆ ಮುಖವೊಡ್ಡಿ ಓದುವ ಮಕ್ಕಳ ಮುಖಕ್ಕೆ ಕಪ್ಪು ಕರಿ ಆವರಿಸಿಕೊಳ್ಳುತ್ತದೆ.
ನೆಟ್‌ವರ್ಕ್ ಕಬ್ಬಿಣದ ಕಡಲೆ :
ಕೋವಿಡ್ ಮಹಾಮಾರಿ ಅಪ್ಪಳಿಸಿದ ಬಳಿಕ ಕಳೆದ ಒಂದೂವರೆ ವರ್ಷದಿಂದ ಅತೀ ಹೆಚ್ಚು ಕಿವಿಗೆ ಬೀಳುತ್ತಿರುವ ಶಬ್ದ ಆನ್‌ಲೈನ್ ಕ್ಲಾಸ್. ಕಲ್ಮಕಾರು, ಕೊಲ್ಲಮೊಗ್ರು ಎರಡೂ ಗ್ರಾಮದವರಿಗೂ ನೆಟ್‌ವಕ್ ಕಬ್ಬಿಣದ ಕಡಲೆಕಾಯಿ. ಬಿಎಸ್‌ಎನ್‌ಎಲ್ ಟವರ್ ಲೆಕ್ಕಕುಂಟು ಆಟಕ್ಕಿಲ್ಲ. ಖಾಸಗಿ ಕಂಪೆ ನಿಯ ನೆಟ್‌ವರ್ಕ್ ಬಂದರೂ ಗುಡ್ಡ ಗಾಡುಗಳ ಮನೆಗಳಿಗೆ ಸಂಕೇತ ತಲುಪುತ್ತಿಲ್ಲ. ಕೊಲ್ಲಮೊಗ್ರುವಿನಲ್ಲಿ ಯಾವುದೂ ಇಲ್ಲ. ಹೀಗಾಗಿ ಮಕ್ಕಳು ನೆಟ್‌ವರ್ಕ್ ಅರಸಿ ಕಾಡುಗುಡ್ಡಗಳನ್ನು ಹತ್ತಿ ಇಳಿಯಬೇಕು. ಮನೆ ಅಂಗಳಕ್ಕೆ ಇಳಿಯಲೇ ಕಾಡು ಪ್ರಾಣಿಗಳ ಭಯ. ಇದರ ನಡುವೆ ಕಾಡಿಗೆ ತೆರಳುವು ದೆಂದರೆ ಹೇಗಿರಬಹುದು? ವರ್ಕ್ ಫ್ರಂ ಹೋಮ್ ಉದ್ಯೋಗಿಗಳು ರಸ್ತೆಬದಿ ಕಾರು, ಬೈಕ್ ನಿಲ್ಲಿಸಿ ಸಿಗ್ನಲ್ ಅರಸುತ್ತಿರುತ್ತಾರೆ. ಊರಲ್ಲಿ ಯಾರಾದರೂ ಮೃತಪಟ್ಟರೆ ಸ್ಥಳೀ ಯರೇ ಬಿಎಸ್‌ಎನ್‌ಎಲ್ ಸಂಸ್ಥೆಯ ಜನರೇಟರ್‌ಗೆ ಡೀಸೆಲ್ ಹಾಕಿ ಸಿಗ್ನಲ್ ಪಡೆದು ಸುದ್ದಿ ಮುಟ್ಟಿಸುತ್ತಾರೆ. ಸ್ಥಿರ ದೂರವಾಣಿ ವ್ಯವಸ್ಥೆ ಎಂದೋ ನೇಪಥ್ಯಕ್ಕೆ ಸರಿದಿದೆ.
ನಾನು ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ಬಿಎಸ್ಸಿ ನರ್ಸಿಂಗ್ ಕಲಿಯುತ್ತಿರುವೆ. ಆನ್‌ಲೈನ್ ಕ್ಲಾಸಿಗೆ ಹೋಗದಿದ್ದರೆ ಉಪನ್ಯಾಸಕರು ಸುಮ್ಮನಿರುವುದಿಲ್ಲ. ರಾತ್ರಿ ಹೊತ್ತಿನಲ್ಲೂ ಕ್ಲಾಸ್ ಇರುತ್ತದೆ. ಆ ಹೊತ್ತಿನಲ್ಲಿ ಸಿಗ್ನಲ್ ಅರಸಿಕೊಂಡು ಹೋಗಲು ಭಯ. ಇತ್ತೀಚೆಗಷ್ಟೇ ಹುಡುಗನೊಬ್ಬನನ್ನು ತೋಳ ಅಟ್ಟಿಸಿಕೊಂಡು ಬಂದ ಘಟ ನೆಯೂ ನಡೆದಿತ್ತು. ಸಿಗ್ನಲ್‌ಗೆ ಒಂದು ವ್ಯವಸ್ಥೆ ಕಲ್ಪಿಸಿದರೆ ನಮಗೆಲ್ಲ ಅನುಕೂಲ ಎನ್ನುತ್ತಾರೆ ವಿದ್ಯಾರ್ಥಿನಿ ಚೈತನ್ಯ ಕೋನಡ್ಕ.
ಕೊನೆ ಬಸ್ ಕಥೆ :
ತೀರಾ ಹಳ್ಳಿಯಾಗಿರುವ ಈ ಪ್ರದೇಶ ಗಳಿಗೆ ಬಸ್‌ಗಳೂ ಕಡಿಮೆ. ತಾಲೂಕು ಕೇಂದ್ರದಿಂದ ಸದ್ಯ 2 ಬಸ್ ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಒಂದು ಸೇರಿ 3 ಬಸ್‌ಗಳಿವೆ. ಉಳಿದಂತೆ ಖಾಸಗಿ ವಾಹನ, ಸರ್ವಿಸ್ ವ್ಯಾನುಗಳೇ ಗತಿ. ಸಮಯಕ್ಕೆ ಸರಿಯಾಗಿ ಈ ಭಾಗಕ್ಕೆ ಬಸ್‌ಗಳಿಲ್ಲ. ತಾ| ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ಹೋಗಿ ಕೆಲಸ ಮಾಡಿಸಿ ಕೊಳ್ಳಬೇಕಿದ್ದರೆ ಬೆಳ್ಳಂಬೆಳಗ್ಗೆ ಹೊರಡಬೇಕು. ಮರಳಿ ರಾತ್ರಿ ಈ ಭಾಗಕ್ಕೆ ತಾ| ಕೇಂದ್ರದಿಂದ ಇರುವ 5.40ರ ಕೊನೆ ಬಸ್ ಹಿಡಿಯಬೇಕು. ತಪ್ಪಿದರೆ ಬಸ್ ನಿಲ್ದಾಣ ದಲ್ಲೋ, ಖಾಸಗಿ ರೂಮ್ ಮಾಡಿಯೋ ಉಳಿಯಬೇಕು. ನೆಂಟರಿಷ್ಟರು ಬರುವು ದಿರಲಿ, ಇಲ್ಲಿನ ಹುಡುಗರಿಗೆ ಹೆಣ್ಣು ಕೊಡಲೂ ಹಿಂಜರಿಯುವ ಸ್ಥಿತಿ ಇದೆ.
ತುರ್ತು ಬೇಡಿಕೆಗಳು :
- ನೆಟ್‌ವರ್ಕ್ ಸಮಸ್ಯೆ ಜರೂರಾಗಿ ಪರಿಹರಿಸಬೇಕು
- ಎಟಿಎಂ, ಬ್ಯಾಂಕ್ ಪಾಸ್‌ಬುಕ್ ಎಂಟ್ರಿ ವ್ಯವಸ್ಥೆ ಅಗತ್ಯ.
- ಗ್ರಾ.ಪಂಚಾಯತ್ ಕಚೇರಿಗೆ ಬಿಎಸ್‌ಎನ್‌ಎಲ್ ಒಎಫ್ಸಿ ನಿರ್ವಹಣೆ ಸರಿಪಡಿಸಬೇಕು
- ಪಂಚಾಯತ್ ಕಚೇರಿ, ಪಡಿತರ ಸೇವೆಗಳಲ್ಲಿನ ನೆಟ್‌ವರ್ಕ್, ಸರ್ವರ್ ಸಮಸ್ಯೆ ನಿವಾರಣೆ
- ಪಶು ಆಸ್ಪತ್ರೆಗೆ ವೈದ್ಯರ ನೇಮಕ
- ಕೊಲ್ಲಮೊಗ್ರು-ಕಲ್ಮಕಾರು ರಸ್ತೆಯ ಆಲದ ಮರ ಸಮೀಪದ ಬಿರುಕುಬಿಟ್ಟ ಸೇತುವೆ ದುರಸ್ತಿ
- ಕೊಲ್ಲಮೊಗ್ರು-ಕಲ್ಮಕಾರು ಭಾಗಕ್ಕೆ ಬಸ್ ಹೆಚ್ಚಿಸುವುದು
ಇವಿಷ್ಟೂ ಆಗಲಿ :
- ಸುಸಜ್ಜಿತ ಬಸ್ ನಿಲ್ದಾಣ
- ಶಿಥಿಲ ಶಾಲಾ ಕಟ್ಟಡಗಳ ದುರಸ್ತಿ
- ಕಿಂಡಿಅಣೆಕಟ್ಟುಗಳ ನಿರ್ಮಾಣ
- ಮಾಯಿಲಕೋಟೆಗೆ ಟ್ರಕ್ಕಿಂಗ್ ಅವಕಾಶ
- ಬೆಂಡೋಡಿ ಮಾಂದಲ್ ಪಟ್ಟಿ ಟ್ರಕ್ಕಿಂಗ್‌ಗೆ ಅವಕಾಶ
-ಬಾಲಕೃಷ್ಣ ಭೀಮಗುಳಿ
-ದಯಾನಂದ ಕಲ್ನಾರ್
“ಗ್ರಾಮಭಾರತ’ಕ್ಕೆ ತಿಳಿಸಿ
ಸಾಕಷ್ಟು ಮೂಲ ಸೌಕರ್ಯವಿಲ್ಲದಿರುವ ಹಳ್ಳಿಗಳು ನಿಮ್ಮ ಸುತ್ತಮುತ್ತ ಇದ್ದರೆ ನಮ್ಮ ವಾಟ್ಸ್‌ಆ್ಯಪ್ ನಂಬರ್‌ಗೆ ಹಳ್ಳಿಯ ಹೆಸರು, ತಾಲೂಕು, ಜಿಲ್ಲೆಯ ವಿವರವನ್ನು ಕಳುಹಿಸಿ. ನಮ್ಮವರದಿಗಾರರ ತಂಡವು ಗಮನಿಸಿ ವರದಿ ಮಾಡಲಿದೆ: 7618774529