Advertisement

IPL 2024; ಅಮೋಘ ಆಟವಾಡಿ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಕೆಆರ್

10:25 PM May 26, 2024 | Team Udayavani |

ಚೆನ್ನೈ : ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಅತ್ಯಮೋಘ ಬೌಲಿಂಗ್ ದಾಳಿ ನಡೆಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿ ಮೂರನೇ ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಕೆಕೆಆರ್ ಲೀಗ್ ಹಂತದಲ್ಲೂ ಪ್ರಾಬಲ್ಯ ಮೆರೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿತ್ತು. ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಗಳ ಚಂಡ ಮಾರುತದಂತೆ ಎರಗಿದ ದಾಳಿಗೆ ನಲುಗಿ 18.3 ಓವರ್ ಗಳಲ್ಲಿ ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟಾಯಿತು.

ಕೆಕೆಆರ್ ಗೆಲುವಿಗೆ 114 ರನ್ ಗಳ ಸಣ್ಣ ಗುರಿ ಮುಂದಿಟ್ಟಿತು. ಗುರಿ ಬೆನ್ನತ್ತಿದ್ದ ಕೆಕೆಆರ್ ಸುನಿಲ್ ನಾರಾಯಣ್ ಅವರ ವಿಕೆಟ್ ಕಳೆದುಕೊಂಡರೂ ವೆಂಕಟೇಶ್ ಅಯ್ಯರ್ ಅಂಜದೆ ಆಟ ಮುಂದುವರಿಸಿದರು. ಸ್ಪೋಟಕ ಆಟವಾಡಿದ ವೆಂಕಟೇಶ್ ಅಯ್ಯರ್ ಸ್ಮರಣೀಯ ಅರ್ಧ ಶತಕ 52ರನ್( 26ಎಸೆತ ) ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್ ಗೆಲುವಿನ ದಡ ಸುಲಭದಲ್ಲಿ ತಲುಪಿಸಿದರು. 10.3ಓವರ್ ಗಳಲ್ಲಿ 114 ರನ್ ಗಳಿಸಿ ಜಯಭೇರಿ ಬಾರಿಸಿತು.  ಗುರ್ಬಾಜ್ 39(31ಎಸೆತ) ರನ್ ಗಳಿಸಿ ಔಟಾದರು.

ಹೀನಾಯ ನಿರ್ವಹಣೆ ತೋರಿದ ಹೈದರಾಬಾದ್
ಮೊದಲ ಓವರ್ ನಲ್ಲೆ 2 ರನ್ ಗಳಿಸಿದ್ದ ಅಭಿಷೇಕ್ ಶರ್ಮ ಅವರ ವಿಕೆಟ್ ಮಿಚೆಲ್ ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಿತ್ತರು. ಇನ್ನೊಂದು ಓವರ್ ನಲ್ಲಿ ಹೆಡ್ ಶೂನ್ಯಕ್ಕೆ ನಿರ್ಗಮಿಸಿದರು. ತಂಡ ಭಾರೀ ಆಘಾತಕ್ಕೆ ಸಿಲುಕಿತು.

Advertisement

ಆರಂಭಿಕ ಆಘಾತದ ಬಳಿಕ ಕೆಕೆಆರ್ ಬೌಲರ್ ಗಳು ಕೇಕೆ ಹಾಕುತ್ತಲೇ ಸಾಗಿದರು. ಹೈದರಾಬಾದ್ ಬ್ಯಾಟ್ಸ್ ಮ್ಯಾನ್ ಮಂಕಾದರು. ಹೆಚ್ಚು ಹೊತ್ತು ನಿಲ್ಲಲಿಲ್ಲ.ರಾಹುಲ್ ತ್ರಿಪಾಠಿ 9,ನಿತೀಶ್ ರೆಡ್ಡಿ 13,ಐಡೆನ್ ಮಾರ್ಕ್ರಾಮ್ 20 , ಶಹಬಾಜ್ ಅಹ್ಮದ್ 8,ಅಬ್ದುಲ್ ಸಮದ್ 4, ಹೆನ್ರಿಚ್ ಕ್ಲಾಸೆನ್ 16, ಜಯದೇವ್ ಉನದ್ಕತ್ 4 ರನ್ ಗಳಿಸಿ ಔಟಾದರು.

ಕೊನೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ನೂರು ದಾಟಲು ನೆರವಾದರು. 24 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು.

ಕೆಕೆಆರ್ ನ ಆಂಡ್ರೆ ರಸೆಲ್3 ವಿಕೆಟ್ , ಮಿಚೆಲ್ ಸ್ಟಾರ್ಕ್ 2ವಿಕೆಟ್ , ಹರ್ಷಿತ್ ರಾಣಾ 2 ವಿಕೆಟ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಕಿತ್ತು ಮಾರಕವಾಗಿ ಪರಿಣಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next