ಕೋಲ್ಕತಾ:ಕೆಮ್ಮು ಎಂದು ವೈದ್ಯರ ಬಳಿ ಹೋದ 12 ವರ್ಷದ ಬಾಲಕನನ್ನು ಪರೀಕ್ಷೆಗೊಳಪಡಿಸಿದ ವೈದ್ಯರಿಗೆ ಆತನ ಎಡ ಶ್ವಾಸಕೋಶದೊಳಗೆ ಪೆನ್ ಕ್ಯಾಪ್ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿರುವ ಘಟನೆ ಕೋಲ್ಕತಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
12 ವರ್ಷದ ಬಾಲಕನ ಶ್ವಾಸಕೋಶದೊಳಗಿದ್ದ ಪೆನ್ ಕ್ಯಾಪ್ ಅನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದು, ಹುಡುಗನ ಆರೋಗ್ಯ ಸ್ಥಿರವಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ದಕ್ಷಿಣ ಕೋಲ್ಕತಾದ ಗಾರಿಯಾ ಪ್ರದೇಶದ ನಿವಾಸಿ ಬಾಲಕನನ್ನು ಪೋಷಕರು ಎಸ್ ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಿ, ಕೆಮ್ಮು ಮತ್ತು ಶೀತದ ಸಮಸ್ಯೆ ಇದ್ದಿರುವುದಾಗಿ ತಿಳಿಸಿದ್ದರೆಂದು ಡಾ.ಅರುಣಾಭಾ ಸೇನ್ ಗುಪ್ತಾ ಹೇಳಿರುವುದಾಗಿ ವರದಿ ತಿಳಿಸಿದೆ.
ಬಾಲಕನ ಪರೀಕ್ಷೆ ನಡೆಸಿದ ವೈದ್ಯರಿಗೆ ದೇಹದ ಒಳಗೆ ಏನೋ ತೊಂದರೆ ಇದ್ದಿರಬೇಕು ಎಂದು ಸಿಟಿ ಸ್ಕ್ಯಾನ್ ಮಾಡಿಸಿದ್ದರು. ಆಗ ಆತನ ಶ್ವಾಸಕೋಶದ ಎಡಭಾಗದಲ್ಲಿ ಪೆನ್ ಕ್ಯಾಪ್ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಈ ಬಾಲಕ ಪೆನ್ ಕ್ಯಾಪ್ ಅನ್ನು ಕಳೆದ ನವೆಂಬರ್ ತಿಂಗಳಿನಲ್ಲಿಯೇ ನುಂಗಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದರು. ಆದರೆ ಆ ಬಗ್ಗೆ ಹೆಚ್ಚು ಗಮನ ಹರಿಸಿಲ್ಲವಾಗಿತ್ತು ಎಂದು ತಿಳಿಸಿದ್ದಾರೆ. ನಂತರ ಆತ ಕೆಮ್ಮು ಮತ್ತು ಶೀತ ಬಾಧೆಗೆ ಒಳಗಾಗಿದ್ದ ಎಂದು ವರದಿ ತಿಳಿಸಿದೆ. ಶಸ್ತ್ರಚಿಕಿತ್ಸೆ ಮೂಲಕ ಪೆನ್ ಕ್ಯಾಪ್ ಹೊರ ತೆಗೆದಿದ್ದು ಹುಡುಗನ ಆರೋಗ್ಯ ಸ್ಥಿರವಾಗಿದೆ ಎಂದು ಡಾ.ಸೇನ್ ಗುಪ್ತಾ ತಿಳಿಸಿದ್ದಾರೆ.