ಕೋಲ್ಕತಾ: ಡಿಸೆಂಬರ್‌ನಲ್ಲಿ ಕೋಲ್ಕತಾದಲ್ಲಿ ಸುಮಾರು 1 ಲಕ್ಷ ಜನರು ಒಟ್ಟಾಗಿ ಭಗವದ್ಗೀತೆ ಪಠಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸೋಮವಾರ ಹೇಳಿದ್ದಾರೆ.
ಡಿಸೆಂಬರ್ 24 ರಂದು ನಗರದ ಹೃದಯ ಭಾಗದಲ್ಲಿರುವ ಬ್ರಿಗೇಡ್ ಪರೇಡ್ ಮೈದಾನದಲ್ಲಿ ‘ಏಕ್ ಲಕ್ಷ ಗೀತಾ ಪಥ’ ಕಾರ್ಯಕ್ರಮ ನಡೆಯಲಿದೆ ಎಂದರು.
“ಪ್ರಧಾನಿ ಮೋದಿಯವರನ್ನು ಕಾರ್ಯಕ್ರಮಕ್ಕೆ ಹಾಜರಾಗುವಂತೆ ನಾವು ಆಹ್ವಾನಿಸಿದ್ದೇವೆ ಮತ್ತು ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲು ಹಲವಾರು ಧಾರ್ಮಿಕ ಗುಂಪುಗಳು ಒಗ್ಗೂಡಿವೆ. ಇದು ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ನಾವು ಇದನ್ನು ನಡೆಸುತ್ತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಸಿವಿ ಆನಂದ ಬೋಸ್ ಮತ್ತು ರಾಜ್ಯದ ಇತರ ಪ್ರಮುಖರಿಗೆ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಮಜುಂದಾರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಗಾಗಿ ಕಾರ್ಯಕ್ರಮ
2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಕಾರ್ಯತಂತ್ರವಾಗಿ ಆಯೋಜಿಸಲಾಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೇಳಿಕೊಂಡಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುವುದು ಸಹಜ. 2019 ರ ಲೋಕಸಭೆ ಚುನಾವಣೆ ಮತ್ತು 2021 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಾವು ಈ ಪ್ರವೃತ್ತಿಯನ್ನು ನೋಡಿದ್ದೇವೆ. ಆದರೆ, ಇದು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ರಾಜ್ಯದಲ್ಲಿ 42 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆದ್ದಿತ್ತು. ಟಿಎಂಸಿಯ ಸಂಖ್ಯೆ 22 ಕ್ಕೆ ಇಳಿದಿತ್ತು. ಕಾಂಗ್ರೆಸ್ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.