Advertisement

ಕೊಲ್ಹಾರದಲ್ಲಿ ನ್ಯಾಯಾಲಯ ಸ್ಥಾಪನೆಗೆ ಸಕಾರಾತ್ಮಕ ಸ್ಪಂದನೆ

05:02 PM Feb 09, 2020 | Naveen |

ಕೊಲ್ಹಾರ: ನೂತನ ತಾಲೂಕು ಕೇಂದ್ರ ಕೊಲ್ಹಾರ ಪಟ್ಟಣದಲ್ಲಿ ಕಿರಿಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯಗಳನ್ನು ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುತ್ತೇನೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪವನಕುಮಾರ ಭಜಂತ್ರಿ ಹೇಳಿದರು.

Advertisement

ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಕೊಲ್ಹಾರ ತಾಲೂಕು ರಚನಾ ಹೋರಾಟ ಸಮಿತಿ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮೂಲತಃ ನನ್ನ ಊರು ಕೊಲ್ಹಾರವಾಗಿದ್ದು ಪಟ್ಟಣದ ಅಭಿವೃದ್ಧಿಗಾಗಿ ನಾನು ಸರಕಾರದ ಗಮನ ಸೆಳೆಯುತ್ತೇನೆ. ಅದರಂತೆ ನಮ್ಮ ಮನೆ ದೇವರಾದ ಹನುಮಂತ ದೇವರ ದೇವಸ್ಥಾನದ ಸುತ್ತಲು ಆವರಣ ಗೋಡೆ, ಉಗ್ರಾಣ ಕೋಣೆ ಮತ್ತು ಹೊರಾಂಗಣದ ಪರಸಿ ಜೋಡಣೆಗಾಗಿ ನಮ್ಮ ಕುಟುಂಬದಿಂದ ಸಕಲ ರೀತಿ ಸಹಾಯವನ್ನು ಮಾಡಲು ಹಾಗೂ ದೇವಸ್ಥಾನದ ಜಾಗೆ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತ್ವರಿತವಾಗಿ ನಿವೇಶನದ ಹಕ್ಕು ಪತ್ರ ಮಂಜೂರು ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲು ತಿಳಿಸುತ್ತೇನೆ. ಅದರಂತೆ ದೇವಸ್ಥಾನದ ಅಭಿವೃದ್ಧಿಗೆ ಸರಕಾರದಿಂದ ಸಿಗುವ ಸೌಲಭ್ಯಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಕೊಲ್ಹಾರ ದಿಗಂಬರೇಶ್ವರ ಮಠದ ಪೀಠಾಧಿಕಾರಿ ಕಲ್ಲಿನಾಥ ದೇವರು ಮಾತನಾಡಿ, ನಮಗೆ ಸಿಗುವಂಥ ಅಧಿಕಾರ ಎಷ್ಟೇ ದೊಡ್ಡದಾದರೂ ನಾವು ನಂಬಿಕೊಂಡು ಬಂದ ದೇವರು ಹಾಗೂ ಹೆತ್ತ ತಂದೆ ತಾಯಿಗಳ ಸೇವೆ ಮಾಡುವುದೇ ಪರಮಾನಂದವನ್ನು ನೀಡುತ್ತದೆ ಎನ್ನುವದಕ್ಕೆ ನ್ಯಾಯಮೂರ್ತಿಗಳಾದ ಪವನಕುಮಾರ ಅವರ ಕಾರ್ಯ ಮೆಚ್ಚುವಂಥದ್ದು.

ತಲೆ-ತಲಾಂತರಗಳಿಂದ ಅವರ ಮನೆ ದೇವರಾದ ಕೊಲ್ಹಾರ ಹನುಮಾನ ದೇವಸ್ಥಾನಕ್ಕೆ ಪ್ರತಿ ವರ್ಷ ತಪ್ಪದೇ ಬರುತ್ತಿರುವದು ಮಹತ್ವದ್ದಾಗಿದೆ. ಅವರ ಕುಟುಂಬದ ಸರ್ವರು ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾ ದೇಶ ವಿದೇಶಗಳಲ್ಲಿ ಇದ್ದರೂ ತವರೂರು ಕೊಲ್ಹಾರವನ್ನು ಮರೆಯದೇ ಪರಿಚಯಿಸುತ್ತ ಸಾಗುತ್ತಿರುವದು ಶ್ಲಾಘನೀಯ ಎಂದರು.

ಈ ವೇಳೆ ನ್ಯಾಯಮೂರ್ತಿ ಪವನಕುಮಾರ ಭಜಂತ್ರಿ ಅವರನ್ನು ದೇವಸ್ಥಾನ ಸಮಿತಿ ಹಾಗೂ ಕೊಲ್ಹಾರ ತಾಲೂಕು ರಚನಾ ಹೋರಾಟ ಸಮಿತಿಯವರು ಗೌರವಿಸಿದರು. ನಂತರ ನ್ಯಾಯಾಲಯಗಳನ್ನು ಪ್ರಾರಂಭಿಸಬೇಕೆಂದು ಮನವಿ ಸಲ್ಲಿಸಿದರು. ಶಿವಾನಂದ ಶೀಲವಂತ, ಬಿ.ಯು. ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ಈರಣಗೌಡ ಕೋಮಾರ, ಸಂಗನಬಸಪ್ಪ ಗಾಣಿಗೇರ, ಸಂಕಪ್ಪ ಕಾಖಂಡಕಿ, ಪರಪ್ಪ ಗಣಿ. ಬಸಲಿಂಗಪ್ಪ ಉಪ್ಪಲದಿನ್ನಿ, ನಂದಪ್ಪ ಗಿಡ್ಡಪ್ಪಗೋಳ, ನಂದಬಸಪ್ಪ ಗಣಿ, ಗುರಪ್ಪ ಗಣಿ, ಆರ್‌.ಬಿ. ಮಠ, ಪಡಿಯಪ್ಪ ನಾಗರಾಳ, ಸಂಗಮೇಶ ಮೇಲಗಿರಿ, ಬಸಪ್ಪ ಚೌಧರಿ ಪಟ್ಟಣದ ಪ್ರಮುಖರು ಇದ್ದರು. ಈರಯ್ಯ ಗಣಕುಮಾರ ಸ್ವಾಗತಿಸಿದರು. ಅರುಣ ಔರಸಂಗ ವಂದಿಸಿದರು. ಪರಶುರಾಮ ಗಣಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next