Advertisement
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಮಗಿರುವ ದೆಹಲಿ ಪ್ರಭಾವವನ್ನು ಹಲವಾರು ಹೈಕಮಾಂಡ್ ಮುಖಂಡರ ಮೇಲೆ ಬೀರುವ ಮೂಲಕ ಸಿದ್ದು ಕೋಲಾರದಲ್ಲಿ ಸ್ಪರ್ಧಿಸುವ ವಿಚಾರವನ್ನು ವಿವಾದವಾಗಿ ಮಾರ್ಪಡಿಸಿದ್ದಾರೆ. ಸಿದ್ದರಾಮಯ್ಯರಿಗೆ ಕೋಲಾರ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಮುಟ್ಟುವಂತೆ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಕೋಲಾರ ತೊರೆದು ವರುಣಾ ಆಯ್ಕೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ ಎಂಬುದನ್ನು ಸಿದ್ದು ಬೆಂಬಲಿಗರು ಖಚಿತಪಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ತಮ್ಮ 2ನೇ ಆಯ್ಕೆಯ ಕ್ಷೇತ್ರವಾಗಿ ಆಯ್ಕೆ ಮಾಡಿ ಕೊಳ್ಳಲು ಸಾಧ್ಯವಾಗದಿದ್ದರೆ, ಕೆ.ಎಚ್.ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಕಲಾರಿಗೆ ಚುನಾವಣೆಯಲ್ಲಿ ಬಿಸಿ ಮುಟ್ಟಿಸಲು ಬೆಂಬಲಿಗರು ನಿರ್ಧರಿಸಿದ್ದಾರೆ.
Related Articles
Advertisement
ಈ ಸಭೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗ ದಲಿತ ಬಲಗೈ ಮುಖಂಡರು ಸೇರಿದಂತೆ ಭೋವಿ, ಪರಿಶಿಷ್ಟ ವರ್ಗ, ಕುರುಬ, ಅಲ್ಪಸಂಖ್ಯಾತ ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ಮುಖಂಡರು ಭಾಗವಹಿಸಿರುವುದು ವಿಶೇಷ.
ಒತ್ತಡ ಹೇರಲು ತಂತ್ರಗಾರಿಕೆ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ತಮ್ಮೆಲ್ಲರ ವಿರೋಧವನ್ನು ಕೇವಲ ಕೆ.ಎಚ್.ಮುನಿ ಯಪ್ಪ ಮಾತ್ರವಲ್ಲದೆ ಅವರ ಪುತ್ರಿ ರೂಪಕಲಾ ಸ್ಪರ್ಧಿಸುವ ಕ್ಷೇತ್ರಗಳಲ್ಲಿಯೂ ಮುಂದುವರೆಸ ಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರಿಗೆ ಮೊದಲ ಪಟ್ಟಿಯಲ್ಲಿಯೇ ದೇವನಹಳ್ಳಿಯಿಂದ ಸ್ಪರ್ಧಿಸುವಂತೆ ಹೆಸರು ಪ್ರಕಟವಾಗಿದ್ದು, ಕೆಜಿಎಫ್ ಕ್ಷೇತ್ರದಲ್ಲಿ ಗೆಲ್ಲುವ ನೆಚ್ಚಿನ ಸ್ಥಾನದಲ್ಲಿರುವ ಅವರ ಪುತ್ರಿ ರೂಪಕಲಾರಿಗೆ ಸಿದ್ದರಾಮಯ್ಯ ಬೆಂಬಲಿಗರು ಬಿಸಿ ಮುಟ್ಟಿಸುವ ತಯಾರಿ ನಡೆಸುವ ಮೂಲಕ ಪ್ರತ್ಯಕ್ಷವಾಗಿಯೇ ಎಚ್ಚರಿಕೆ ರವಾನಿಸಿದ್ದಾರೆ. ಸಿದ್ದರಾಮಯ್ಯರನ್ನು ಕೋಲಾರದಿಂದ ಎರಡನೇ ಆಯ್ಕೆಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಲು ಹೈಕಮಾಂಡ್ ವಲಯದಲ್ಲಿ ಕೆ.ಎಚ್.ಮುನಿಯಪ್ಪ ಅನಿವಾರ್ಯವಾಗಿ ಪ್ರಯತ್ನಿಸಬೇಕು, ಯಾವುದೇ ಹಂತದಲ್ಲಿ ಅಡ್ಡಿಪಡಿಸಬಾರದು ಎಂಬ ಒತ್ತಡ ಹೇರುವ ತಂತ್ರಗಾರಿಕೆ ಇದಾಗಿದೆಯೆಂಬ ಅಭಿಮತ ಸಿದ್ದು ಬೆಂಬಲಿಗರ ಸಭೆಯಲ್ಲಿ ಕೇಳಿ ಬಂದಿದೆ.
ಪ್ರತಿತಂತ್ರ ರೂಪಿಸಬಹುದೇ: ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರವು ದೇವನಹಳ್ಳಿಯಲ್ಲಿ ಕೆ.ಎಚ್.ಮುನಿಯಪ್ಪರ ಮೇಲೂ, ಕೆಜಿಎಫ್ನಲ್ಲಿ ರೂಪಕಲಾರ ಮೇಲೂ ಹೇಗೆ ಕಂಟಕವಾಗಬಹುದು, ಈ ತಂತ್ರಕ್ಕೆ ಕೆ.ಎಚ್.ಮುನಿಯಪ್ಪ ಮತ್ತು ರೂಪಕಲಾ ಯಾವ ಪ್ರತಿತಂತ್ರವನ್ನು ರೂಪಿಸ ಬಹುದು ಎಂಬುದನ್ನು ಕಾದು ನೋಡಬೇಕಿದೆ.
-ಕೆ.ಎಸ್.ಗಣೇಶ್