Advertisement

KGF Gold: ಮತ್ತೆ ಚಿನ್ನ ಕೊಡಲಿದೆ ಕೋಲಾರದ ಕೆಜಿಎಫ್!

09:01 PM Jun 20, 2024 | Team Udayavani |

ಬೆಂಗಳೂರು: ಕಳೆದ ಒಂದೂಕಾಲು ದಶಕಗಳಿಂದ ಕೋಲಾರ, ಕೆಜಿಎಫ್ ಭಾಗದಲ್ಲಿ ಸ್ಥಗಿತಗೊಂಡಿದ್ದ ಗಣಿ ಚಟುವಟಿಕೆ ಮತ್ತೆ ಗರಿಗೆದರಲಿದೆ. ಭಾರತ್‌ ಚಿನ್ನದ ಗಣಿ ಕಂಪನಿಗೆ (ಬಿಜಿಎಂಎಲ್‌) ಗಣಿ ಚಟುವಟಿಕೆ ನಡೆಸಲು ರಾಜ್ಯ ಸರಕಾರ ಕೊನೆಗೂ ಅಸ್ತು ಎಂದಿದೆ.

Advertisement

ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಯಾದ ಬಿಜಿಎಂಲ್‌ನ ಗಣಿ ಗುತ್ತಿಗೆ ಅವಧಿಯು 2012ರಲ್ಲಿ ಮುಕ್ತಾಯಗೊಂಡಿತ್ತು. ರಾಜ್ಯ ಸರಕಾರದ ವಿಶೇಷ ಅನುಮತಿಗಾಗಿ ಇಷ್ಟು ವರ್ಷ ಕಾದು ಕುಳಿತಿದ್ದ ಬಿಜಿಎಂಎಲ್‌ಗೆ ಸಿಹಿ ಸುದ್ದಿ ಸಿಕ್ಕಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಈ ಕುರಿತು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, ಪ್ರಸ್ತುತ ಕೋಲಾರದ ಕೆಜಿಎಫ್ನಲ್ಲಿ ನಿಷ್ಕ್ರಿಯಗೊಂಡಿರುವ 1003.04 ಎಕರೆ ಗಣಿ ಗುತ್ತಿಗೆ ಪ್ರದೇಶದಲ್ಲಿನ 13 ಗಣಿ ತ್ಯಾಜ್ಯ (ಟೈಲಿಂಗ್‌ ಡಂಪ್‌)ಗಳಲ್ಲಿ ಗಣಿ ಚಟುವಟಿಕೆಗಳನ್ನು ಮುಂದುವರಿಸಲು ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ (ಎಂಎಂಆರ್‌ಡಿ) ಸೆಕ್ಷನ್‌ 17ರ ಅನ್ವಯ ಷರತ್ತುಬದ್ಧ ಸಹಮತಿಯನ್ನು ಸರಕಾರ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಗಣಿ ತ್ಯಾಜ್ಯದಲ್ಲಿ ಮಾತ್ರ ಚಟುವಟಿಕೆ:

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬಂಗಾರದಿನ್ನಿ ಹಾಗೂ ಸುತ್ತಮುತ್ತಲಿನ ಮತ್ತಿತರ ಗ್ರಾಮಗಳ 5213.21 ಹೆಕ್ಟೇರ್‌ ಪ್ರದೇಶದಲ್ಲಿ ಚಿನ್ನ, ಬೆಳ್ಳಿ, ಗ್ರಾಫೈಟ್‌ ಖನಿಜಗಳ ಗಣಿಗಾರಿಕೆ ನಡೆಸಲು 1973ರ ಆ. 9ರಿಂದ 20 ವರ್ಷಗಳ ಗುತ್ತಿಗೆಯನ್ನು ಬಿಜಿಎಂಎಲ್‌ ಸಂಸ್ಥೆಗೆ ನೀಡಲಾಗಿತ್ತು. 1993ರ ಆ. 9ರಿಂದ ಮತ್ತೆ 20 ವರ್ಷ ಎಂದರೆ 2013ರ ವರೆಗೆ ಗಣಿ ಗುತ್ತಿಗೆ ವಿಸ್ತರಿಸಲಾಗಿತ್ತು. 2012ರಲ್ಲಿ ಪುನಃ 20 ವರ್ಷ ಗಣಿ ಗುತ್ತಿಗೆ ನವೀಕರಿಸಲು ಬಿಜಿಎಂಎಲ್‌ ಅರ್ಜಿ ಸಲ್ಲಿಸಿತ್ತು. ಇದೀಗ ಗಣಿ ತ್ಯಾಜ್ಯಗಳಲ್ಲಿ ಮಾತ್ರ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿದೆ. ಅಂದರೆ, ಈ ಹಿಂದೆ ಗಣಿಗಾರಿಕೆ ನಡೆಸಿ ಹೊರತೆಗೆದು 1003.04 ಎಕರೆಯ 13 ಕಡೆ ರಾಶಿ ಹಾಕಿರುವ ತ್ಯಾಜ್ಯಗಳಲ್ಲಿ ಇರುವ ಅದಿರನ್ನು ಸಂಸ್ಕರಣೆಗೆ ಒಳಪಡಿಸಲು ಅನುಮತಿಸಲಾಗಿದೆ.

Advertisement

ಬಾಕಿ ಮೊತ್ತದ ಬದಲು 2330 ಎಕರೆ:

ಒಟ್ಟಾರೆ 5,213 ಎಕರೆಯನ್ನು 1973ರಿಂದ ಬಿಜಿಎಂಎಲ್‌ ಗಣಿ ಚಟುವಟಿಕೆಗೆ ಬಳಸುತ್ತಿತ್ತು. ಈ ಪೈಕಿ 1003 ಎಕರೆಯಲ್ಲಿ ಗಣಿ ತ್ಯಾಜ್ಯಗಳ 13 ರಾಶಿಯನ್ನು ಸುರಿದಿದ್ದು, ಎಂಎಆರ್‌ಡಿ ಅನ್ವಯ ರಾಜ್ಯ ಸರಕಾರದ ಅನುಮತಿ ಇಲ್ಲದೆ ಯಾವುದೇ ಚಟುವಟಿಕೆಯನ್ನು ನಡೆಸುವಂತಿರಲಿಲ್ಲ. ಹೀಗಾಗಿ ಎಲ್ಲ ಚಟುವಟಿಕೆಗಳೂ ನಿಷ್ಕ್ರಿಯಗೊಂಡಿದ್ದವು. 2022-23ನೇ ಸಾಲಿನವರೆಗೆ ಬಿಜಿಎಂಎಲ್‌ನಿಂದ ರಾಜ್ಯ ಸರಕಾರಕ್ಕೆ 75,24,88,025 ರೂ.ಗಳು ಪಾವತಿಯಾಗಬೇಕಿತ್ತು. ಇದೀಗ 2023-24ನೇ ಸಾಲಿನ ಮೊತ್ತವನ್ನೂ ರಾಜ್ಯ ಸರಕಾರಕ್ಕೆ ಪಾವತಿಸಲು ಬಿಜಿಎಂಎಲ್‌ಗೆ ನಿರ್ದೇಶನ ನೀಡುವಂತೆ ಕೇಂದ್ರ ಸರಕಾರಕ್ಕೆ ಕೋರಿತ್ತು. 75.24 ಕೋಟಿ ರೂ.ಗಳ ಬದಲಿಗೆ ಇದೇ ಪ್ರದೇಶದಲ್ಲಿನ 2,330 ಎಕರೆಯನ್ನು ರಾಜ್ಯ ಸರಕಾರಕ್ಕೆ ನೀಡಲು ಬಿಜಿಎಂಎಲ್‌ ಒಪ್ಪಿಕೊಂಡಿದ್ದು, ಈ ಸ್ಥಳದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲು ಸರಕಾರ ಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next