ಶಿರಸಿ: ಚುನಾವಣಾ ಸುಧಾರಣೆಯ ಕುರಿತು ರಾಜ್ಯದಾದ್ಯಂತ ಜಾಗೃತಿ ಮಾಡಿಸುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೋಲಾರದಲ್ಲಿ ನಡೆದ ಸಭೆಯೊಂದರಲ್ಲಿ ಗಮನಕ್ಕೆ ಬಂದ ಸ್ವಾರಸ್ಯಕರ ಹಾಗೂ ಅಚ್ಚರಿಯ ಘಟನೆಯೊಂದನ್ನು ಶಿರಸಿಯಲ್ಲಿ ಬಿಚ್ಚಿಟ್ಟರು.
ಶಿರಸಿಯಲ್ಲಿ ಮಂಗಳವಾರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಕೋಲಾರದ ಸಭೆಯ ಘಟನೆ ಉದಾಹರಣೆ ನೀಡಿ ಮಾತನಾಡಿದರು.
ಕೋಲಾರದಲ್ಲಿ ಹೋದಾಗ ಅಲ್ಲಿನ ಜಿಲ್ಲಾಧಿಕಾರಿಗಳು ಶತಮಾನ ಕಂಡ ಇಬ್ಬರು ಮತದಾರರನ್ನು ಸಮ್ಮಾನಿಸಲು ಆ ಸಭೆಗೇ ಆಹ್ವಾನಿಸಿದ್ದರು. ಸಮ್ಮಾನ ಮಾಡುವಾಗ ಶತಮಾನ ಕಂಡ ಎಷ್ಟು ಮತದಾರರು ಜಿಲ್ಲೆಯಲ್ಲಿ ಇದ್ದಾರೆ ಎಂದು ಕೇಳಿದೆ. 400 ಮಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇಷ್ಟು ಆಯಸ್ಸು ಇರುವ ಜನರಿರಲು ನಿತ್ಯ ಕೆಲಸ, ಮನೆ ಊಟ, ಶ್ರಮದ ಜೀವನ, ಹಳ್ಳಿ ಜೀವನ ಕಾರಣ ಎಂದು ಡಿಸಿ ಹೇಳಿದರು. ನನಗೂ ಅಚ್ಚರಿ ಆಯಿತು, ಸಭೆಯಲ್ಲೇ ಶಿರಸಿಯಲ್ಲೂ ಹೇಳುವೆ ಈ ಘಟನೆ ಎಂದಿದ್ದೆ ಎಂದರು.
ಶಿರಸಿಯಲ್ಲಿ ಎಷ್ಟು ಜನ ಶತಾಯುಶಿಗಳು ಎಂದು ಪಕ್ಕದಲ್ಲಿದ್ದ ಸಹಾಯಕ ಆಯುಕ್ತ ಆರ್.ದೇವರಾಜು ಕೇಳಿದಾಗ ನಾಲ್ಕು ತಾಲೂಕಿನಿಂದ ಎಂಟು ಜನರ ಯಾದಿ ಸಿಕ್ಕಿದೆ ಎಂದರು. ಅಲ್ಲಿ ಶತಾಯುಶಿಗಳ ಸಂಖ್ಯೆ ಎಷ್ಟು ಹೆಚ್ಚಿದೆ, ಖುಷಿಯಾಗುತ್ತದೆ ಕೇಳಿ ಎಂದೂ ಸ್ಪೀಕರ್ ಹೇಳಿದರು.
ಬಡವ, ಶ್ರೀಮಂತ ಇದ್ದರೂ ನಿತ್ಯ ಶ್ರಮವಹಿಸಿ ಕಾಯಕ, ಮನೆ ಊಟ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಇದು ಸಾಕ್ಷಿ ಎನ್ನಬಹುದು ಎಂದು ಸಭೆಯಲ್ಲಿದ್ದ ಡಾ. ಗಜಾನನ ಭಟ್ಟ, ಡಾ. ವಿನಾಯಕ ಕಣ್ಣಿ ಪ್ರತಿಕ್ರಿಯೆ ನೀಡಿದರು. ಅಂದರೆ ನಾವು ಶತಾಯುಶಿಗಳಾಗಬೇಕು ಎಂದರೆ ಏನು ಮಾಡಬೇಕು ಎಂಬುದು ಗೊತ್ತಾಯ್ತಲ್ಲ ಎಂದೂ ಕಾಗೇರಿ ಪ್ರತಿಕ್ರಿಯೆ ನೀಡಿದರು.