Advertisement

ಕೋಲಾರ: ಮೋದಿ ಅಲೆಗೆ ಸಿಕ್ಕಿರಲಿಲ್ಲ ಬಲೆ

08:26 AM Mar 14, 2019 | |

ಕೋಲಾರ: ದೇಶಾದ್ಯಂತ 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಕೋಲಾರ ಮೀಸಲು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ 7ನೇ ಗೆಲುವು ಪಡೆದಿದ್ದರು.

Advertisement

ಕ್ಷೇತ್ರದಲ್ಲಿ ನಡೆಯುವ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಪ್ರದಾಯಿಕ ಎದುರಾಳಿಗಳಾಗಿರುತ್ತವೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಿಜೆಪಿ ಪ್ರತಿಸ್ಪರ್ಧಿಯಾಗುತ್ತಿದೆ. 2014 ಕ್ಕಿಂತ ಹಿಂದಿನ ಹಿಂದಿನ ಮೂರು ಚುನಾವಣೆಗಳಲ್ಲಿ ಇದು ಸಾಬೀತಾಗಿತ್ತು. ಆದರೆ, 2014ರ ಚುನಾ ವಣೆಯ ವಿಶೇಷವೆಂದರೆ ಲೋಕಸಭಾ ಚುನಾವಣೆ ಯಲ್ಲಿಯೂ ಕಾಂಗ್ರೆಸ್‌ನ ಸಮೀಪದ ಪ್ರತಿಸ್ಪರ್ಧಿ ಆಗಿ ಜೆಡಿಎಸ್‌ ಹೊರಹೊಮ್ಮಿತ್ತು.

ಆಗಿನ ಕ್ಷೇತ್ರವಾರು ಬಲಾಬಲ: ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಮೂರರಲ್ಲಿ ಗೆದ್ದು, ಕಾಂಗ್ರೆಸ್‌ ಎರಡರಲ್ಲಿ ಗೆದ್ದಿದ್ದರೆ, ಬಿಜೆಪಿ ಒಂದರಲ್ಲಿ ಮತ್ತು ಪಕ್ಷೇತರರು ಎರಡರಲ್ಲಿ ಗೆಲುವು ಸಂಪಾದಿಸಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್‌ ಪಡೆದ ಮತಗಳು 4.50 ಲಕ್ಷಕ್ಕಿಂತಲೂ ಹೆಚ್ಚಾಗಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಪಡೆದಷ್ಟೇ ಮತಗಳನ್ನು ಪಡೆದುಕೊಂಡಿದ್ದರೂ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಿಡುತ್ತಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ 4.18 ಲಕ್ಷ ಮತಗಳನ್ನು ಪಡೆದುಕೊಳ್ಳುವ ಕಾಂಗ್ರೆಸ್‌ನ ಕೆ.ಎಚ್‌.ಮನಿಯಪ್ಪ ಗೆಲುವಿನ ನಗೆ ಬೀರಿದ್ದರೆ, ಜೆಡಿಎಸ್‌ ಕೋಲಾರ ಕೇಶವ 3.71 ಲಕ್ಷ ಮತಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 

ಮತದಾನ ಪ್ರಮಾಣ: ಕೋಲಾರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ.ಎಚ್‌.ಮುನಿಯಪ್ಪ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಮತ್ತು ಮಾಲೂರು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ ಪಡೆದುಕೊಂಡಿದ್ದರು. ಇನ್ನುಳಿದ ನಾಲ್ಕು ಕ್ಷೇತ್ರಗಳ ಪೈಕಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ಕ್ಷೇತ್ರಗಳಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಗಿಂತಲೂ ಹೆಚ್ಚು ಮತಗಳನ್ನು ತನ್ನದಾಗಿಸಿಕೊಂಡಿತ್ತು. 

ಕೆಜಿಎಫ್‌ ಮತ್ತು ಬಂಗಾರಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪೈಪೋಟಿ ನೀಡಿರುವ ಬಿಜೆಪಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡು ಕಾಂಗ್ರೆಸ್‌ ಪಕ್ಷ ವನ್ನು ಎರಡನೇ ಸ್ಥಾನಕ್ಕೂ, ಜೆಡಿಎಸ್‌ ಪಕ್ಷವನ್ನು ಮೂರನೇ ಸ್ಥಾನಕ್ಕೂ ನೂಕಿತ್ತು.

Advertisement

ಅಂತರ: ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ ಗಿಂತಲೂ ಕಾಂಗ್ರೆಸ್‌ ಪಕ್ಷವು ಬಂಗಾರಪೇಟೆಯಲ್ಲಿ ಅತಿ ಹೆಚ್ಚು ಅಂದರೆ 36,994 ಮತ ಪಡೆದುಕೊಂಡಿದೆ. ಕೆಜಿಎಫ್‌ನಲ್ಲಿ 16,750, ಮುಳಬಾಗಿಲಿನಲ್ಲಿ 10,994, ಕೋಲಾರದಲ್ಲಿ 3568 ಮತ್ತು ಮಾಲೂರಿನಲ್ಲಿ 15197, ಶ್ರೀನಿವಾಸಪುರದಲ್ಲಿ 3802 ಮತಗಳ ಮುನ್ನಡೆ ಪಡೆದುಕೊಂಡಿತ್ತು.

ಜೆಡಿಎಸ್‌ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದ ಚಿಂತಾಮಣಿಯಲ್ಲಿ ಕಾಂಗ್ರೆಸ್ಸಿಗಿಂತಲೂ 34595 ಮತಗಳನ್ನು
ಪಡೆದುಕೊಂಡಿದ್ದು, ಶಿಡ್ಲಘಟ್ಟದಲ್ಲಿ ಕೇವಲ 4279 ಮತಗಳ ಲೀಡ್‌ ದಾಖಲಿಸುವಲ್ಲಿ ಸಫಲವಾಗಿತ್ತು.

ವರದಾನವಾಗಿದ್ದ ಪಕ್ಷಾಂತರ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಶಾಸಕರು ಕೆ.ಎಚ್‌. ಮುನಿಯಪ್ಪರ ಗೆಲುವಿಜಿ ವರದಾನವಾಗಿದ್ದರು. ಆಗಿನ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್‌, ಕೋಲಾರ ಶಾಸಕ ಆರ್‌.ವರ್ತೂರು ಪ್ರಕಾಶ್‌, ಮಾಲೂರು ಮಾಜಿ ಶಾಸಕ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟರು ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪರ ಗೆಲುವಿಗೆ ಕಾರಣರಾಗಿದ್ದರು.

ಜಾತಿ ಲೆಕ್ಕಾಚಾರ, ದಲಿತರ ಒಗ್ಗಟ್ಟು: ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕೆ.ಎಚ್‌.ಮುನಿಯಪ್ಪ ವಿರೋಧಿ ಅಲೆ ಇತ್ತು. ಆದರೆ, ಈ ವಿರೋಧಿ ಅಲೆಯನ್ನು ನರೇಂದ್ರ ಮೋದಿ ಅಲೆಯೊಂದಿಗೆ ಜೋಡಿಸಿ ಜಾತಿ ಸಮೀಕರಣದಲ್ಲಿ ದಲಿತ ಬಲಗೈ ಜಾತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು.

ಇದೇ ತಪ್ಪನ್ನು ಜೆಡಿಎಸ್‌ ಸಹ ಮಾಡುವ ಮೂಲಕ ಕಾಂಗ್ರೆಸ್‌ಗೆ ದಲಿತ ಬಲಗೈ ಪಂಗಡದ ಮತಗಳು ಹರಿದು ಬರುವಂತ ವಾತಾವರಣ ನಿರ್ಮಿಸಿತ್ತು. ಇದರಿಂದ ಕಾಂಗ್ರೆಸ್‌ ಸುಲಭ ಗೆಲುವಿಗೆ ಕಾರಣ ವಾಯಿತು.

ವಿಧಾನಸಭಾ ಚುನಾವಣೆಯಲ್ಲಿ ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ನಜೀರ್‌ ಅಹಮದ್‌ರ ಗೆಲುವಿಗೆ ಕೆ.ಎಚ್‌.ಮುನಿಯಪ್ಪ ಸಹಕರಿಸಲಿಲ್ಲವೆಂಬ ಸಬೂಬಿ ನಿಂದ ಮುಸ್ಲಿಂ ಮತದಾರರು ಮುನಿಸಿಕೊಂಡರೂ, ದಲಿತ ಬಲಗೈ ಮತ್ತು ಎಡಗೈ ಸಮಾಜದವರು ಮೊದಲ ಬಾರಿ ಕೆ.ಎಚ್‌.ಮುನಿಯಪ್ಪರನ್ನು ಸಮಗ್ರವಾಗಿ ಬೆಂಬಲಿಸುವ ಮೂಲಕ ದಲಿತರ ಒಗ್ಗಟ್ಟನ್ನು
ಪ್ರದರ್ಶಿಸಿದ್ದರು.

ಲಾಭವಾದ ತ್ರಿಕೋನ ಸ್ಪರ್ಧೆ: ಕೋಲಾರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಾಗಲೆಲ್ಲವೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪರ ಗೆಲುವು ಸುಲಭವಾಗುತ್ತದೆ ಎನ್ನುವುದು 2014ನೇ ಚುನಾವಣೆಯಲ್ಲಿಯೂ ಮತ್ತೂಮ್ಮೆ ಸಾಬೀತಾಗಿತ್ತು. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿಯ ಭೋವಿ ಸಮಾಜದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದವು. ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಕೆ. ಎಚ್‌.ಮುನಿಯಪ್ಪರ ವಿರುದ್ಧ ಬಿದ್ದ 6.50 ಲಕ್ಷ ಮತಗಳು ವಿಭಜನೆಯಾಗುವಂತೆ ಮಾಡಿದ್ದರು. ಇದರಿಂದಲೇ 4.18 ಲಕ್ಷ ಮತಗಳನ್ನು ಪಡೆದುಕೊಂಡ ಕೆ.ಎಚ್‌.ಮುನಿಯಪ್ಪ ಗೆಲುವು ಸುಲಭವಾಗಿತ್ತು.

2014 ಏಪ್ರಿಲ್‌ 17ರಂದು ಚುನಾವಣೆ ನಡೆದ ದಿನವೇ ಉದಯವಾಣಿ ತನ್ನ ಸಮೀಕ್ಷೆಯಲ್ಲಿ ದಾಖಲಿಸಿದಂತೆ ಕಾಂಗ್ರೆಸ್‌ಗೆಲುವು ನಿಜವಾಗಿತ್ತು. ಇದನ್ನು ಹೊರತುಪಡಿಸಿದಂತೆ ಕೋಲಾರ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಉಳಿದೆಲ್ಲಾ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷಾ ವರದಿಗಳು ಸುಳ್ಳಾಗಿದ್ದವು.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next