Advertisement

ಕೋಲಾರಕ್ಕೆ ಸಿಕ್ಕಿದ್ದೇ ಮಹಾಪ್ರಸಾದ

06:56 AM Feb 09, 2019 | Team Udayavani |

ಕೋಲಾರ: ಸಮ್ಮಿಶ್ರ ಸರ್ಕಾರ ಮಂಡಿಸಿದ ಮೊದಲ ಬಜೆಟ್ ಹಾಗೂ ಸಿದ್ದರಾಮಯ್ಯ ಸರ್ಕಾರ ಮಂಡಿಸಿದ ಕೊನೆ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಈ ಕೊರತೆ ತುಂಬಿಕೊಡುವಂತೆ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಲಿದೆ ಎಂದು ಕೋಲಾರ ಜಿಲ್ಲೆಯ ಜನ ನಿರೀಕ್ಷಿಸುತ್ತಿದ್ದರು. ಆದರೆ, ಕೋಲಾರ ಜಿಲ್ಲೆಯ ಜನರ ನಿರೀಕ್ಷೆ ಇರಲಿ, ಜನಪ್ರತಿನಿಧಿಗಳು ಪತ್ರಿಕಾ ಹೇಳಿಕೆಗಳ ಮೂಲಕ ಕೇಳಿದ್ದನ್ನು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊಡಲೇ ಇಲ್ಲ.

Advertisement

ನಿರೀಕ್ಷೆಗಳೇನಿದ್ದವು: ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆಯಡಿ ನೀರನ್ನು 3 ಬಾರಿ ಸಂಸ್ಕರಿಸಿದ ನಂತರ ಕೆರೆಗಳಿಗೆ ಹರಿಸಬೇಕೆಂಬ ಬಗ್ಗೆ ಬಜೆಟ್ ಚಕಾರವೆ ತ್ತದಿರುವುದು ಜನರನ್ನು ನಿರಾಸೆಗೆ ತಳ್ಳಿದೆ. ಕೆಜಿಎಫ್ ಚಿನ್ನದ ಗಣಿ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಗಣಿ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಪಡಿಸುವ ಕುರಿತು ಬಜೆಟ್ ಸ್ಪಂದಿಸಿಲ್ಲ. ಕೋಲಾರ ಜಿಲ್ಲೆಗೆ ಮಂಜೂರಾದ ರ್ವೆಲ್ವೆ ಯೋಜನೆಗಳಿಗೆ ಭೂಮಿ ನೀಡುವ ಕುರಿತು ಪ್ರಸ್ತಾಪ ಮಾಡಿಲ್ಲ.

ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಮಾವು ಸಂಸ್ಕರಣೆಗೆ ಘಟಕ ಮಂಜೂರು ಮಾಡದಿರುವುದು ಮಾವು ಬೆಳೆಗಾರರನ್ನು ನಿರಾಸೆಗೊಳಿಸಿದೆ. ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ಕೋಲಾರವನ್ನು ಕಡೆಗಣಿಸಿ ಇತರೇ ಜಿಲ್ಲೆಗಳಲ್ಲಿ ರೇಷ್ಮೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ಶಾಶ್ವತ ಬರ ಪೀಡಿತ ಕೋಲಾರ ಜಿಲ್ಲೆಯನ್ನು ವಿಶೇಷವಾಗಿ ಪರಿಗ ಣಿಸಿ ವಿದರ್ಭ ಮಾದರಿಯ ಪ್ಯಾಕೇಜ್‌ ಪ್ರಕಟಿ ಸಬೇಕೆಂಬುದಕ್ಕೂ ಬಜೆಟ್ ಸ್ಪಂದಿಸಿಲ್ಲ.

ಅಂತರ್ಜಲ ತೀವ್ರವಾಗಿ ಕುಸಿದಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮರುಪೂರಣ ಮಾಡಿಸುವ ಸಲುವಾಗಿ 10 ಕೋಟಿ ರೂಪಾಯಿ ಅನುದಾನ ನೀಡಿರುವುದು, ಅಂತರ್ಜಲ ಪಾತಾಳಕ್ಕೆ ಕುಸಿದಿರುವ ಕೋಲಾರ ಜಿಲ್ಲೆಗೂ ಇದರಿಂದ ಅನುಕೂಲವಾಗಬಹುದಾಗಿದೆ.

ಕೆ.ಸಿ. ವ್ಯಾಲಿ ಯೋಜನೆಯಡಿ ಮೂರನೇ ಬಾರಿಗೆ ಸಂಸ್ಕರಣೆಗೆ ಬೇಡಿಕೆ ಇಟ್ಟಿದ್ದರೆ ಸರ್ಕಾರ ವರ್ತೂರು , ಬೆಳ್ಳಂದೂರು ಕೆರೆಗಳ ನೀರಿನ ಗುಣಮಟ್ಟ ತಪಾಸಣೆಗೆ ನಿರಂತರ ಪರಿವೇಷ್ಠಕ ಜಲಗುಣಮಟ್ಟ ಮಾಪನ ಕೇಂದ್ರವನ್ನು 9 ಕೋಟಿ ರೂ.ಗಳಲ್ಲಿ ಅಳವಡಿಸುತ್ತಿರುವುದು ಪರೋಕ್ಷವಾಗಿ ಕೋಲಾರ ಜಿಲ್ಲೆಯ ಕೆ.ಸಿ. ವ್ಯಾಲಿ ಯೋಜನೆಯಡಿ ಗುಣಮಟ್ಟದ ನೀರನ್ನು ಮಾತ್ರವೇ ಕೋಲಾರದ ಕೆರೆಗಳಿಗೆ ಹರಿಸಲು ಸಹಕಾರಿಯಾಗ ಬಹುದು ಎನ್ನಲಾಗುತ್ತಿದೆ.

Advertisement

ಪ್ರತಿ ಜಿಲ್ಲೆಗೂ ಇ ಆಡಳಿತ ತರಬೇತಿ ಕೇಂದ್ರ ಮಂಜೂರು ಮಾಡಿರುವುದರಿಂದ ಕೋಲಾರ ಜಿಲ್ಲೆಗೂ ಇದರ ಪಾಲು ಸಿಗಲಿದೆ. ಈಗಾಗಲೇ ಆರಂಭವಾಗಿರುವ ಎತ್ತಿನಹೊಳೆ ಯೋಜನೆಯಡಿ ಶೀಘ್ರ ಕೋಲಾರಕ್ಕೆ ನೀರು ಹರಿಸಲಾಗುವುದು ಎಂಬ ವಾಕ್ಯವನ್ನು ಹಿಂದಿನ ಬಜೆಟ್‌ಗಳಂತೆಯೇ ಪುನರಾವರ್ತಿಸಲಾಗಿದೆ.

ಪ್ರತ್ಯಕ್ಷವಾಗಿ ಸಿಕ್ಕಿದ್ದೇನು?: 
* ಸಮ್ಮಿಶ್ರ ಸರ್ಕಾರದ 2ನೇ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಟೊಮೆಟೋ ಸಂಸ್ಕರಣಾ ಘಟಕ ಆರಂಭಿಸಲು 20 ಕೋಟಿ ರೂ.ಗಳನ್ನು ಇಡಲಾಗಿದೆ.

* ಕೆ.ಸಿ. ವ್ಯಾಲಿ ಯೋಜನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ಆರಂಭವಾಗುತ್ತಿರುವ ಕೈಗಾರಿಕೆಗಳಿಗೆ 40 ಎಂಎಲ್‌ಡಿ ನೀರು ಹರಿಸಲು 40 ಕೋಟಿ ರೂ. ಮೀಸಲಿಡಲಾಗಿದೆ.

* ಕೋಲಾರ ಸೇರಿದಂತೆ ಹತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚುವ ಸಲುವಾಗಿ ಸ್ತನ ರೇಖನ ವ್ಯವಸ್ಥೆ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಶಿಲ್ಪಗ್ರಾಮ ಶಿವಾರಪಟ್ಟಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಮಂಜೂರು ಮಾಡಲಾಗುತ್ತಿದೆ. ಕೋಲಾರ ಜಿಲ್ಲೆ ಸೇರಿ 10 ಜಿಲ್ಲೆಗಳಲ್ಲಿ ಬಾಲಕಿಯರ ಕ್ರೀಡಾ ಹಾಸ್ಟೆಲ್‌ ತೆರೆಯಲು 15 ಕೋಟಿ ರೂ., ಮೀಸಲಿಡಲಾಗಿದೆ.

* ರಾಯಚೂರು, ವಿಜಯಪುರ, ಮಂಡ್ಯ ಜೊತೆಗೆ ಕೋಲಾರ ಜಿಲ್ಲೆಗೆ 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇವಿಷ್ಟು ಕೋಲಾರ ಜಿಲ್ಲೆಗೆ ನೇರವಾಗಿ ಸಿಕ್ಕ ಕೊಡುಗೆಗಳಾಗಿವೆ.

ಪರೋಕ್ಷವಾಗಿ ಸಿಕ್ಕಿದ್ದೇನು?
* ಕೋಲಾರ ಜಿಲ್ಲೆಯಲ್ಲಿ ಹಾಲಿನ ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಜೆಟ್‌ನಲ್ಲಿ ಪ್ರತಿ ಲೀಟರ್‌ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡಿರುವ ಫ‌ಲ ಸಿಗಲಿದೆ. ಹಾಗೆಯೇ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2502 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಇದರ ಪ್ರಯೋಜನವು ಜಿಲ್ಲೆಗೆ ಸಿಗಲಿದೆ.

* ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು 145 ಕೋಟಿ ರೂ., ನಿಗದಿಪಡಿಸಿರುವುದರಿಂದ ಈಗಾಗಲೇ ಕೋಲಾರ ಜಿಲ್ಲೆಯ ರೈತರು ಇಸ್ರೇಲ್‌ ಪದ್ಧತಿ ಅಳವಡಿಸಿಕೊಳ್ಳುತ್ತಿರುವುದರಿಂದ ಉಪಯೋಗವಾಗುವ ಸಾಧ್ಯತೆಗಳಿವೆ.

* ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳಲ್ಲಿ ರೈತರ ಕಣಜ ಯೋಜನೆಗೆ 510 ಕೋಟಿ ರೂ., ಅನುದಾನ ಮೀಸಲಿಟ್ಟಿದ್ದು, ಕೋಲಾರ ಜಿಲ್ಲೆಯ ಮಾರುಕಟ್ಟೆಗಳಿಗೂ ರೈತ ಕಣಜಗಳು ಪ್ರಾಪ್ತಿಯಾಗಲಿವೆ.

* ಈರುಳ್ಳಿ, ಆಲೂಗಡ್ಡೆ ಮತ್ತು ಟೊಮೆಟೋ ಬೆಳೆಗಳಿಗೆ ಧಾರಣೆ ಕುಸಿದಾಗ ಬೆಂಬಲ ಬೆಲೆ ನೀಡುವ ಸಲುವಾಗಿ ಬೆಲೆ ಕೊರತೆ ಪಾವತಿ ಯೋಜನೆಗೆ 50 ಕೋಟಿ ರೂಪಾಯಿಗಳು ನಿಗದಿಪಡಿಸಿದ್ದು, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಆಲೂಗಡ್ಡೆ, ಟೊಮೆಟೋ ಬೆಳೆಗಾರರಿಗೆ ಇದು ಅನುಕೂಲವಾಗಲಿದೆ.

* ಹಾಲು ಸಂಘಗಳಿಗೆ ಸ್ವಯಂ ಚಾಲಿತ ಹಾಲು ಶೇಖರಣೆ ಯಂತ್ರ ಖರೀದಿಗೆ 5 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಇದರ ಪ್ರಯೋಜನ ಕೋಲಾರ ಜಿಲ್ಲೆಯ ಹಾಲು ಸಂಘಗಳಿಗೆ ದಕ್ಕಲಿದೆ.

* ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next