Advertisement
2015ರ ಆಗಸ್ಟ್ 21ರಂದು ಕೋಲಾರದ ಮಾಲೂರು ಹಳ್ಳಿಗಳನ್ನು ಸುತ್ತಾಡುತ್ತಿದ್ದೆ. ಅಲ್ಲಿನ ಡೊಡ್ಡಕಲ್ಲಹಳ್ಳಿಯಲ್ಲಿ ಸಾಲು ಹಚ್ಚಿ ಜನ ನಿಂತಿದ್ದರು. ಟ್ಯಾಂಕರ್ ನೀರು ಬರುತ್ತದೆಂದು ಅವರೆಲ್ಲ ಕಾಯುತ್ತಿದ್ದರು. 80-85 ವರ್ಷದ ಹಿರಿಯರು, ಯುವಕರು, ಯುವತಿಯರೆಲ್ಲ ಬಿಂದಿಗೆ ನೀರಿನ ನಿರೀಕ್ಷೆಯಲ್ಲಿದ್ದರು. ಒಂದು ಕುಟುಂಬಕ್ಕೆ ನಾಲ್ಕು ಬಿಂದಿಗೆ ನೀರು ಸಿಗುತ್ತದೆಂದೂ, ಇದರಲ್ಲಿ ದನಕರು, ಮನೆ ಬಳಕೆಗೆ ಮಿತಿಯಲ್ಲಿ ಬಳಸಬೇಕೆಂದು ವಿವರಿಸಿದರು. ಕೆರೆಗಳಲ್ಲಿ ಎಲ್ಲಿಯೂ ನೀರು ನೋಡಲು ಸಿಗದ ಪ್ರದೇಶವದು. ಸಾಲಿನಲ್ಲಿ ನಿಂತವರ ಮುಖ ಚಹರೆ ಓದುತ್ತಿದ್ದೆ, ಥಟ್ಟನೆ ಗಮನ ಸೆಳೆದವಳು ನಾಲ್ಕೈದು ವರ್ಷದ ಪುಟ್ಟ ಬಾಲಕಿ. ನನ್ನ ಕೆಮರಾ ನೋಡಿ ಕಂಗಾಲಾಗಿದ್ದಳು. ಮಾತನಾಡಿಸಲು ಹೋದರೆ ಬಿಂದಿಗೆ ಎತ್ತಿ ಮುಖ ಅಡಗಿಸಿದಳು. ಅವತ್ತು ನೀರಿನ ಸಾಲಿನಲ್ಲಿ ಅಮ್ಮನ ಬದಲು ಪುಟಾಣಿ ನಿಂತಿದ್ದಳು. ಕೋಲಾರದಲ್ಲಿ 35-40 ವರ್ಷಗಳ ಹಿಂದೆ ತೆರೆದ ಬಾವಿಗಳಿದ್ದವು. ಹೊಲದ ಕೆರೆಗಳಲ್ಲಿ ನೀರಿತ್ತು. ಹರಿಯುವ ನೀರಲ್ಲಿ ಸ್ನಾನ ಮಾಡಿದ ನೆನಪುಗಳು ಹಲವರಿಗಿದೆ. ಈಗ ಕೊಳವೆ ಬಾವಿಯ ಆಳ 1500-2000 ಅಡಿಗೂ ದಾಟಿದೆ, ಆದರೂ ನೀರಿಲ್ಲ. ಹಲವು ಹಳ್ಳಿಗಳು ಕುಡಿಯುವ ನೀರಿಗೆ ಟ್ಯಾಂಕರ್ ನಂಬಿವೆ.
ಭಾಗಗಳಿಂದ ಆಯ್ದ 24 ಕಾರ್ಯಕರ್ತರು ಭಾಗವಹಿಸಿದ್ದರು. ಚರ್ಚೆಗಳು ಸಣ್ಣ ಗುಂಪಿನಲ್ಲಿ ನಡೆದರೆ ಫಲಿತಾಂಶ ಪರಿಣಾಮಕಾರಿಯಾಗುತ್ತದೆ. ರಾಜ್ಯದ ನೀರಿನ ಸ್ಥಿತಿಗತಿ ಅರಿಯುವುದು ಮುಖ್ಯ ಕಾರ್ಯವಾದ್ದರಿಂದ ಹೆಚ್ಚಿನ ಜನರನ್ನು ಸೇರಿಸುವ ಉದ್ದೇಶವೂ ನಮಗಿರಲಿಲ್ಲ. ಜಲಮಿತ್ರ ರಾಧಾಕೃಷ್ಣ ಭಡ್ತಿ ಹಾಗೂ ನಾನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವರನ್ನು ಸಭೆಗೆ ಬರುವಂತೆ ವಿನಂತಿಸಿದ್ದೆವು. ಸಚಿವರೂ ಭಾಗವಹಿಸಿದ್ದರಿಂದ ಚರ್ಚೆಯ ವಿಸ್ತಾರ ಹೆಚ್ಚಿತು. ವಿವಿಧ ಪ್ರದೇಶದ ನೀರಿನ ಸಂಕಷ್ಟಕ್ಕೆ ಸ್ಥಳೀಯ ಪರಿಹಾರಗಳ ಬಗ್ಗೆ ಮಾತುಕತೆ ನಡೆಯಿತು. ರಾಜ್ಯ ಜಲಕ್ಷಾಮದಿಂದ ಬಳಲುತ್ತಿರುವಾಗ ಸರಕಾರ ಮಾತ್ರದಿಂದ ಎಲ್ಲ ಕೆಲಸ ಸಾಧ್ಯವಿಲ್ಲ. ಶಾಸಕರು, ಸಚಿವರು, ಉದ್ಯಮಿಗಳು, ಸಿನಿಮಾ ನಟರು, ಕೃಷಿಕರು, ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರೂ ಜಲಜಾಗೃತಿ, ಸಂರಕ್ಷಣೆಯ ಕಾರ್ಯಕ್ಕೆ ಮುಂದಾಗಬೇಕೆಂದು ನಾವು ಆಗ್ರಹಿಸಿದೆವು. ಹಳ್ಳಿಗಾಡು ಸುತ್ತಾಡಿ ಕೆರೆ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವ ಕೆಲಸ ನಡೆಯಿತು. ನೀರಿನ ಸಂಕಷ್ಟ ಅನುಭವಿಸಿದವರಿಗೆ ಸರಿಯಾದ ಸಮಯಕ್ಕೆ ಮಾರ್ಗದರ್ಶನ ಸಿಕ್ಕರೆ ಒಂದಿಷ್ಟು ರಚನಾತ್ಮಕ ಕೆಲಸ ನಡೆಯುತ್ತದೆ. ಸಚಿವರು, ಶಾಸಕರು, ಕೃಷಿಕರು ಕೆರೆ ಹೂಳು ತೆಗೆಸಿದರು. ಹೊಸ ಕೆರೆ ನಿರ್ಮಿಸುವ ಕಾರ್ಯಕ್ಕೆ ಮುಂದಾದರು. ನೀರಿನ ಸಮಸ್ಯೆಗಳ ಬಗ್ಗೆ ಬೊಬ್ಬೆ ಹೊಡೆಯುತ್ತ ಕಾಲ ಕಳೆಯುವುದಕ್ಕಿಂತ ರಚನಾತ್ಮಕ ಕೆಲಸ ಖುಷಿ ನೀಡಿತು.
Related Articles
ಯಲಬುರ್ಗಾದ ತಲ್ಲೂರು ಕೆರೆಯ ಹೂಳು ತೆಗೆಯುವ ಕೆಲಸ ಆರಂಭಿಸಿದ್ದಾರೆ. ನೀರಿನ ಮಾತುಕತೆಗೆ ಮುಂಚೆ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆಯಿತು. ಸುಮಾರು 96 ಎಕರೆ ಶಾಲ ಕೆರೆುಂದ 4 ಲಕ್ಷ ಕ್ಯುಬಿಕ್ ಮೀಟರ್ ಮಣ್ಣು ತೆಗೆಯುವ ಕಾರ್ಯವದು. ನಟ ಯಶ್‌ರ ಯಶೋಮಾರ್ಗ ಹಾಗೂ ಸುತ್ತಲಿನ ಗ್ರಾಮಸ್ಥರ ಸಹಯೋಗದೊಂದಿಗೆ ಅಂದಾಜು ನಾಲ್ಕು ಕೋಟಿ ರೂಪಾಯಿಯ ಮಹತ್ವದ ಕೆಲಸ ನಡೆಯುತ್ತಿದೆ. ಪ್ರಮುಖ ನಟರೊಬ್ಬರು ಕೆರೆ ಕಾಯಕಕ್ಕೆ ಜೊತೆಯಾಗಿದ್ದು ಖುಷಿಯ ಸಂಗತಿ. ಕೃಷಿ ಸಾಧಕ ರಮೇಶ ಬಲೂಟಗಿ ತಮ್ಮ ಕೆಲಸ ಬದಿಗಿಟ್ಟು ಚೆಂದದ ಕೆರೆ ರೂಪಿಸಲು ಕಾರ್ಯಕರ್ತರ ಜೊತೆ ಶ್ರಮಿಸುತ್ತಿದ್ದಾರೆ.
Advertisement
ತಲ್ಲೂರು ಕೆರೆಯಂಚಿನಲ್ಲಿ ಪುಟ್ಟ ನೀರ ಕುಟೀರವಿದೆ. ಕೆರೆಯ ಹೂಳು ತೆಗೆಯುವುದರ ಜೊತೆಗೆ ಜಲಸಾಕ್ಷರತೆ ಮೂಲಕ ತಲೆಯ ಹೂಳು ತೆಗೆಯುವ ಕೆಲಸದು. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಕೃಷಿ ಬದುಕು, ಜಲ ಸಂರಕ್ಷಣೆಯ ಸಚಿತ್ರ ವಿವರಗಳಿವೆ. ರಾಜ್ಯದ ನೀರಿನ ಸ್ಥಿತಿಗತಿ ಬಿಂಬಿಸುವ ಮಾಹಿತಿ ಇದೆ. ರಾಜ ಮಹಾರಾಜರ ಕೋಟೆ ಕೆರೆಗಳ ಇತಿಹಾಸವಿದೆ. ಕುಟೀರ ಉದ್ಘಾಟಿಸಿದ ನಟಿ ರಾಧಿಕಾ ಹಾಗೂ ಯಶ್‌ರಿಗೆ ಜಲಜಾಗೃತಿಯ ವಿವರ ನೀಡುತ್ತಿರುವಾಗ ಕೋಲಾರದ ದೊಡ್ಡಕಲ್ಲಹಳ್ಳಿಯ ಪುಟ್ಟ ಬಾಲೆಯ ಚಿತ್ರ ತೋರಿಸಿದೆ. ರಾಜ್ಯದ ಜಲಕಾರ್ಯಕರ್ತರನ್ನು ಒಂದೆಡೆ ಸೇರಿಸಲು ಪ್ರೇರಣೆ ನೀಡಿದ ಎರಡು ವರ್ಷದ ಹಿಂದಿನ ಘಟನೆ ವಿವರಿಸಿದೆ. ಇಂದಿನ ನೀರಿನ ಕಾಯಕಕ್ಕೆ ಇವಳೇ ಹಿರೋಇನ್ ಎಂದು ಪರಿಚಯಿಸಿದೆ. ಮಗುವಿನ ಚಿತ್ರ ನೋಡಿದ ಎಲ್ಲರಿಗೂ ನೀರಿನ ಭವಿಷ್ಯದ ಚಿಂತೆ ಶುರುವಾಗುತ್ತದೆ. ನಾಳಿನ ತಲೆಮಾರಿಗಾಗಿ ನಾವು ಉಳಿಸುವ ಕಾಡು, ನೀರೆಷ್ಟು ಎಂಬ ಆತಂಕ ಸಹಜವಾಗಿ ಕಾಡುತ್ತದೆ.
ದೊಡ್ಡಕಲ್ಲಹಳ್ಳಿಯ ಬಾಲಕಿ ಯಾರೆಂದು ಇಂದಿಗೂ ಹೆಸರು ಗೊತ್ತಿಲ್ಲ. ಆದರೆ ಇವಳಂಥವರೇ ಸಾವಿರಾರು ಜನ ರಾಜ್ಯದ ಪ್ರವಾಸದಲ್ಲಿ ನನಗೆ ಸಿಗುತ್ತಿರುತ್ತಾರೆ. ಶಾಲೆಯ ಸಮವಸ್ತ್ರಧರಿಸಿ ಇಡೀ ದಿನ ಬಿಸಿಲಲ್ಲಿ ನೀರಿಗಾಗಿ ಕಾಯುವ ಮಕ್ಕಳು ಹಳ್ಳಿಹಳ್ಳಿಗಳಲ್ಲಿದ್ದಾರೆ. ಸರ್ವರಿಗೂ ಶಿಕ್ಷಣವೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಮಕ್ಕಳು ಏಕೆ ಶಾಲೆಗೆ ಹೋಗುತ್ತಿಲ್ಲ? ಹುಡುಕಲು ಹೋದರೆ ನೀರಿನ ಸಮಸ್ಯೆ ಶಾಲೆ ಬಿಡಿಸಿದ್ದು ಕಾಣಿಸುತ್ತದೆ. ಸರಕಾರ ಆರಂಭಿಸಿದ ಗೋಶಾಲೆಗಳಿಗೆ ಹೋಗಿ ನೋಡಿದರೆ ನೂರಾರು ಮಕ್ಕಳು ಸಿಗುತ್ತಾರೆ. ನೀರಿನ ಸಮಸ್ಯೆಯಿಂದ ಗುಳೇ ಹೋಗುವ ಕುಟುಂಬಗಳು ಕೊಳಗೇರಿಗಳಲ್ಲಿ ಮಕ್ಕಳ ಜೊತೆ ಬದುಕುವುದನ್ನು ಬೆಂಗಳೂರಿನಲ್ಲೇ ನಿಂತು ನೋಡಬಹುದು. ರಾಜ್ಯದ ಬಡತನ, ಅನಾರೋಗ್ಯ ಸಮಸ್ಯೆಗಳಿಗೆ ನೀರು ಮುಖ್ಯಕಾರಣವಾಗುತ್ತಿದೆ. ಆದರೆ ನಾವು ಓದಿದ ಪದವಿ ಪ್ರಮಾಣ ಪತ್ರಗಳಲ್ಲಿ ಈ ನೀರಿನ ಸತ್ಯಗಳು ಕಾಣಿಸುತ್ತಿಲ್ಲ ಏಕೆ?
ಜೀವಜಲದ ಹುಡುಕಾಟಕ್ಕಾಗಿ ಮಕ್ಕಳನ್ನು ಶಾಲೆ ಬಿಡಿಸುವ ಸ್ಥಿತಿ ಬಂದಿರುವುದು ಶೋಚನೀಯ. ನಗರದ ನೀರಿನ ಸಮಸ್ಯೆ ಬಹುಬೇಗ ಸುದ್ದಿಯಾಗುತ್ತದೆ. ಹಳ್ಳಿಗಾಡಿನ ಕುಟುಂಬಗಳ ಪರಿಸ್ಥಿತಿಯನ್ನು ಕಣ್ಣೆತ್ತಿ ನೋಡುವವರೂ ಗತಿ ಇಲ್ಲದ ಸ್ಥಿತಿ ಇದೆ. ಜಲ ಸಂರಕ್ಷಣೆ, ಮಳೆ ನೀರು ಹಿಡಿಯುವುದರಿಂದ ನೀರ ನೆಮ್ಮದಿ ಸಾಧಿಸಬಹುದೆಂದು ಹೇಳುತ್ತಿದ್ದ ನಾವು ಈಗ ಸಾಕ್ಷರತೆ, ಆರೋಗ್ಯಕ್ಕಾಗಿ ಜಲ ಸಂರಕ್ಷಣೆ ಎನ್ನುವಂಥಾಗಿದೆ. ನೀರಿನ ಕಷ್ಟ ನೋಡುತ್ತ ನಾಡು ಸುತ್ತಾಡಿ ನಮ್ಮ ನಗರದ ಕೆಲವು ಬಡಾವಣೆಗಳಿಗೆ ಹೋಗಿ ಅಲ್ಲಿನ ಕೈತೋಟ, ಕಾರು ತೊಳೆಯುವುದಕ್ಕೆ ನೀರು ಬಳಸುವುದು ನೋಡಿದರೆ ಜಲಕ್ಷಾಮದ ಕನಿಷ್ಟ ಅರಿವೂ ಇಲ್ಲಿ ಕಾಣಿಸುತ್ತಿಲ್ಲ. ಭೂಮಿಗೆ ಸಂಬಂಧವಿಲ್ಲದ ಸ್ವರ್ಗದ ಸೌಧವೇ ಇದು? ನಗರ ಕಟ್ಟುತ್ತ ನದಿ ನುಂಗಿದ ಅಭಿವೃದ್ಧಿ ಹಳ್ಳಿಯ ಕೃಷಿಯನ್ನು ನುಂಗಿ ಕಟ್ಟಕಡೆಗೆ ತಲೆಮಾರಿನ ಮಕ್ಕಳ ಭವಿಷ್ಯ ನಾಶಮಾಡುತ್ತಿದೆ.
ನದಿಯ ನೀರಿನ ಜೊತೆ ಆಟವಾಡುತ್ತ ಬೆಳೆದ ಹಳ್ಳಿಗಳು ಈಗ ನಗರ ಕೊಳಚೆ ನೀರನ್ನು ಕುಡಿಯುವ ದುಃಸ್ಥಿತಿಗೆ ತಲುಪಿವೆ. ಸಮಸ್ಯೆಗಳಿಗೆ ಕಾರಣಗಳು ನೂರಾರು, ಆದರೆ ಪರಿಹಾರದ ದಾರಿ ಹಿಡಿದು ಕೆರೆ ಸಂರಕ್ಷಣೆ, ಛಾವಣಿ ನೀರಿನ ಕೊಯ್ಲು, ಅರಣ್ಯಾಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದರೆ ಮಾತ್ರ ನಾಡು ಉಳಿಯಬಹುದು. ಮುಂದಿನ ವರ್ಷವೂ ಮಳೆ ಸಾಕಷ್ಟು ಸುರಿಯುವ ಖಾತ್ರಿ ಇಲ್ಲ, ಹನಿ ಹನಿ ಹಿಡಿಯುವುದೇ ಬದುಕುವ ಉಪಾಯವಾಗಿದೆ.
– ಶಿವಾನಂದ ಕಳವೆ