Advertisement
ಕೋಲಾರ ಜಿಲ್ಲೆಯ ಭಾಗವಾಗಿದ್ದ ಜಿಲ್ಲೆಯನ್ನು ಕೋಚಿಮುಲ್‌ನಿಂದ ಬೇರ್ಪಡಿಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ 2022 ಜೂ.22 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಎಂದು ಪ್ರತ್ಯೇಕವಾಗಿ ರಾಜ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದರು.
Related Articles
Advertisement
ಆದೇಶ ವಾಪಸ್‌ಗೆ ಕಾರಣ ಏನು?: ಜಿಲ್ಲೆಯಲ್ಲಿ ಚಿಮುಲ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿದರೆ ಚಿಮುಲ್ ಡೇರಿಗೆ ಹೆಚ್ಚುವರಿಯಾಗಿ ಬೇಕಾದ 10 ಎಕರೆ ಜಾಗದ ಕೊರತೆ ಇದೆ. ಜೊತೆಗೆ ಡೇರಿ ಮೂಲ ಸೌಕರ್ಯಕ್ಕೆ ಬೇಕಾದ 150 ರಿಂದ 200 ಕೋಟಿ ರೂ. ವಿಶೇಷ ಅನುದಾನ ಒದಗಿಸಲು ಸದ್ಯ ಸಾಧ್ಯವಾಗುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಹಾಲಿನ ಪ್ರಮಾಣ ಕಡಿಮೆ ಇರುವ ಕಾರಣದಿಂದ ಚಿಮುಲ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದು ಬೇಡ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕರು ಹೊರಡಿಸಿದ್ದ ವಿಭಜನೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ಕೋಚಿಮುಲ್ ನಿರ್ದೇಶಕರೊಬ್ಬರು ಉದಯವಾಣಿಗೆ ತಿಳಿಸಿದರು.
ವಿಭಜನೆ ಹೆಸರಲ್ಲಿ ತಾರಕಕ್ಕೇರಿತ್ತು ನಾಯಕರ ಕೆಸರೆರಚಾಟ: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿನ ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ನಾಯಕರ ನಡುವೆ ಕೋಚಿಮುಲ್ ವಿಭಜನೆ ವಿಚಾರ ಸಾಕಷ್ಟು ಸದ್ದು ಮಾಡಿ ತೀವ್ರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ವಿರೋಧದ ನಡುವೆಯೂ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಹಠಹಿಡಿದು ಜಿಲ್ಲೆಗೆ ಚಿಮುಲ್ ಸ್ಥಾಪಿಸಿ ಸರ್ಕಾರದಿಂದ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ಮತ್ತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕೋಚಿಮುಲ್ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದ್ದ ಬಗ್ಗೆ ಪರಸ್ಪರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾತಿನ ಸಮರ ತೀವ್ರವಾಗಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದು ಚಿಮುಲ್ ಪ್ರತ್ಯೇಕವನ್ನು ರದ್ದುಗೊಳಿಸಿರುವುದು ಮುಂದಿನ ದಿನಗಳಲ್ಲಿ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ನಾಯಕರ ಜಟಾಪಟಿಗೆ ಕಾರಣವಾಗಲಿದೆ.
ಜಿಲ್ಲೆಯ ನಿರ್ದೇಶಕರಿಗೆ ಅಧಿಕಾರ ಇರಲಿಲ್ಲ : ಮತ್ತೂಂದು ವಿಚಾರ ಅಂದರೆ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೆ ಚಿಮುಲ್ ಪ್ರತ್ಯೇಕವಾಗಿ ಮಾಡಿದರೂ ಕೂಡ ಜಿಲ್ಲೆಯಿಂದ ಕೋಚಿಮುಲ್‌ಗೆ ಚುನಾಯಿತರಾಗಿದ್ದ ಜಿಲ್ಲೆಯ ನಿರ್ದೇಶಕರಿಗೆ ಚಿಮುಲ್ ಆಡಳಿತದಲ್ಲಿ ಯಾವುದೇ ಪ್ರಾತಿನಿಧ್ಯ ಕೊಡದೇ ಕೋಚಿಮುಲ್‌ನಲ್ಲಿ ಮುಂದವರೆಸಿತ್ತು. ಹೀಗಾಗಿ ಸರ್ಕಾರದ ಧೋರಣೆ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ನಿರ್ದೇಶಕರು ಸಿಟ್ಟಿಗೆದ್ದು ವಿಭಜನೆ ಆದೇಶದ ವಿರುದ್ಧ ಹೈಕೋರ್ಟ್ ಮೇಟ್ಟಿಲೇರಿದ್ದರು. ಕೊನೆಗೂ ಸರ್ಕಾರ ತನ್ನ ಆದೇಶವನ್ನು ರದ್ದುಗೊಳಿಸುವ ಮೂಲಕ ಜಿಲ್ಲೆಗೆ ಪ್ರತ್ಯೇಕಗೊಂಡು ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಚಿಮುಲ್ ತನ್ನ ಅಸ್ತಿತ್ವ ಕಳೆದುಕೊಂಡಿದೆ.
ಹಿಂದಿನ ಬಿಜೆಪಿ ಸರ್ಕಾರ ಉಸ್ತುವಾರಿ ಸಚಿವರಾಗಿದ್ದವರು ರಾಜಕೀಯ ದ್ವೇಷ ದಿಂದ ಜನರಿಂದ ಆಯ್ಕೆಗೊಂಡ ನಮ್ಮ ಅಧಿಕಾರ ಮೊಟಕೊಗೊಳಿಸಲು ಚಿಮುಲ್‌ನ್ನು ಪ್ರತ್ಯೇಕಗೊಳಿಸಿದ್ದರು. ಆದರೆ ಸರ್ಕಾರ ವಿಭಜನೆ ಆದೇಶವನ್ನು ಹಿಂಪ ಡೆದಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಜಯ ಸಿಕ್ಕಿದೆ. -ಊಲವಾಡಿ ಅಶ್ವತ್ಥನಾರಾಯಣಬಾಬು, ಕೋಚಿಮುಲ್ ನಿರ್ದೇಶಕರು
ಕೋಚಿಮುಲ್ ಒಕ್ಕೂಟ ಇಂದಲ್ಲ ನಾಳೆ ವಿಭಜನೆ ಆಗಲೇಬೇಕು. ಆದರೆ ಅದಕ್ಕಿಂತ ಮೊದಲು ಮೂಲ ಸೌಕರ್ಯ ಕಲ್ಪಿಸಬೇಕು. ಕೋಲಾರ ದಲ್ಲಿ ಸಾಕಷ್ಟು ಮೂಲ ಸೌಕರ್ಯ ಇದೆ. ಆಡಳಿತ ಮಂಡಳಿಗೋಸ್ಕರ ಪ್ರತ್ಯೇಕಗೊಳಿಸಿದರೆ ಒಳ್ಳೆ ಯದು. ಕೆಲವರು ಅಧ್ಯಕ್ಷರಾಗಬೇಕೆಂಬ ಆತುರದಿಂದ ಹಿಂದಿನ ಸರ್ಕಾರ ಪ್ರತ್ಯೇಕಗೊಳಿಸಿತು. – ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕರು, ಚಿಕ್ಕಬಳ್ಳಾಪುರ
ಹೈಕೋರ್ಟ್‌ನಲ್ಲಿ ವಾದ, ಪ್ರತಿವಾದ ಆಲಿಸಿ ನ್ಯಾಯಾಧೀಶರು ತೀರ್ಪು ಕೊಡುವ ಸಂದರ್ಭದಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಚಿಮುಲ್ ಪ್ರತ್ಯೇಕಗೊಳಿಸಿ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸದ್ಯದಲೇ ಸುದ್ದಿಗೋಷ್ಠಿ ನಡೆಸಿ ವಿವರ ಕೊಡುತ್ತೇವೆ. – ಕೆ.ವಿ.ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷರು
-ಕಾಗತಿ ನಾಗರಾಜಪ್ಪ