Advertisement

ಮೈತ್ರಿ ಸರ್ಕಾರದಲ್ಲಿ ಆಗಿದ್ದ ನಾಮನಿರ್ದೇಶನಕ್ಕೆ ಕೊಕ್‌

10:21 PM Sep 06, 2019 | Team Udayavani |

ಚಿಕ್ಕಬಳ್ಳಾಪುರ: ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿತಗೊಂಡಿದ್ದ ವ್ಯಕ್ತಿಗಳಿಗೆ ಬಿಜೆಪಿ ಸರ್ಕಾರ ಕೊಕ್‌ ಕೊಡುತ್ತಿದ್ದು, ಜಿಲ್ಲೆಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಾಗಿರುವ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರನ್ನು ರಾಜ್ಯ ವಕ್ಫ್ ಮಂಡಳಿ ದಿಢೀರನೇ ಬದಲಾಯಿಸಿದ್ದು, ಹೊಸ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದೆ.

Advertisement

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿ ರಫೀವುಲ್ಲಾ ನೇಮಗೊಂಡಿದ್ದರು. ಮೈತ್ರಿ ಸರ್ಕಾರದಲ್ಲೂ ಅವರೇ ಜಿಲ್ಲಾ ವಕ್ಫ್ ಮಂಡಳಿ ಜಿಲ್ಲಾ ಅಧ್ಯಕ್ಷರಾಗಿ ಮುಂದುವರಿದಿದ್ದರು. ಆದರೆ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಬಿ.ಎಸ್‌.ಯೂಡಿಯರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಬಿ.ಎಸ್‌.ರಫೀವುಲ್ಲಾಗೆ ಕೊಕ್‌: ಹಲವು ವರ್ಷಗಳಿಂದ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಎಸ್‌.ರಫೀವುಲ್ಲಾ, ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿಯೇ ಗುರುತಿಸಿಕೊಂಡಿದ್ದು, ಶಾಸಕ ಸ್ಥಾನಕ್ಕೆ ಡಾ.ಕೆ.ಸುಧಾಕರ್‌ ರಾಜೀನಾಮೆ ನೀಡಿದ ಬಳಿಕ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಬಳಿಕ ಡಾ.ಕೆ.ಸುಧಾಕರ್‌ ಜೊತೆ ಗುರುತಿಸಿಕೊಂಡಿರಲಿಲ್ಲ. ಹೀಗಾಗಿ ಡಾ.ಕೆ.ಸುಧಾಕರ್‌, ಬಿ.ಎಸ್‌.ರಫೀವುಲ್ಲಾರನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೊಕ್‌ ಕೊಡಿಸುವಲ್ಲಿ ಯಶಸ್ವಿಯಾಗಿರುವುದು ಸದ್ಯ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಅಲ್ಲದೇ ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ವಿವಿಧ ನಿಗಮ, ಮಂಡಳಿಗಳ ನಿರ್ದೇಶಕರಾಗಿ ಆಯ್ಕೆಗೊಂಡಿರುವುದನ್ನು ಕೂಡ ಹುದ್ದೆಯಿಂದ ತೆರವುಗೊಳಿಸಿ ಹೊಸ ನಿರ್ದೇಶಕರ ನೇಮಕಕ್ಕೆ ಡಾ.ಕೆ.ಸುಧಾಕರ್‌ ಮುಂದಾಗಿದ್ದು, ಇದರ ಮೊದಲ ಹಂತದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ಮೀಸಲಾಗಿರುವ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರನ್ನು ಬದಲಾಯಿಸುವ ಮೂಲಕ ಕ್ಷೇತ್ರದ ಕಾಂಗ್ರೆಸ್‌ ನಾಯಕರಿಗೆ, ಕಾರ್ಯಕರ್ತರಿಗೆ ಡಾ.ಕೆ.ಸುಧಾಕರ್‌ ಶಾಕ್‌ ಕೊಟ್ಟಿದ್ದಾರೆ.

ಇಂತಿಯಾಜ್‌ ನೇಮಕ: ಸದ್ಯ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಬಿ.ಎಸ್‌.ರಫೀವುಲ್ಲಾರನ್ನು ಹುದ್ದೆಯಿಂದ ತೆರವುಗೊಳಿಸಿದ ಬಳಿಕ ಅವರ ಸ್ಥಾನಕ್ಕೆ ಡಾ.ಕೆ.ಸುಧಾಕರ್‌ ತಮ್ಮ ಆಪ್ತರಾದ ಚಿಕ್ಕಬಳ್ಳಾಪುರದ ತಮ್ಮ ಅಪ್ತ ಇಂತಿಯಾಜ್‌ರನ್ನು ನೇಮಿಸುವ ಮೂಲಕ ತಮ್ಮ ಆಪ್ತರಿಗೆ ಬಿಜೆಪಿ ಸರ್ಕಾರದಲ್ಲಿ ವಿವಿಧ ಸ್ಥಾನಮಾನ ಕಲ್ಪಿಸುವ ಮೂಲಕ ಮುಂದಿನ ಉಪ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂತಿಯಾಜ್‌ರನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿ ನೇಮಿಸಿ ಕಳೆದ ಗುರುವಾರ ರಾಜ್ಯ ವಕ್ಫ್ ಮಂಡಳಿ ಮುಖ್ಯ ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

ಪ್ರಾಧಿಕಾರಕ್ಕೆ ಇಬ್ಬರ ನಡುವೆ ಪೈಪೋಟಿ: ಈ ನಡುವೆ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳುಕುಂಟೆ ಕೃಷ್ಣಮೂರ್ತಿರನ್ನು ನೇಮಕ ಮಾಡುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌, ಬಿಜೆಪಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇನ್ನೇನು ಮರಳಕುಂಟೆ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಆದೇಶ ಒಂದೆರೆಡು ದಿನದಲ್ಲಿ ಹೊರ ಬೀಳುವ ನಿರೀಕ್ಷೆ ಇತ್ತು. ಆದರೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೋಚಿಮುಲ್‌ ಚುನಾವಣೆಯಲ್ಲಿ ಸೋತ ಕೆ.ವಿ.ನಾಗರಾಜ್‌ ಕೂಡ ಪ್ರಬಲ ಆಕಾಂಕ್ಷಿ ಆಗಿರುವುದರಿಂದ ಸದ್ಯ ಪ್ರಾಧಿಕಾರದ ಅಧ್ಯಕ್ಷರ ನೇಮಕ ನೆನಗುದಿಗೆ ಬಿದ್ದಿದೆ.

ಕೆ.ವಿ.ನಾಗರಾಜ್‌ ಹಾಗೂ ಮರಳುಕುಂಟೆ ಕೃಷ್ಣಮೂರ್ತಿ ಇಬ್ಬರು ಹುದ್ದೆಯ ಮೇಲೆ ಕಣ್ಣಿಟ್ಟಿರುವುದರಿಂದ ಡಾ.ಕೆ.ಸುಧಾಕರ್‌ ಯಾರನ್ನು ಬಿಡದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರ ನಡುವೆ ಉಪ ಚುನಾವಣೆ ಬಳಿಕ ಪ್ರಾಧಿಕಾರಕ್ಕೆ ನೇಮಿಸಲು ಸುಧಾಕರ್‌ ಚಿಂತನೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ಉದಯವಾಣಿಗೆ ತಿಳಿಸಿವೆ. ಅದಕ್ಕೂ ಮೊದಲು ಯಾರನ್ನೇ ನೇಮಕ ಮಾಡಿದರೂ ಭಿನ್ನಮತ ಸ್ಫೋಟಗೊಳ್ಳುತ್ತದೆ ಎಂಬ ಕಾರಣಕ್ಕೆ ಸುಧಾಕರ್‌ ಸದ್ಯಕ್ಕೆ ತಟಸ್ಥವಾಗಿದ್ದಾರೆ ಎಂದು ಹೇಳಲಾಗಿದೆ.

ಹುದ್ದೆ ಪಡೆಯಲು ಪೈಪೋಟಿ: ಈಗಾಗಲೇ ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ತಾಲೂಕುಗಳಲ್ಲಿ ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ನಗರಸಭೆ, ಪುರಸಭೆ, ಟಿಎಪಿಸಿಎಂಎಸ್‌, ಎಪಿಎಂಸಿ ಮತ್ತಿತರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಗೊಂಡವರನ್ನು ತೆರವು ಮಾಡಿ ಹೊಸಬರ ನೇಮಕಾತಿಗೆ ಸರ್ಕಾರ ಹಾಗೂ ಕ್ಷೇತ್ರದ ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಹೊಸ ನಾಮ ನಿರ್ದೇಶನಗಳಲ್ಲಿ ಸ್ಥಾನ ಪಡೆಯಲು ಜಿಲ್ಲಾದ್ಯಂತ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಾಮನಿರ್ದೇಶನ ಪ್ರಕ್ರಿಯೆ ತುಸು ಚುರುಕು ಪಡೆದುಕೊಂಡಿದೆ.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next