Advertisement

ಎಂಟು ವರ್ಷ ಕಳೆದರೂ ಕೊಯಿಲ ಪಶು ವೈದ್ಯ ಕಾಲೇಜು ಸಿದ್ಧಗೊಂಡಿಲ್ಲ 

04:33 AM Jan 07, 2019 | |

ಮಹಾನಗರ: ಐದು ವರ್ಷಗಳಲ್ಲಿ ನಿರ್ಮಾಣವಾಗಬೇಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪಶು ವೈದ್ಯಕೀಯ ಕಾಲೇಜು ಎಂಟು ವರ್ಷಗಳಾದರೂ ವಿದ್ಯಾರ್ಜನೆಗೆ ಮುಕ್ತವಾಗಿಲ್ಲ. ಏಕೆಂದರೆ, ಕಾಲೇಜು ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲೇ ಇದ್ದು, ಶೇ. 50ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.

Advertisement

ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 2011ರಲ್ಲಿ ಕೊೖಲದಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆ ಘೋಷಣೆ ಮಾಡಿದ್ದರು. ಅಲ್ಲದೆ, ಈ ಯೋಜನೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಇಲಾಖಾಧಿಕಾರಿಗಳಿಗೆ ಗಡುವನ್ನೂ ವಿಧಿಸಲಾಗಿತ್ತು. ಆದರೆ, ಕಾಲೇಜು ಸ್ಥಾಪನೆ ಸಂಬಂಧ ಜಾಗ ಗುರುತಿಸುವಿಕೆ, ಟೆಂಡರ್‌ ಮತ್ತಿತರ ಪ್ರಕ್ರಿಯೆಗಳೆಲ್ಲ ಮುಗಿಯುವುದು ವಿಳಂಬವಾಗಿದೆ. ಇದರಿಂದಾಗಿ ಕಟ್ಟಡ ನಿರ್ಮಾಣ ಕಾರ್ಯವೂ ತಡವಾಗಿದೆ. ಎರಡು ವರ್ಷಗಳ ಹಿಂದೆಯಷ್ಟೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಕಾಮಗಾರಿ ಆರಂಭಗೊಂಡಿತ್ತು.

ಆದರೆ ಇದೀಗ ಪಶು ಸಂಗೋಪನ ಸಚಿವರು 2020ರ ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಇದರಿಂದಾಗಿ ಇನ್ನೆರಡು ವರ್ಷ ಈ ಕಾಲೇಜು ವಿದ್ಯಾರ್ಜನೆಗೆ ಮುಕ್ತವಾಗುವುದು ಅನುಮಾನ.

35 ಕೋಟಿ ರೂ. ಬಿಡುಗಡೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶು ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕೆಂಬ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕಾಲೇಜು ಆರಂಭಕ್ಕೆ ಉತ್ಸುಕತೆ ತೋರಲಾಗಿತ್ತು. ಒಟ್ಟು 110 ಕೋಟಿ ರೂ.ಗಳು ಈ ಕಾಲೇಜಿಗೆ ಮಂಜೂರಾಗಿದ್ದು, ಆದರೆ ಇಲ್ಲಿಯವರೆಗೆ ಬಿಡುಗಡೆಯಾಗಿದ್ದು ಕೇವಲ 35.50 ಕೋಟಿ ರೂ. ಕಾಲೇಜು ಆವರಣದಲ್ಲಿ ಕಾಲೇಜು ಕಟ್ಟಡ ಮಾತ್ರವಲ್ಲದೆ, ಪುರುಷರ ಮತ್ತು ಮಹಿಳೆಯರ ವಸತಿ ನಿಲಯ, ಪಶು ಆಸ್ಪತ್ರೆ ಹಾಗೂ ಗೆಸ್ಟ್‌ ಹೌಸ್‌ ಕೂಡ ನಿರ್ಮಾಣವಾಗುತ್ತಿದೆ. ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತಿರುವುದು ತೀರಾ ವಿಳಂಬವಾಗುತ್ತಿರುವುದರಿಂದ ಕಾಮಗಾರಿ ತಡವಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಬೇಕಿರುವ ಉಳಿದ ಹಣವನ್ನು ಶೀಘ್ರ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದ್ದಾರೆ.

ಪಶು ವೈದ್ಯರ ಕೊರತೆ
ರಾಜ್ಯದಲ್ಲಿ ಬೀದರ್‌, ಹಾಸನ, ಶಿವಮೊಗ್ಗ, ಬೆಂಗಳೂರು, ಗದಗ ಸೇರಿ ಒಟ್ಟು ಐದು ಜಿಲ್ಲೆಗಳಲ್ಲಿ ಪಶು ವೈದ್ಯಕೀಯ ಕಾಲೇಜುಗಳಿವೆ. ಇದೀಗ ಪುತ್ತ್ತೂರು ಮತ್ತು ಅಥಣಿಯಲ್ಲಿ ಕಾಲೇಜು ಆರಂಭಕ್ಕೆ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಈಗಾಗಲೇ ರಾಜ್ಯದಲ್ಲಿ ಪಶು ವೈದ್ಯರ ತೀವ್ರ ಕೊರತೆ ಇದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 25 ಪಶು ವೈದ್ಯರ ಹುದ್ದೆ ಇದ್ದು, ಸುಮಾರು 6 ಮಂದಿಯಷ್ಟೇ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಲೇಜು ಆರಂಭವಾದರೆ ವೈದ್ಯರ ಕೊರತೆ ನಿವಾರಣೆಯಾಗಬಹುದು.

Advertisement

2020ಕ್ಕೆ ಪೂರ್ಣ?
2018-19ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರೂ ಸಚಿವರನ್ನು ಒತ್ತಾಯಿಸಿದ್ದರು. ಆದರೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಇದು ಸಾಧ್ಯವಾಗುವುದಿಲ್ಲ. 2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಬೀದರ್‌ ಪಶು ವೈದ್ಯಕೀಯ ವಿಶ್ವ ವಿದ್ಯಾನಿಲಯದ ಮುಖಾಂತರ ಕರ್ನಾಟಕ ಹೌಸಿಂಗ್‌ ಬೋರ್ಡ್‌ನ ಉಸ್ತುವಾರಿಯಲ್ಲಿ ಈ ಕಾಲೇಜು ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

ಶೇ. 50 ಕಾಮಗಾರಿ ಪೂರ್ಣ
ಜಾಗ ಗುರುತಿಸುವಿಕೆ, ಟೆಂಡರ್‌ ಪ್ರಕ್ರಿಯೆ ಮುಂತಾದ ಕೆಲಸಗಳಿಂದಾಗಿ ಕೆಲಸ ಸ್ವಲ್ಪ ವಿಳಂಬವಾಗಿದೆ. ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, 5 ಕಟ್ಟಡಗಳಲ್ಲಿ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
-ಡಾ| ನಾರಾಯಣ ಭಟ್‌, ಕಾಲೇಜಿನ
ವಿಶೇಷ ಕರ್ತವ್ಯಾಧಿಕಾರಿ

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next